Spread the love

ತಿಪಟೂರು: ತೆಂಗಿನ ಸೀಮೆಯ ವಿಶಿಷ್ಟತೆ, ಸಂಸ್ಕೃತಿ, ಸಮುದಾಯ ಸ್ಫೂರ್ತಿ ಹಾಗೂ ಜನ ಜೀವನದ ಸೊಗಡನ್ನು ಬಿಂಬಿಸುವ ಮೂರು ದಿನಗಳ ಕಲ್ಪೋತ್ಸವ ವೈಭವ 2025 ಕಿಕ್ಕಿರಿದ ಜನಸಾಗರದ ನಡುವೆ ಬುಧವಾರ ಚಾಲನೆಗೊಂಡಿತು.

ತಿಪಟೂರು ಹಾಗೂ ಆಸುಪಾಸಿನ ಪ್ರದೇಶದ ಸಾಂಸ್ಕೃತಿಕ ಹಾಗೂ ಸಾಮಾಜಿಕ ಉನ್ನತಿಯನ್ನು ಗಮನದಲ್ಲಿರಿಸಿಕೊಂಡು ವೈದ್ಯರು ಹಾಗೂ ಸಮಾಜ ಸೇವಾಸಕ್ತಾರಾದ ಡಾ.ಜಿ ಎಸ್ ಶ್ರೀಧರ್ ಅವರು ಈ ಮಹತ್ವದ ಪರಿಕಲ್ಪನೆಯ ಕಾರ್ಯಕ್ರಮದ ಹಿಂದಿನ ಪ್ರಮುಖ ವ್ಯಕ್ತಿಯಾಗಿದ್ದಾರೆ.

ತಾಲೂಕು ಆಡಳಿತ, ಕಲಾಕೃತಿ ಕಲ್ಪೋತ್ಸವ ಸಮಿತಿ, ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕನ್ನಡಪರ ಸಂಘಟನಗಳ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ತಿಪಟೂರಿನ ಸಾಂಸ್ಕೃತಿಕ ಅಸ್ಮಿತೆಯನ್ನು ಸದೃಢಗೊಳಿಸುವ, ಯುವ ಜನತೆಯ ಆಕಾಂಕ್ಷೆಗಳನ್ನು ಉನ್ನತಗೊಳಿಸುವ, ಮಹಿಳೆಯರನ್ನು ಸಬಲಗೊಳಿಸುವ ಹಾಗೂ ರೈತ ಸಮುದಾಯವನ್ನು ಕೇಂದ್ರೀಕರಿಸಿದ ಜನಸಮುದಾಯದ ಹಬ್ಬ ಇದಾಗಿದೆ.

ಡಾ. ಶ್ರೀಧರ್ ಅವರ ದೃಢಸಂಕಲ್ಪದಿಂದಾಗಿ ಕಲ್ಪೋತ್ಸವವು ಅಧಿಕೃತವಾಗಿ ಇಡೀ ತಾಲೂಕಿನ ಕಾರ್ಯಕ್ರಮವಾಗಿ ಮಾರ್ಪಟ್ಟಿದೆ. ಸರ್ವಪಕ್ಷಗಳ ಜನಪ್ರತಿನಿಧಿಗಳು, ಧಾರ್ಮಿಕ ಗುರುಗಳು, ಸಾಂಸ್ಕೃತಿಕ ತಂಡಗಳು ಹಾಗೂ ಹತ್ತಾರು ಸಾವಿರ ಜನರು ಕಲೆತು ಸಂಭ್ರಮಿಸುವ ಉತ್ಸವವಾಗಿದೆ. ಡಾ. ಶ್ರೀಧರ್ ಅವರ ಉದ್ದೇಶ ಸ್ಪಷ್ಟವಾಗಿದೆ: ತಿಪಟೂರಿನ ಅಸ್ಮಿತೆಯನ್ನು ಸಾರುವ ಕಲೆ ಹಾಗೂ ಪರಂಪರೆಯನ್ನು ಸಂಭ್ರಮಿಸುವುದೇ ಅವರ ಆಶಯವಾಗಿದೆ. ಅದು ಈ ಕಲ್ಪೋತ್ಸವದಲ್ಲಿ ಅಪೂರ್ವ ಭವ್ಯತೆಯೊಂದಿಗೆ ಹಾಗೂ ಬೃಹತ್ ಜನಸ್ತೋಮದ ಪಾಲ್ಗೊಳ್ಳುವಿಕೆಯೊಂದಿಗೆ ಹೊಸ ಮಜಲಿಗೆ ಏರಿದೆ.

ಮೊದಲನೇ ದಿನದ ಕಾರ್ಯಕ್ರಮವು ಅದ್ದೂರಿಯಾಗಿ ಆರಂಭಗೊಂಡು ಜನರನ್ನು ಸೆಳೆಯಿತು. ಸನ್ಮಾನ್ಯ ಶಾಸಕರಾದ ಶ್ರೀ ಕೆ.ಷಡಕ್ಷರಿ ಅವರು ಶ್ರೀ ಶ್ರೀ ಶ್ರೀ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮೀಜಿ ಮತ್ತು ಶ್ರೀ ಚಂದ್ರಶೇಖರನಾಥ ಮಹಾಸ್ವಾಮೀಜಿ ಅವರ ದಿವ್ಯ ಉಪಸ್ಥಿತಿಯಲ್ಲಿ ಉದ್ಘಾಟನೆ ನೆರವೇರಿಸಿದರು. ಮಹಿಳೆಯರ ಬೈಕ್ ರಾಲಿಯು ವಿದ್ಯುತ್ ಸಂಚಲನ ಸೃಷ್ಟಿಸುವ ಮೂಲಕ ಮಹಿಳೆಯರ ಧೈರ್ಯದ ಜೊತೆಗೆ ಎಲ್ಲರ ಒಳಗೊಳ್ಳುವಿಕೆಯನ್ನು ಸಂಕೇತಿಸಿತು. ದಿಟ್ಟತನಕ್ಕೆ ಹೆಸರಾದ ತಾಲ್ಲೂಕಿನ ಸಾಂಸ್ಕೃತಿಕ ಹೆಗ್ಗುರುತನ್ನೂ ಸೂಚಿಸಿತು.

ವಿವಿಧ ಪ್ರದರ್ಶನಗಳು, ವಿದ್ಯಾರ್ಥಿ ಚಟುವಟಿಕೆಗಳು, ವೇದಿಕೆ ಕಾರ್ಯಕ್ರಮಗಳು ಹಾಗೂ ಸಂಗೀತ ಕಾರ್ಯಕ್ರಮಗಳು ನೆರೆದವರನ್ನು ರಂಜಿಸಿದವು. ಪಟ್ಟಣದಲ್ಲಿ ಇದೇ ಮೊದಲ ಬಾರಿಗೆ ನಡೆದ ಹೆಲಿಕಾಪ್ಟರ್ ರೈಡ್ ಪ್ರಮುಖ ಆಕರ್ಷಣೆಗಾಗಿ ಸೂಜಿಗಲ್ಲಿನಂತೆ ಸೆಳೆಯಿತು. ಈ ಮೂಲಕ ಇದು ಯುವಜನತೆಯ ಆಕಾಂಕ್ಷೆ ಹಾಗೂ ಪ್ರಗತಿಯನ್ನು ಸೂಚಿಸಿತು. ನಾವೀನ್ಯತೆಗಳು, ರೈತರ ಯಶೋಗಾಥೆಗಳು ಹಾಗೂ ತೆಂಗಿನಕಾಯಿ ಬೆಳೆಯುವುದರಲ್ಲಿ ತಿಪಟೂರಿನ ಜಾಗತಿಕ ಮಹತ್ವವನ್ನು ಬಿಂಬಿಸಿತು.

ಸಾಂಸ್ಕೃತಿಕ ಕಾರ್ಯಕ್ರಮಗಳು ನಿರೀಕ್ಷೆಗೂ ಮೀರಿ ಜನರನ್ನು ಸೆಳೆದವು. ಸರಿಗಮಪ ತಂಡದ ಸಂಗೀತ ಸುಧೆ, ರಾಜೇಶ್ ಕೃಷ್ಣನ್ ಅವರ ಸುಮಧುರ ಸಂಜೆ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ತಂಡದ ಮಿಮಿಕ್ರಿ ಹಾಗೂ ನೃತ್ಯ, ಅನುಶ್ರೀ ನಿರೂಪಣೆಯಲ್ಲಿ ಹೇಮಂತ್ ಹಾಗೂ ಸರಿಗಮಪ ಗಾಯಕರು ನಡೆಸಿಕೊಟ್ಟ ಸುಶ್ರಾವ್ಯ ರಸಮಂಜರಿಗಳು ಶ್ರೋತೃಗಳ ಮನಸ್ಸನ್ನು ಸೂರೆಗೊಂಡವು. ಕುಟುಂಬಗಳಾದಿಯಾಗಿ ಯುವಜನತೆ ಹಾಗೂ ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ಇದೊಂದು ಜನಸಮುದಾಯದ ಕಾರ್ಯಕ್ರಮ ಎಂಬುದಕ್ಕೆ ಕನ್ನಡಿ ಹಿಡಿಯಿತು.

ಎರಡನೇ ಹಾಗೂ ಮೂರನೇ ದಿನಗಳಂದು ಜನಪದ ಕಲಾತಂಡಗಳ ಮೆರವಣಿಗೆಗಳು, ಸಾಂಪ್ರದಾಯಿಕ ಕಲೆಗಳ ಪ್ರದರ್ಶನ, ಸಮೂಹ ಸ್ಪರ್ಧೆಗಳು, ವಿವಿಧ ಕ್ರೀಡೆಗಳು, ಮಕ್ಕಳ ಸಾಹಿತ್ಯ ಚಟುವಟಿಕೆಗಳು ಹಾಗೂ ಸಂಗೀತ ಸಂಜೆಗಳು ಮುಂದುವರಿಯಲಿವೆ. ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮತ್ತು ಕಲಾಕೃತಿ ಅಧ್ಯಕ್ಷ ಡಾ.ಜಿ.ಎಸ್.ಶ್ರೀಧರ್ ಅವರ ಉಪಸ್ಥಿತಿಯಲ್ಲಿ ನ.21ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಹೆಸರಾಂತ ಕನ್ನಡ ಸಿನಿಮಾ ನಟಿ ಶ್ರೀಮತಿ ಉಮಾಶ್ರೀ ಅವರಿಗೆ ‘ಕಲ್ಪತರು ರತ್ನ’ ಪ್ರಶಸ್ತಿ ಪ್ರದಾನ ನೆರವೇರಲಿದೆ.

ಶಾಸಕರುಗಳು, ಸಂಸದರು, ಸ್ವಾಮೀಜಿಗಳು, ಮಹಿಳಾ ತಂಡಗಳು, ಕೃಷಿಕರು ಹಾಗೂ ಹತ್ತಾರು ಸಾವಿರ ಜನರ ಪಾಲ್ಗೊಳ್ಳುವಿಕೆಯಿಂದ ಜರುಗಲಿರುವ ‘ಕಲ್ಪೋತ್ಸವ ವೈಭವ 2025’ ತಿಪಟೂರಿನ ಮಹತ್ವದ ಕಾರ್ಯಕ್ರಮವೆಂದು ಗುರುತಿಸಿಕೊಳ್ಳಲಿದೆ. ಏಕತೆ, ಆಕಾಂಕ್ಷೆ ಹಾಗೂ ಸಶಕ್ತ ಸಾಂಸ್ಕೃತಿಕ ಚಲನಶೀಲತೆಯನ್ನು ಪ್ರತಿಬಿಂಬಿಸಿದ ಹಿರಿಮೆಗೆ ಪಾತ್ರವಾಗಲಿದೆ.

ತಿಪಟೂರಿನ ಹೊಸ ಅಧ್ಯಾಯ: ತಾಲ್ಲೂಕು ಮಟ್ಟದ ಸಮುದಾಯ ಸಂಭ್ರಮಾಚರಣೆಗಳಿಗೆ ‘ಕಲ್ಪೋತ್ಸವ ವೈಭವ 2025’ವು ಹೊಸ ಅರ್ಥವನ್ನೇ ನೀಡಿದೆ. ಸಂಸ್ಕೃತಿ, ಸಮುದಾಯ ಅಭಿವೃದ್ಧಿ, ಯುವಜನತೆಯ ಸಬಲೀಕರಣ ಹಾಗೂ ಕೃಷಿ ಪರಂಪರೆಗಳು ಮೇಳೈಸಿದ ಜನೋತ್ಸವ ಇದಾಗಿದೆ. 11ಕ್ಕೂ ಹೆಚ್ಚು ಶಾಸಕರು, ಲೋಕಸಭಾ ಸದಸ್ಯರುಗಳು, ಧಾರ್ಮಿಕ ಮುಖಂಡರು, ಮಹಿಳೆಯರು, ಯುವಜನತೆ, ವಿದ್ಯಾರ್ಥಿಗಳು ಹಾಗೂ ರೈತಾಪಿ ಸಮೂಹದ ಭಾಗವಹಿಸುವ ಮೂಲಕ ನಾಡ ಹಬ್ಬವಾಗಿ ಮನಸೂರೆಗೊಳ್ಳಲಿದೆ.

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!