Spread the love

ತಿಪಟೂರುತಾಲ್ಲೋಕಿನ ಹೊನ್ನವಳ್ಳಿ ಹೋಬಳಿ
ಬೊಮ್ಮಲಾಪುರ ಗ್ರಾಮದ ರೈತರಾದ ಶ್ರೀ ವಸಂತಕುಮಾರ್‌ ರವರ ತೋಟದಲ್ಲಿ ತೆಂಗಿನಲ್ಲಿ ಕೀಟ ಮತ್ತು ರೋಗ ನಿರ್ವಹಣೆ ಅರಿವು ಮೂಡಿಸಲು ರೈತರ ತೋಟದಲ್ಲಿಹಮ್ಮಿಕೊಂಡಿದ್ದ ಕಾರ್ಯಗಾರವನ್ನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಶ್ರೀ ಹೆಚ್. ಆರ್. ಚಂದ್ರಶೇಖರ್‌ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ದಿನೇ ದಿನೆ ಬದಲಾಗುತ್ತಿರುವ ಹವಾಮಾನ ವೈಪರಿತ್ಯದ ಕಾರಣಗಳಿಂದ ತೆಂಗು ಬೆಳೆಯಲ್ಲಿ ಕೀಟ ಮತ್ತು ರೋಗ ಬಾಧೆಗಳು ಉಲ್ಬಣಿಸಿದ್ದು ಇಳುವರಿ ಕುಂಠಿತವಾಗಿದೆ.ಪ್ರಸ್ತುತ ಮಾರುಕಟ್ಟೆಯಲ್ಲಿ ಕೊಬ್ಬರಿ ದರ ಏರಿಕೆಆಗಿರುವುದು ಇದಕ್ಕೆ ಹಿಡಿದ ಕೈಗನ್ನಡಿಯಾಗಿದೆ,ಕಳೆದ ಸಾಲಿನಲ್ಲಿ ಮಾರುಕಟ್ಟೆಯಲ್ಲಿ ದರ ಕಡಿಮೆಯಾಗಿ ಸರಕಾರ ಬೆಂಬಲ ಬೆಲೆ ನೀಡಿ ಖರೀದಿಸುವಂತಾಗಿತ್ತಲ್ಲದೆ, ಪ್ರಸ್ತುತ ದರ ಏರಿಕೆಯಾದರೂ ರೈತರು ಕೊಬ್ಬರಿ ಉತ್ಪನ್ನ ಇಲ್ಲದೆ ಕೈ ಕೈ ಹಿಸುಕಿಕೊಳ್ಳುವ ಪರಿಸ್ಥಿತಿ ಎದುರಾಗಿದೆ.


ಇಂತಹ ಸಂದರ್ಭದಲ್ಲಿ ಇಲಾಖೆಯ ಯೋಜನೆಗಳು, ಉತ್ತಮ ಬೇಸಾಯ ಕ್ರಮಗಳು, ಅಂತರಬೆಳೆ ಬೆಳೆಯಲು ಪ್ರೋತ್ಸಾಹ, ಹನಿ ನೀರಾವರಿ, ತಾಂತ್ರಿಕ ಮಾಹಿತಿ ಅರಿವು ಮೂಡಿಸುವ ಕಾರ್ಯಕ್ರಮ, ರೈತರ ತೋಟದಲ್ಲೇ ಪ್ರಾಯೋಗಿಕವಾಗಿ ರೋಗ ಮತ್ತು ಕೀಟ ನಿರ್ವಹಣೆಯಂತಹ ಗುಂಪು ಚರ್ಚೆ ಮತ್ತು ಕ್ಷೇತ್ರ ಭೇಟಿ ಮೂಲಕ ರೈತರೊಂದಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಲಾಗುತ್ತಿದೆ. ಹಾಗೂಇಲಾಖೆ ಕೀಟ ಮತ್ತು ರೋಗಗಳನ್ನು ತಡೆಗಟ್ಟುವ ಅರಿವು ಮೂಡಿಸುವಲ್ಲಿ ಇಲಾಖೆ ಸನ್ನದ್ದವಾಗಿದೆ ಎಂದು ವಿವರಿಸಿದರು.


ಇಲಾಖೆಯ ಅಧಿಕಾರಿಗಳಿಂದ ಈಗಾಗಲೇ ವಿವಿಧ ಗ್ರಾಮಗಳಲ್ಲಿ ಅಂದರೆ, ರಂಗಾಪುರ, ಅನಗೊಂಡನಹಳ್ಳಿ, ಕೆರೆಗೋಡಿ, ಪರುವಗೊಂಡನಹಳ್ಳಿ, ಬ್ಯಾಡರಹಳ್ಳಿ, ಆದಿನಾಯಕನಹಳ್ಳಿ, ಹಾಲ್ಕುರಿಕೆ, ಬಿದರೆಗುಡಿ ಕಾವಲು, ಬೊಮ್ಮಲಾಪುರ, ಹಿಂಡಿಸ್ಕೆರೆ, ಭೈರಾಪುರ ಮತ್ತು ಕರಡಾಳು ಗ್ರಾಮಗಳಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಾಹಿತಿ ನೀಡಲಾಗಿದೆ.ಮತ್ತು ಇನ್ನುಳಿದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅರಿವು ಮೂಡಿಸುವ ಕಾರ್ಯಾಗಾರ ಹಮ್ಮಿಕೊಳ್ಳಲು ಯೋಜಿಸಲಾಗಿದೆ ಎಂದು ವಿವರಿಸಿದರು.
ಮುಂಗಾರು ಆರಂಭದ ಸಮಯದಲ್ಲಿ ಪ್ರತಿ ಮರಕ್ಕೆ ಟ್ರೈಕೋಡರ್ಮಾ ಜೈವಿಕ ನಿಯಂತ್ರಕ ಉಪಚರಿಸಿದ ೨೫ ಕೆ. ಜಿ. ಕೊಟ್ಟಿಗೆ ಗೊಬ್ಬರ ಮತ್ತು ಪ್ರತೀ ಮರಕ್ಕೆ 05 ಕೆ. ಜಿ ಬೇವಿನ ಹಿಂಡಿ ನೀಡುವುದರಿಂದ ಮಣ್ಣಿನಲ್ಲಿರುವ ರೋಗಕಾರಕ ಶಿಲೀಂದ್ರಗಳನ್ನು ನಿಯಂತ್ರಿಸಬಹುದು. ಮುಂಗಾರಿನಲ್ಲಿ ಶಿಫಾರಸ್ಸಿನಂತೆ ರಾಸಾಯನಿಕ ಗೊಬ್ಬರ 600:250:700 ಗ್ರಾಂ ಪ್ರತಿ ಮರಕ್ಕೆ ಹಾಗೂ ಹಿಂಗಾರಿನಲ್ಲಿ 700:450:1300 ಗ್ರಾಂ ಪ್ರತಿ ಮರಕ್ಕೆ ಅಮೊನಿಯಂ ಸಲ್ಫೇಟ: ಡಿ.ಎ.ಪಿ: ಪೊಟ್ಯಾಶ್‌ ನೀಡುವುದರಿಂದ ಪೋಷಕಾಂಶ ನಿರ್ವಹಣೆ ಮಾಡಬಹುದು, ಹರಳು ಉದುರುವ ಲಕ್ಷಣಗಳು ಗೋಚರಿಸಿದಲ್ಲಿ ಮರಕ್ಕೆ ಸೂಕ್ಷ್ಮ ಪೋಷಕಾಂಶದ ಕೊರತೆಯಾಗಿದ್ದು, ಪ್ರತೀ ಮರಕ್ಕೆ ಐವತ್ತು ಗ್ರಾಂ ನಂತೆ ಜಿಂಕ್‌ ಮತ್ತು ಬೋರಾನ್‌ ಒದಗಿಸುವುದು ಸೂಕ್ತ. ಅದಲ್ಲದೇ ಹಸಿರೆಲೆ ಗೊಬ್ಬರಗಳಾದ ದಯಾಂಚಾ, ಹುರುಳಿ ಅಥವಾ ವೆಲ್ವೆಟ್‌ ಬೀನ್ಸ್ ಬೆಳೆದು ಮಣ್ಣಿಗೆ ಸೇರಿಸುವುದರಿಂದ ಪೋಷಕಾಂಶ ನಿರ್ವಹಣೆ ಮಾಡಬಹುದು.
ತೆಂಗಿನಲ್ಲಿ ಪ್ರಮುಖವಾಗಿ ಶಿಲೀಂದ್ರಗಳಿಂದ ಭಾದಿಸುವ ಅಣಬೆ ರೋಗ, ಕಾಂಡ ಸೋರುವ ರೋಗದಿಂದಾಗಿ ಕಾಂಡಗಳ ಮೇಲೆ ರಸ ಸೋರುವುದು ಹಾಗೂ ಗರಿಗಳು ನೇತಾಡುವ ಲಕ್ಷಣಗಳು ಕಂಡು ಬಂದಲ್ಲಿ ಹೆಕ್ಸಾಕೊನಾಜೋಲ್‌ 3-5 ಮಿ. ಲೀ ಪ್ರತೀ 100 ಮಿಲೀ ಅಥವಾ 3 ಮಿ. ಲೀ ಟ್ರೇಡೆಮಾರ್ಫ ನೀರಿಗೆ ಬೆರೆಸಿ ಮೂರು ತಿಂಗಳಿಗೊಮ್ಮೆ ಬೇರಿಗೆ ಕುಡಿಸುವ ಉಪಚಾರ ಮಾಡುವುದರಿಂದ ರೋಗ ಹತೋಟಿ ಮಾಡಬಹುದು.


ಕೀಟ ಬಾಧೆಗಳಲ್ಲಿ ಪ್ರಮುಖವಾಗಿ ಬಿಳಿ ನೊಣದ ಬಾಧೆ ಉಲ್ಬಣಿಸಿದ್ದು ಗರಿಗಳ ಕೆಳ ಭಾಗದಲ್ಲಿ ಈ ಕೀಟ ಆಶ್ರಯಿಸುವುದರಿಂದ ತಿಳಿಬಿಳಿ ಬಣ್ಣದಿಂದ ಕೂಡಿದ್ದು.ಗರಿಗಳಿಂದ ರಸ ಹೀರಿದ ಕೀಟದ ದ್ರವರೂಪದ ಮಲ ವಿಸರ್ಜನೆ ಮೇಲೆ ಕಪ್ಪು ಶಿಲೀಂದ್ರ ಆಶ್ರಯಿಸುವುದರಿಂದ ಎಲೆಗಳ ಮೇಲ್ಬಾಗದಲ್ಲಿ ಕಪ್ಪುಮಸಿ ಲೇಪಿಸಿದಂತೆ ಭಾಸವಾಗುವುದು. ಸಸ್ಯದ ಆಹಾರ ಉತ್ಪಾದನೆ ಮೇಲೆ ಪರಿಣಾಮ ಬೀರಿ ಗಿಡದ ಬೆಳವಣಿಗೆ ಕುಂಠಿತವಾಗುವುದು ಆದರೆ ಈ ಕೀಟವೂ ನಿಸರ್ಗದಲ್ಲಿ ಸಾಮಾನ್ಯವಾಗಿದ್ದು, ಬೇಸಿಗೆಯಲ್ಲಿ ಸಸಿಗಳಿಗೆಅಗತ್ಯವಿರುವುದಿಲ್ಲ,ರೈತರು ಆತಂಕ ಪಡುವ ಅಗತ್ಯವಿರುವುದಿಲ್ಲ ಪ್ರಸುತ ಮಳೆಗಾಲ ಆರಂಭವಾಗಿರುವುದರರಿಂದ ಮಳೆ ನೀರಿಗೆ ಕಪ್ಪು ಮಸಿ ಸಹಜವಾಗಿಯೇ ನಿಯಂತ್ರಣವಾಗುವುದು.ಮತ್ತು ಬಿಳಿ ನೊಣಗಳ ಸಂತತಿ ಕೂಡ ನಿಯಂತ್ರಣದಲ್ಲಿರುತ್ತದೆ. ಬಾಧೆ ಅಧಿಕವೆಣಿಸಿ ತೆಂಗಿನ ಸಸಿ ಗರಿಗಳು ಕೈಗೆಟುಕುವ ಮಟ್ಟ/ ಏಣಿಯಿಂದ ತಲುಪಲು ಸಾಧ್ಯವಾಗುವ ಮಟ್ಟಿಗೆ ಇದ್ದರೆ ಮಾತ್ರ ಬೇವಿನ ಎಣ್ಣೆ 3 ಮಿ. ಲೀ ಪ್ರತಿ ಲೀಟರ್‌ ನೀರಿಗೆ ಬೆರೆಸಿ ಪೆಟ್ರೋಲ್‌ ಆಪರೆಟೇಡ್‌ ಪವರ್ ಸ್ಪ್ರೇಯರ್‌ ಬಳಸಿ ಸಿಂಪಡನೆ ಮಾಡಿ ನಿಯಂತ್ರಿಸಬಹುದು ಅಥವಾ ದೊಡ್ಡ ಮರಗಳಾಗಿದ್ದಲ್ಲಿ ಬೇವಿನ ಹಿಂಡಿ ಉಪಚಾರದಿಂದ ಕೀಟಬಾಧೆಯನ್ನು ನಿಯಂತ್ರಿಸಬಹುದು. ಇನ್ನುಳಿದಂತೆ ಕೆಂಪು ಮೂತಿ ಹುಳು ಹಾಗೂ ರೈನೋಸಿರಾಸ್‌ ಹುಳುವಿನ ಬಾಧೆ ಕಂಡುಬಂದಲ್ಲಿ ಎಕರೆಗೆ ಎರಡರಂತೆ ಮೋಹಕ ಬಲೆ ಅಳವಡಿಸಿ ನಿಯಂತ್ರಿಸಬಹುದು. ಸಾಮಾನ್ಯವಾಗಿ ಕಪ್ಪು ತಲೆ ಹುಳುವಿನ ಬಾಧೆ ನಿಯಂತ್ರಣದಲ್ಲಿದ್ದು ಇಲಾಖಾ ಪ್ರಯೋಗ ಶಾಲೆಯಲ್ಲಿ ಗೋನಿಯೋಜಸ್‌ ಪರೋಪ ಜೀವಿಗಳನ್ನು ಉತ್ಪಾದಿಸಿ ಕಾಲಕಾಲಕ್ಕೆ ಉಚಿತವಾಗಿ ಕಪ್ಪು ತಲೆ ಹುಳು ಬಾಧಿತ ರೈತರ ತೋಟಗಳಲ್ಲಿ ಬಿಡುಗಡೆ ಮಾಡುತ್ತಿರುವುದರಿಂದ ಕೀಟ ಬಾಧೆ ನಿಯಂತ್ರಣದಲ್ಲಿದೆ.
ರೈತರು ಆಸಕ್ತಿ ವಹಿಸಿದಲ್ಲಿ ತೆಂಗಿನಲ್ಲಿ ಅಂತರ ಬೆಳೆಗಳಾಗಿ ಕಾಳು ಮೆಣಸು ಮತ್ತು ಕೊಕೊ ಮತ್ತು ಅಡಿಕೆ ಹೊರತು ಪಡಿಸಿ ಇನ್ನಿತರೆ ಹಣ್ಣಿನ ಬೆಳೆಗಳನ್ನು ಬೆಳೆಯಲು ಮಹಾತ್ಮಾ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸಹಾಯಧನ ಒದಗಿಸಲಾಗುವುದು. ಇನ್ನೂ ಹೆಚ್ಚಿನ ಮಾಹಿತಿಗೆ ರೈತರು ತೋಟಗಾರಿಕೆ ಇಲಾಖೆಗೆ ಸಂಪರ್ಕಿಸಬಹುದು.
ಕಾರ್ಯಕ್ರಮದಲ್ಲಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಹೆಚ್.ಆರ್. ಚಂದ್ರಶೇಖರ್ ರವರು, ಸಹಾಯಕ ತೋಟಗಾರಿಕೆ ಅಧಿಕಾರಿಗಳಾದ ಡಾ. ಮಲ್ಲಿಕಾರ್ಜುನ ಹೆಬ್ಬಾಳ, ಶಮಂತಾ ಟಿ. ಆರ್. ಹಾಗೂ ರೈತ ಉತ್ಪಾದಕ ಕಂಪನಿಯ ಶ್ರೀ ದಯಾನಂದಸ್ವಾಮಿ, ವಸಂತಕುಮಾರ್‌ ಮತ್ತು ಇತರೆ ರೈತ ಸದಸ್ಯರುಗಳು ಹಾಗೂ ಬೊಮ್ಮಲಾಪುರ ಗ್ರಾಮದ ಸುತ್ತಮುತ್ತಲಿನ ರೈತರು ಹಾಜರಿದ್ದರು.

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!