ತಿಪಟೂರು : ತಾಲ್ಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪೂರಕ ಪೌಷ್ಠಿಕ ಆಹಾರ ವಿತರಣೆಯ ಕಾರ್ಯಕ್ರಮವನ್ನು ಶಾಸಕ ಕೆ.ಷಡಕ್ಷರಿ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ಆವರಣದಲ್ಲಿ ಉದ್ಘಾಟಿಸಿದರು.

ನಂತರ ಮಾತನಾಡಿ ಗಣಿಬಾಧಿತ ಪ್ರದೇಶಗಳ ವ್ಯಾಪ್ತಿಯಲ್ಲಿ ನಮ್ಮ ತಾಲ್ಲೂಕಿಗೆ ಮೂರು ವರ್ಷಗಳಿಗೆ ಈ ಯೋಜನೆ ಅನುಷ್ಟಾನಗೊಂಡಿದ್ದು ಮಕ್ಕಳಿಗೆ ಬಿಸಿಯೂಟದ ಜೊತೆಗೆ ಪೌಷ್ಠಿಕಾಂಶದ ಕೊರತೆಯನ್ನು ಪ್ರತಿ ದಿನ ಸಂಜೆ ಕಡಲೆಕಾಳು/ಹೆಸರುಕಾಳು/ಶೇಂಗಾ ಉಸಲಿ ಶನಿವಾರ ಸ್ಥಳೀಯವಾಗಿ ಋತುಮಾನಕ್ಕೆ ಅನುಗುಣವಾಗಿ ದೊರೆಯುವ ಹಣ್ಣಿನ ಪೂರಕ ಪೌಷ್ಠಿಕ ಆಹಾರ ವಿತರಣೆ ಸರ್ಕಾರದ ಮಹತ್ವದ ಯೋಜನೆಯಾಗಿರುತ್ತದೆ. ಇದರ ಸದುಪಯೋಗವನ್ನು ಸರ್ಕಾರಿ ಶಾಲೆಯ ಎಲ್ಲಾ ಮಕ್ಕಳು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಈ ಸಮಾರಂಭದಲ್ಲಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಸುದರ್ಶನ್, ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಮಣಿ, ಜಿಲ್ಲಾ ಪಂಚಾಯತ್ ಶಿಕ್ಷಣಾಧಿಕಾರಿ ಸುಧಾಕರ್, ಪ್ರಭಾರಿ ಸಹಾಯಕ ನಿರ್ದೇಶಕರು ಪದ್ಮರಾಜು, ಕ್ಷೇತ್ರ ಸಮನ್ವಯಾಧಿಕಾರಿ ಉಮೇಶ್‌ಗೌಡ, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಚನ್ನಗೌಡ.ಎಂ.ಎಸ್. ದಕ್ಷಿಣಮೂರ್ತಿ, ಜಯರಾಂ ಹಾಗೂ ಶಿಕ್ಷಣ ಸಂಯೋಜಕರು, ಶಾಲಾ ಶಿಕ್ಷಕರು, ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿನಿಯರು ಹಾಜರಿದ್ದರು.
ವರದಿ:ಮಂಜುನಾಥ್ ಹಾಲ್ಕುರಿಕೆ










