Spread the love

ತಿಪಟೂರು : ನಗರದ ವಿದ್ಯಾನಗರದಲ್ಲಿರುವ ದೀಕ್ಷಾ ಹೆರಿಟೇಜ್ ಶಾಲೆಯ ವಾರ್ಷಿಕೋತ್ಸವದ ಅಂಗವಾಗಿ ಸಿರಿ ಸಂಭ್ರಮ ಕಾರ್ಯಕ್ರಮವನ್ನು ಜ.03 ಶನಿವಾರದಂದು ಸಂಜೆ 5.00 ರಿಂದ ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಅದ್ದೂರಿಯಾಗಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಬಿ.ಹೆಚ್.ನವೀನ್ ತಿಳಿಸಿದರು,

ಸಿರಿ ಸಂಭ್ರಮ ಕಾರ್ಯಕ್ರಮದಲ್ಲಿ ಸಮಾಜದ ಸುಸ್ಥಿರ ಅಭಿವೃದ್ಧಿಗಾಗಿ ತಮ್ಮ ಸೇವೆಯನ್ನು ನಿಸ್ವಾರ್ಥವಾಗಿ ಸಲ್ಲಿಸುತ್ತಿರುವ ಪೊಲೀಸ್ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು, ಪೌರ ಕಾರ್ಮಿಕರು, ಅನ್ನದಾತ ರೈತರು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ವರ್ಗವನ್ನು ಗೌರವಿಸುವ ನಿಟ್ಟಿನಲ್ಲಿ, “ದೀಕ್ಷಾ ಪ್ರಜಾ ಸೇವಕ ಪುರಸ್ಕಾರʼʼ ನೀಡಿ ಈ ಕಾರ್ಯಕ್ರಮದಲ್ಲಿ ಗೌರವಿಸಲಾಗುವುದು.

ವಾರ್ಷಿಕೋತ್ಸವದ ಅಂಗವಾಗಿ ನೃತ್ಯ, ಗಾಯನ, ನಾಟಕ, ಸಮೂಹ ನೃತ್ಯ, ದೇಶಭಕ್ತಿ ಗೀತೆಗಳು ಸೇರಿದಂತೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ವಿದ್ಯಾರ್ಥಿಗಳು ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಲು ಸಜ್ಜಾಗಿದ್ದಾರೆ. ಜೊತೆಗೆ ಶೈಕ್ಷಣಿಕ, ಕ್ರೀಡಾ ಹಾಗೂ ಸಹಪಠ್ಯ ಚಟುವಟಿಕೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಶಸ್ತಿ ಪ್ರದಾನವೂ ನಡೆಯಲಿದೆ.

“ಸಿರಿ ಸಂಭ್ರಮ” ವಾರ್ಷಿಕೋತ್ಸವವು ಶಾಲೆಯ ಸಂಸ್ಕೃತಿ, ಶಿಸ್ತು ಹಾಗೂ ಮೌಲ್ಯಾಧಾರಿತ ಶಿಕ್ಷಣವನ್ನು ಪ್ರತಿಬಿಂಬಿಸುವ ವೇದಿಕೆಯಾಗಿದ್ದು, ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗಲಿದೆ.

ಕಾರ್ಯಕ್ರಮವನ್ನು ಶಾಸಕರಾದ ಕೆ.ಷಡಕ್ಷರಿ ಮತ್ತು ಸಂಸ್ಥೆಯ ಅಧ್ಯಕ್ಷರಾದ ಹನುಮರಂಗಯ್ಯ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಕರ್ನಾಟಕ ರಾಜ್ಯ ಮುಖ್ಯ ಆಯುಕ್ತರಾದ ಪಿ.ಜಿ.ಆರ್ ಸಿಂಧ್ಯಾರವರು, ಮಾಜಿ ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ್ ಚಲನಚಿತ್ರ ಮತ್ತು ಕಿರುತೆರೆ ಕಲಾವಿದರಾದ ಹನುಮಂತೇಗೌಡ, ತಾಲ್ಲೂಕು ಶಿಕ್ಷಣಾಧಿಕಾರಿಗಳು ಹಾಗೂ ಇತರ ಗಣ್ಯರು ಭಾಗವಹಿಸಲಿದ್ದು ಕಾರ್ಯಕ್ರಮವನ್ನು ಕಿರುತೆರೆಯ ಪ್ರಖ್ಯಾತ ನಿರೂಪಕಿ ಕು.ಅನುಪಮ ಭಟ್‌ರವರು ನಿರೂಪಣೆ ಮಾಡಲಿದ್ದಾರೆ ಎಂದು ತಿಳಿಸಿದರು.

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!