Spread the love

ತಿಪಟೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ (ಸಾಮೂಹಿಕ ನಾಯಕತ್ವ) ವತಿಯಿಂದ ತಾಲ್ಲೂಕು ಆಡಳಿತ ಸೌಧದ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾನಂತರ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.


ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತವಿರೋಧಿ ಧೋರಣೆಗಳ ವಿರುದ್ಧ ಘೋಷಣೆಗಳನ್ನು ಕೂಗಿ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಾಂತ ರೈತ ಸಂಘದ ಅಧ್ಯಕ್ಷ ರಂಗಾಪುರ ಚನ್ನಬಸವಣ್ಣ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರನ್ನು ಆಳುವವರ ಗುಲಾಮರಂತೆ ಕಾಣುತ್ತಿವೆ ಎಂದು ಆರೋಪಿಸಿದರು. ರೈತರು ಸಿಡಿದ್ದೆದರೆ ಯಾವುದೇ ಸರ್ಕಾರಕ್ಕೂ ಉಳಿಗಾಲವಿಲ್ಲ. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರ ಜನವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ. ರೈತರು ಭೂಮಿ ಕೇಳಿದರೆ ನಿರಾಕರಿಸಲಾಗುತ್ತಿದೆ. ಆದರೆ ಅಂಬಾನಿ, ಅದಾನಿ ಕಂಪನಿಗಳಿಗೆ ಸಾವಿರಾರು ಎಕರೆ ಭೂಮಿಯನ್ನು ಮುಫಾತ್ತಾಗಿ ನೀಡಲಾಗಿದೆ. ಯೋಗಗುರು ಬಾಬಾ ರಾಮದೇವ್ ಅವರ ನಕಲಿ ಕಂಪನಿಗಳಿಗೂ ಸಹ ಭೂಮಿ ನೀಡಲಾಗುತ್ತಿದೆ. ರೈತರು ಭೂಮಿ ಕೇಳಿದರೆ ದಬ್ಬಾಳಿಕೆ ನಡೆಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಬಡ ರೈತರಿಗೆ ಭೂಮಿ ಮಂಜೂರು ಮಾಡುವಲ್ಲಿ ಮೀನಾಮೇಷ ಎಣಿಸುತ್ತಿದ್ದು, ರೈತಪರ ಕಾಳಜಿ ಇಲ್ಲವೆಂದು ಟೀಕಿಸಿದರು. ಅರಣ್ಯ ಇಲಾಖೆ ಮೂಲಕ ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆಯುತ್ತಿದೆ. ಮೂರ್ನಾಲ್ಕು ತಲೆಮಾರಿನಿಂದ ಮುಂಜೂರು ಪತ್ರಕ್ಕಾಗಿ ಕಾಯುತ್ತಿರುವ ರೈತರು ಇನ್ನೂ ಅನ್ಯಾಯ ಅನುಭವಿಸುತ್ತಿದ್ದಾರೆ. ಕೆಲ ರೈತರ ಬಳಿ ಭೂ ದಾಖಲೆಗಳೇ ಇಲ್ಲದೆ ಕಚೇರಿಯಿಂದ ಕಚೇರಿಗೆ ಅಲೆದು ಸುಸ್ತಾಗಿದ್ದಾರೆ. ಬಗರ್ ಹುಕ್ಕುಂ ಸಾಗುವಳಿ ಚೀಟಿ ನೀಡಬೇಕು, ಭೂಮಿ ದುರಸ್ತಿ ಹಾಗೂ ಖಾತೆ ಬದಲಾವಣೆ ಪ್ರಕ್ರಿಯೆಯನ್ನು ಸರಳಗೊಳಿಸಬೇಕು ಎಂದು ಒತ್ತಾಯಿಸಿದರು.


ರೈತ ಮುಖಂಡ ಜಯಾನಂದಯ್ಯ ಮಾತನಾಡಿ, ಸರ್ಕಾರ ರೈತರ ಬೆಳೆಗಳಿಗೆ ಸೂಕ್ತ ಬೆಲೆ ನೀಡಲು ವಿಫಲವಾಗಿದೆ. ರೈತರ ಬೆಳೆಗಳಿಗೆ ಬೆಲೆ ಖಾತರಿ ನೀಡಬೇಕು. ಬಗರ್ ಹುಕ್ಕುಂ ಸಾಗುವಳಿದಾರರಿಗೆ ಕೂಡಲೇ ಸಾಗುವಳಿ ಚೀಟಿ ನೀಡಬೇಕು. ತುಮಕೂರು ಜಿಲ್ಲೆ ಅತಿ ಹೆಚ್ಚು ತೆಂಗು ಬೆಳೆಯುವ ಪ್ರದೇಶವಾಗಿರುವುದರಿಂದ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ತೆಂಗು ಟೆಕ್ನೋಪಾರ್ಕ್ ಅಥವಾ ತೆಂಗು ಅಧ್ಯಯನ ಕೇಂದ್ರ ಸ್ಥಾಪಿಸಬೇಕು. ತೆಂಗು ಹಾಗೂ ತೆಂಗಿನ ಉತ್ಪನ್ನಗಳ ಮೌಲ್ಯವರ್ಧನೆಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ತಿಪಟೂರು ಸೌಹಾರ್ದ ವೇದಿಕೆ ಅಧ್ಯಕ್ಷ ಅಲ್ಲಾಭಕ್ಷು ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬ್ರಿಟಿಷರ ಪಳಯುಳಿಕೆಗಳಂತೆ ಕಾರ್ಯನಿರ್ವಹಿಸುತ್ತಿವೆ. ನಾವು ಆಯ್ಕೆ ಮಾಡಿದ ಜನಪ್ರತಿನಿಧಿಗಳೇ ನಮ್ಮನ್ನು ಶೋಷಣೆ ಮಾಡುತ್ತಿದ್ದಾರೆ. ಅಮೆರಿಕದೊಂದಿಗೆ ಕೇಂದ್ರ ಸರ್ಕಾರ ಮಾಡಿಕೊಂಡಿರುವ ಒಪ್ಪಂದ ರೈತರ ಮರಣಶಾಸನವಾಗಲಿದೆ. ಡೈರಿ ಉದ್ಯಮವನ್ನು ನಂಬಿರುವ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗುವ ಸಾಧ್ಯತೆ ಇದೆ. ಈ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.


ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಕಾರ್ಮಿಕ ಕಾನೂನುಗಳು ಕಾರ್ಮಿಕರ ಹಿತಾಸಕ್ತಿಗೆ ವಿರುದ್ಧವಾಗಿವೆ. ರಾಜ್ಯ ಸರ್ಕಾರವೂ ರೈತರು ಮತ್ತು ಕಾರ್ಮಿಕರ ಹಿತ ಕಾಯಲು ವಿಫಲವಾಗಿದೆ. ಕಂದಾಯ ಇಲಾಖೆ ನಿಯಮಗಳನ್ನು ಸರಳಗೊಳಿಸುವುದಾಗಿ ಸರ್ಕಾರ ಹೇಳಿದ್ದರೂ ಅಧಿಕಾರಿಗಳು ರೈತರ ಮನವಿಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು. ಫೆಬ್ರವರಿ 12ರಂದು ವಿವಿಧ ಸಂಘಟನೆಗಳೊಂದಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಜನವಿರೋಧಿ ನೀತಿಗಳ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ರೈತರು, ಕಾರ್ಮಿಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ತಿಮ್ಲಾಪುರ ದೇವರಾಜು, ಜಯಶರ್ಮಾ, ಬಿಳಿಗೆರೆಪಾಳ್ಯ ನಾಗೇಶ್, ಸಿದ್ದಯ್ಯ, ಬಸವರಾಜು, ಚಂದ್ರಶೇಖರ್ ದೇವಾನಂದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!