Spread the love

ಕಲ್ಪೋತ್ಸವದ ಬಗ್ಗೆ ಅಪಪ್ರಚಾರಕ್ಕೆ ಶಾಸಕರ ಬೇಸರ; ಅನಗತ್ಯ ಗೊಂದಲ ಸೃಷ್ಟಿಸದಂತೆ ಮನವಿ

ತಿಪಟೂರು: ತಾಲ್ಲೂಕು ಆಡಳಿತ ಸೌಧದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ 30 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ಲಿಫ್ಟ್ ಅಳವಡಿಸುವ ಕಾಮಗಾರಿಗೆ ಶಾಸಕ ಕೆ. ಷಡಕ್ಷರಿ ಶಿಲಾನ್ಯಾಸ ನೆರವೇರಿಸಿದರು.

ನಂತರ ತಾಲ್ಲೂಕು ಆಡಳಿತ ಸೌಧದ ನವೀಕೃತ ಸಭಾಂಗಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾಲ್ಲೂಕಿನ ಸಮಗ್ರ ಅಭಿವೃದ್ಧಿ ನನ್ನ ಕನಸಾಗಿದೆ. ಈ ನಿಟ್ಟಿನಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ತಾಲ್ಲೂಕು ಆಡಳಿತ ಸೌಧಕ್ಕೆ ಆಗಮಿಸುವ ವೃದ್ಧರು, ವಿಕಲಚೇತನರು ಸೇರಿದಂತೆ ಸಾರ್ವಜನಿಕರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಲಿಫ್ಟ್ ಅಳವಡಿಸುವ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.

ಇತ್ತೀಚಿನ ದಿನಗಳಲ್ಲಿ ಕೆಲವು ಪತ್ರಿಕೆಗಳು ಕಲ್ಪೋತ್ಸವದ ಕುರಿತು ಅಪಪ್ರಚಾರದಲ್ಲಿ ತೊಡಗಿರುವುದು ತೀವ್ರ ನೋವುಂಟು ಮಾಡಿದೆ. ಇಂತಹ ಅಪಪ್ರಚಾರದ ಕೃತ್ಯಗಳನ್ನು ಸಹಿಸುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಲ್ಪೋತ್ಸವವನ್ನು ಕಲಾಕೃತಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಪಾರದರ್ಶಕವಾಗಿ ಆಯೋಜಿಸಲಾಗುತ್ತಿದೆ. ಸಾರ್ವಜನಿಕರ ಸಹಕಾರದ ಜೊತೆಗೆ ಡಾ. ಶ್ರೀಧರ್ ನೇತೃತ್ವದ ತಂಡವೂ ಹೆಚ್ಚಿನ ಹಣವನ್ನು ವಿನಿಯೋಗಿಸಿದೆ. ಕಲ್ಪೋತ್ಸವಕ್ಕೆ ನಾನು ಸೇರಿದಂತೆ ತಾಲ್ಲೂಕು ಆಡಳಿತವೂ ಹೆಚ್ಚಿನ ಸಹಕಾರ ನೀಡುತ್ತಿದೆ. ಕಾರ್ಯಕ್ರಮ ಉತ್ತಮವಾಗಿ ನಡೆಯುವುದರ ಜೊತೆಗೆ ಜನರ ಮೆಚ್ಚುಗೆಗೂ ಪಾತ್ರವಾಗಿದೆ ಎಂದು ತಿಳಿಸಿದರು.

ಆದರೆ ಕೆಲವರು ಅನಗತ್ಯ ಗೊಂದಲಗಳನ್ನು ಸೃಷ್ಟಿಸಿ ಅಪಪ್ರಚಾರ ಮಾಡುತ್ತಿದ್ದಾರೆ. ಈ ಬಾರಿಯೂ ತಾಲ್ಲೂಕು ಆಡಳಿತದ ಸಹಕಾರ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಕಲ್ಪೋತ್ಸವವನ್ನು ಯಶಸ್ವಿಯಾಗಿ ಆಯೋಜಿಸಲಾಗುವುದು. ಆದ್ದರಿಂದ ಸಾರ್ವಜನಿಕರು ಅನಗತ್ಯ ಗೊಂದಲಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಮೋಹನ್ ಕುಮಾರ್, ಇಒ ಸುದರ್ಶನ್, ಪೌರಾಯುಕ್ತ ವಿಶ್ವೇಶ್ವರ ಬದರಗಡೆ, ಗ್ಯಾರಂಟಿ ಸಮಿತಿ ಅಧ್ಯಕ್ಷ ಮಡೇನೂರು ಕಾಂತರಾಜು, ಡಿವೈಎಸ್ಪಿ ಉಮೇಶ್, ಪ್ರಭಾರ ಉಪವಿಭಾಗಾಧಿಕಾರಿ ಶಿವಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವರದಿ :ಮಂಜುನಾಥ್ ಹಾಲ್ಕುರಿಕೆ

error: Content is protected !!