ತಿಪಟೂರು : ಮಾನವನ ಸರ್ವಾಂಗೀಣ ಬೆಳವಣಿಗೆ ಹಾಗೂ ಆರ್ಥಿಕ ಸುಭದ್ರತೆಗೆ ಸಹಕಾರಿ ಸಂಘಗಳ ಸಾಮರಸ್ಯದ ವ್ಯವಹಾರಗಳು ಅತ್ಯಂತ ಹೆಚ್ಚು ಸಹಕಾರಿಯಾಗುತ್ತವೆ ಎಂದು ಷಡಕ್ಷರ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ತಿಳಿಸಿದರು.

ನಗರದ ಕೆ.ಆರ್. ಬಡಾವಣೆಯ ಶ್ರೀ ಎಂ ವಿ ಸೀತಾರಾಮಯ್ಯ ಶತಮಾನೋತ್ಸವ ಭವನದಲ್ಲಿ ಶ್ರೀ ಸೃಜನಶೀಲ ಪತ್ತಿನ ಸಹಕಾರ ಸಂಘ ನಿಯಮಿತ, ಶ್ರೀ ಪ್ರಗತಿಶೀಲ ಗೃಹ ನಿರ್ಮಾಣ ಸಹಕಾರ ಸಂಘದ 2024- 25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಹಕಾರ ಸಂಘಗಳು ಸಮಾಜಮುಖಿ ಚಿಂತನೆಗಳನ್ನು ಅಳವಡಿಸಿಕೊಂಡು ಸಮಾಜದ, ಸಾರ್ವಜನಿಕರ ಅಭಿವೃದ್ದಿಗೆ ಮುಂದಾಗಬೇಕು. ಪ್ರತಿಯೊಬ್ಬ ಸದಸ್ಯರು ಸಂಘದ ಎಲ್ಲಾ ವ್ಯವಹಾರಗಳನ್ನು ಮುಚ್ಚುಮರೆಯಿಲ್ಲದೇ ಮುಕ್ತವಾಗಿ ತಿಳಿದುಕೊಂಡು ಸಂಘದ ಬೆಳವಣಿಗೆಯ ಆಗುಹೋಗುಗಳ ಬಗ್ಗೆ ಸದಾಕಾಲ ಚಿಂತಿಸುತ್ತಿರಬೇಕು. ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ವ್ಯವಹಾರದಲ್ಲಿ ಖಾಲಿ ಚೆಕ್ ಅಥವಾ ಬಿಳಿ ಹಾಳೆ, ಆಫಿಡವಿಟ್‍ಗಳಗೆ ಸಹಿ ಮಾಡದೇ ಎಚ್ಚರಿಕೆ ವಹಿಸಿ ವ್ಯವಹಾರ ಮಾಡಬೇಕು. ಇಲ್ಲವಾದರೇ ಮೋಸ ಹೋಗುವುದು ಖಚಿತವಾಗಿದೆ ಎಂದು ಎಚ್ಚರಿಸಿದರು.

ಸಂಘದ ಅಧ್ಯಕ್ಷ ಎಸ್.ಜಯಣ್ಣ ಮಾತನಾಡಿ ಸಹಕಾರಿ ಸಂಘದ ಸಂಪೂರ್ಣ ಬೆಳವಣಿಗೆಗೆ ಸರ್ವಸದಸ್ಯರ ಸಹಕಾರ ಬಹುಮುಖ್ಯವಾಗಿದೆ. ಅವರೆಲ್ಲರ ನೆರವಿನಿಂದ ದಿನೇ ದಿನೇ ನಮ್ಮ ಸಂಘವೂ ಅಭಿವೃದ್ಧಿಯಾಗುತ್ತಾ ಬಂದಿದೆ. ಇದರಿಂದಾಗಿ ಅವಶ್ಯವಿರುವ ಗ್ರಾಹಕರು ಆರ್ಥಿಕ ಸಹಾಯವನ್ನು ಪಡೆದುಕೊಂಡು ಸುಸ್ತಿರ ಜೀವನವನ್ನು ನಡೆಸಬೇಕಿದೆ ಎಂದರು.
ಬಾಲಕರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ.ಡಿ.ಶಿವಕುಮಾರ್, ವಕೀಲ ಸದಾಶಿವಯ್ಯ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಬಿ.ಎನ್.ಅಜಯ್, ಕಾರ್ಯದರ್ಶಿ ಬಿ.ಮಲ್ಲಿಕಾರ್ಜುನಯ್ಯ, ಸಂಘದ ಉಪಾಧ್ಯಕ್ಷೆ ಎಂ.ಜಿ.ಮೀನಾ, ಸದಸ್ಯರುಗಳಾದ ಎಚ್.ಎನ್.ವೇದಮೂರ್ತಿ, ಡಿ.ಬಿ.ತೇಜಸ್ವಿನಿ, ಹೆಚ್.ಎಸ್.ಸುಪ್ರಿಯಾ, ಜಯಲಕ್ಷ್ಮೀ, ಹೆಚ್.ಎನ್.ಬಸವರಾಜು ಹಳೇಮನೆ, ಎಸ್.ಚಿದಾನಂದಮೂರ್ತಿ ಸೇರಿದಂತೆ ಹಲವರು ಇದ್ದರು.
ವರದಿ:ಮಂಜುನಾಥ್ ಹಾಲ್ಕುರಿಕೆ







