ತಿಪಟೂರು:ಅಕ್ಟೋಬರ್ 11 ನಗರದ ಕಾಮಗಾರಿಗಳ ಬಿಲ್ ಮಂಜೂರು ಮಾಡಿಕೊಡಲು 47,500 = 00 ರೂ ಲಂಚ ಸ್ವೀಕರಿಸುತ್ತಿದ್ದ ತಿಪಟೂರು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸ್ವಾಮಿ.ಬಿ.ಸಿ , ಸಹಾಯಕ ಇಂಜಿನಿಯರ್ ಸುಹಾಸ್ ಮತ್ತು ಕಂಪ್ಯೂಟರ್ ಅಪರೇಟರ್ ಹರೀಶ್ ಲೋಕಾಯಕ್ತ ಬಲೆಗೆ ಬಿದ್ದಿದ್ದಾರೆ.

ಶಿವಮೊಗ್ಗ ಜಿಲ್ಲೆ , ಹೊಸನಗರ ವಾಸಿಯಾದ ಪಿರ್ಯಾದಿ ಶ್ರೀ ಸುನಿಲ್.ಎಸ್ ರವರು ಗುತ್ತಿಗೆದಾರರಾಗಿದ್ದು , ತುಮಕೂರು ಜಿಲ್ಲೆ ತಿಪಟೂರಿನ ಗಾಂಧಿನಗರದ ಉರ್ದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಕನ್ನಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡಗಳ ರಿಪೇರಿ ಕಾಮಗಾರಿಗಳನ್ನು ನಿರ್ವಹಿಸಿರುತ್ತಾರೆ . ಉರ್ದು ಶಾಲೆ ರಿಪೇರಿ ಕಾಮಗಾರಿಯ ಬಿಲ್ 3,41,000 = 00 ರೂ ಮತ್ತು ಕನ್ನಡ ಶಾಲೆ ರಿಪೇರಿ ಕಾಮಗಾರಿಯ 3,09,046 = 00 ರೂಗಳನ್ನು ಮಂಜೂರು ಮಾಡಿಕೊಡಲು ತಿಪಟೂರು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸ್ವಾಮಿ.ಬಿ.ಸಿ , ಸಹಾಯಕ ಇಂಜಿನಿಯರ್ ಸುಹಾಸ್ ಮತ್ತು ಕಂಪ್ಯೂಟರ್ ಅಪರೇಟರ್ ಹರೀಶ್ ರವರುಗಳು 47,500 = 00 ರೂಗಳ ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ .
ಪಿರ್ಯಾದಿ ಶ್ರೀ ಸುನಿಲ್.ಎಸ್ ರವರಿಗೆ ಲಂಚ ನೀಡಲು ಇಷ್ಟವಿಲ್ಲದೇ , ದಿನಾಂಕ : 11/11/2025 ರಂದು ತುಮಕೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದು , ಪೊಲೀಸ್ ನಿರೀಕ್ಷಕರಾದ ಶ್ರೀ ಕೆ.ಸುರೇಶ ರವರು ಠಾಣಾ ಮೊ.ನಂ : 10/2025 ಕಲಂ -7 ( 3 ) ಭ್ರಷ್ಟಾಚಾರ ಪ್ರತಿಬಂಧ ಕಾಯ್ದೆ -1988 ( ತಿದ್ದುಪಡಿ -2018 ) ರಂತೆ ಪ್ರಕರಣ ದಾಖಲಿಸಿ , ತನಿಖೆ ಕೈಗೊಂಡಿರುತ್ತಾರೆ .

ಇದೇ ದಿನ ದಿನಾಂಕ : 11/11/2025 ರಂದು ಟ್ರ್ಯಾಪ್ ಕಾರ್ಯಾಚರಣೆ ವೇಳೆ ಬೆಳಿಗ್ಗೆ 07.47 ಗಂಟೆಯಲ್ಲಿ ಸಹಾಯಕ ಇಂಜಿನಿಯರ್ ಆದ ಆರೋಪಿ -2 ಸುಹಾಸ್ ರವರಿಗೆ ಸಂಬಂಧಿಸಿದ 13,000 = 00 ರೂ ಲಂಚವನ್ನು ಆರೋಪಿ -3 ಹರೀಶ್ , ಕಂಪ್ಯೂಟರ್ ಅಪರೇಟರ್ ರವರು ಗೂಗಲ್ ಪೇ ಮೂಲಕ ಹಾಕಿಸಿಕೊಂಡಿರುತ್ತಾರೆ . ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಆದ ಆರೋಪಿ -1 ಸ್ವಾಮಿ.ಬಿ.ಸಿ ರವರು ಬೆಳಿಗ್ಗೆ 09.50 ಗಂಟೆ ಸಮಯದಲ್ಲಿ ತುಮಕೂರು ನಗರದ ಪರಿವೀಕ್ಷಣಾ ಮಂದಿರದಲ್ಲಿ 34,500 = 00 ರೂಗಳನ್ನು ಪಿರ್ಯಾದಿಯಿಂದ ನೇರವಾಗಿ ಸ್ವೀಕರಿಸುವಾಗ ಟ್ರಾಪ್ ಆಗಿದ್ದು , ತನಿಖಾಧಿಕಾರಿ ಶ್ರೀ ಕೆ.ಸುರೇಶ , ಪೊಲೀಸ್ ನಿರೀಕ್ಷಕರು ರವರ ನೇತೃತ್ವದ ತಂಡ ವಶಕ್ಕೆ ಪಡೆದಿರುತ್ತದೆ .
ತುಮಕೂರು ಲೋಕಾಯುಕ್ತ ಘಟಕದ ಪೊಲೀಸ್ ಅಧೀಕ್ಷಕರಾದ ಲಕ್ಷ್ಮೀನಾರಾಯಣ.ಎ.ವಿ ರವರ ಮಾರ್ಗದರ್ಶನದಲ್ಲಿ , ಪೊಲೀಸ್ ಉಪಾಧೀಕ್ಷಕರಾದ ಡಾ.ಸಂತೋಷ್.ಕೆ.ಎಂ ರವರ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರುಗಳಾದ ಶ್ರೀ ಕೆ.ಸುರೇಶ , ಶ್ರೀ ಬಿ.ಮೊಹಮ್ಮದ್ ಸಲೀಂ ಮತ್ತು ಶ್ರೀ ರಾಜು.ಟಿ ಹಾಗೂ ಸಿಬ್ಬಂದಿಗಳ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು , ಲಂಚ ಸ್ವೀಕರಿಸಿದ್ದ ಮೂರು ಜನ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದು. ತನಿಖೆ ಕೈಗೊಂಡಿರುತ್ತಾರೆ .
ವರದಿ:ಮಂಜುನಾಥ್ ಹಾಲ್ಕುರಿಕೆ









