
: ಮಾರ್ಚ್ 21ರಂದು ರಂಜಾನ್ ಹಬ್ಬದ ದಿನ ಅಕ್ರಮವಾಗಿ ಖಸಾಯಿಖಾನೆಗೆ ಗೋವುಗಳನ್ನು ಸಾಗಿಸುತ್ತಿದ್ದ ವಾಹನವನ್ನು ತಡೆದ ವೇಳೆ ಅನ್ಯಕೋಮಿನ ಗುಂಪೊಂದು ಹಲ್ಲೆ ನಡೆಸಿದ ಘಟನೆ ನಡೆದಿತ್ತು. ಜೊತೆಗೆ ಮಾವಿನ ತೋಪಿನಲ್ಲಿ ಅಕ್ರಮವಾಗಿ ಮಸೀದಿ ನಿರ್ಮಾಣ ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದ ಹಿನ್ನೆಲೆಯಲ್ಲಿ ಬಜರಂಗದಳ, ವಿಶ್ವಹಿಂದೂ ಪರಿಷತ್ ಹಾಗೂ ಭಾರತೀಯ ಜನತಾ ಪಕ್ಷ ಸೇರಿದಂತೆ ವಿವಿಧ ಹಿಂದೂಪರ ಸಂಘಟನೆಗಳ ನೇತೃತ್ವದಲ್ಲಿ ತಿಪಟೂರು ಬಂದ್‌ಗೆ ಕರೆ ನೀಡಲಾಗಿತ್ತು. ಈ ಬಂದ್ ಯಶಸ್ವಿಯಾಗಿದೆ.

ತಿಪಟೂರು ನಗರದ ಪ್ರಮುಖ ವಾಣಿಜ್ಯ ಕೇಂದ್ರಗಳಾದ ಎಪಿಎಂಸಿ ಮಾರುಕಟ್ಟೆ, ಹಣ್ಣು ಮತ್ತು ತರಕಾರಿ ಮಾರುಕಟ್ಟೆ, ದೊಡ್ಡಪೇಟೆ, ಎಲೆ ಆಸರ, ಮಡಿಕೆ ಆಸರ ಸೇರಿದಂತೆ ನಗರಾದ್ಯಂತ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವ ಮೂಲಕ ವ್ಯಾಪಾರಸ್ಥರು ಬಂದ್‌ಗೆ ಬೆಂಬಲ ಸೂಚಿಸಿದರು. ಸಾವಿರಾರು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಬೈಕ್ ರ್ಯಾಲಿಯಲ್ಲಿ ಭಾಗವಹಿಸಿ “ಭಾರತ್ ಮಾತಾ ಕಿ ಜೈ” ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
ತಿಪಟೂರು ಗ್ರಾಮ ದೇವತೆ ಶ್ರೀ ಕೆಂಪಮ್ಮ ದೇವಿ ದೇವಾಲಯದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಕೋಡಿ ಸರ್ಕಲ್, ದೊಡ್ಡಪೇಟೆ, ಬಿ.ಎಚ್. ರಸ್ತೆ ಮೂಲಕ ಹಾಸನ ವೃತ್ತದವರೆಗೆ ಸಾಗಿದ್ದು, ನಗರಸಭಾ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಬಜರಂಗದಳ ರಾಜ್ಯಾಧ್ಯಕ್ಷ ಸುನೀಲ್ ಅವರು, ಗೋಮಾತೆಗೆ ಭಾರತೀಯ ಸಂಸ್ಕೃತಿಯಲ್ಲಿ ಪೂಜನೀಯ ಸ್ಥಾನವಿದ್ದು, ಅಕ್ರಮವಾಗಿ ಗೋವುಗಳನ್ನು ಖಸಾಯಿಖಾನೆಗಳಿಗೆ ಸಾಗಿಸುವವರಿಗೆ ತಕ್ಕ ಪಾಠ ಕಲಿಸುವ ಕಾಲ ದೂರವಿಲ್ಲ ಎಂದು ಹೇಳಿದರು. ಹಿಂದೂ ಸಮಾಜ ಜಾಗೃತವಾಗುತ್ತಿದ್ದು, ಹಿಂದುಗಳ ಮೇಲೆ ದಾಳಿ ಮಾಡಿದರೆ ತಕ್ಕ ಪ್ರತಿಕ್ರಿಯೆ ನೀಡಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಮುಖಂಡ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ಲೋಕೇಶ್ವರ್ ಮಾತನಾಡಿ, ಹಿಂದೂ ಗೋ ರಕ್ಷಕರ ಮೇಲೆ ನಡೆದ ದಾಳಿ ಖಂಡನೀಯವಾಗಿದೆ. ಗಾಯಗೊಂಡ ಕಾರ್ಯಕರ್ತರಿಗೆ ತಲಾ ಹತ್ತು ಸಾವಿರ ರೂಪಾಯಿ ಪರಿಹಾರವನ್ನು ಸ್ವಂತ ಹಣದಿಂದ ನೀಡುವುದಾಗಿ ಹಾಗೂ ಕಾನೂನು ನೆರವು ಒದಗಿಸುವುದಾಗಿ ತಿಳಿಸಿದರು. ನಗರದಲ್ಲಿ ಅಕ್ರಮ ಮಸೀದಿ ನಿರ್ಮಾಣವಾಗುತ್ತಿದೆ ಎಂಬ ಆರೋಪವನ್ನೂ ಅವರು ವ್ಯಕ್ತಪಡಿಸಿದರು.
ಶ್ರೀರಾಮ ಸೇನೆಯ ಮುಖಂಡ ನರೇಶ್ ಮಾತನಾಡಿ, ಹಿಂದೂ ಸಂಘಟನೆಗಳ ಕಾರ್ಯಕರ್ತರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು. ಯಾವುದೇ ಹಿಂದೂ ಸಂಕಷ್ಟಕ್ಕೆ ಒಳಗಾದಾಗ ಎಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕು ಎಂದು ಕರೆ ನೀಡಿದರು. ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ್ ಮಾತನಾಡಿ, ಗೋರಕ್ಷಕರ ಮೇಲೆ ನಡೆದ ದಾಳಿ ರಾಜಕೀಯ ಪ್ರೇರಿತವಾಗಿದೆ .ಹಲ್ಲೆಗೊಳಗಾದ ಗೋರಕ್ಷಕರಿಗೆ ತಲಾ 20 ಸಾವಿರ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು
ಪ್ರತಿಭಟನೆಯಲ್ಲಿ ಯುವ ಬಿಜೆಪಿ ಮುಖಂಡ ವಿಶ್ವದೀಪ್, ಬಿ.ಸಿ. ನಾಗೇಶ್, ನಗರಸಭೆ ಮಾಜಿ ಸದಸ್ಯ ಪ್ರಸನ್ನ ಕುಮಾರ್, ತರಕಾರಿ ಗಂಗಾಧರ್, ಶಶಿಕಿರಣ್, ಮಾಜಿ ಅಧ್ಯಕ್ಷ ರಾಮಮೋಹನ್, ಮಡೆನೂರು ವಿನಯ್ ಕುಮಾರ್, ಬಾಳೆಕಾಯಿ ನಟರಾಜು, ಮಂಜುನಾಥ್, ಬಿಜೆಪಿ ಅಧ್ಯಕ್ಷ ಸತೀಶ್, ನಗರಾಧ್ಯಕ್ಷ ಜಗದೀಶ್.ಶ್ರೀಸತ್ಯಗಣಪತಿ ಸೇವಾಸಮಿತಿ ಅಧ್ಯಕ್ಷ ಶ್ರೀಕಂಠ ಸೇರಿದಂತೆ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.

ಬಂದ್ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಅವರ ನೇತೃತ್ವದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಭದ್ರತೆಗಾಗಿ 1 ಅಡಿಷನಲ್ ಎಸ್‌ಪಿ, 2 ಡಿವೈಎಸ್‌ಪಿ, 3 ಸರ್ಕಲ್ ಇನ್ಸ್‌ಪೆಕ್ಟರ್, 11 ಸಬ್ ಇನ್ಸ್‌ಪೆಕ್ಟರ್, 36 ಎಎಸ್‌ಐ, 44 ಹೆಡ್ ಕಾನ್ಸ್‌ಟೇಬಲ್ ಸೇರಿ ಒಟ್ಟು 360 ಪೊಲೀಸ್ ಸಿಬ್ಬಂದಿ ಹಾಗೂ 12 ಡಿಆರ್ ಮತ್ತು ಕೆಎಸ್‌ಆರ್‌ಪಿ ತುಕ್ಕಡಿಗಳನ್ನು ನಿಯೋಜಿಸಲಾಗಿತ್ತು.
ವಿವಾದಿತ ವ್ಯಕ್ತಿಗಳು ತಿಪಟೂರಿಗೆ ಪ್ರವೇಶಿಸದಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾಗಿ ತಿಳಿದುಬಂದಿದೆ. ಇದೇ ವೇಳೆ ಹಿಂದೂ ಗೋರಕ್ಷಕ ಪುನೀತ್ ಕೆರೆಹಳ್ಳಿ ತಿಪಟೂರಿಗೆ ಆಗಮಿಸಲು ಯತ್ನಿಸಿದ ವೇಳೆ ಖಚಿತ ಮಾಹಿತಿ ಪಡೆದ ಪೊಲೀಸರು ತಾಲ್ಲೂಕಿನ ಗಡಿಯಿಂದ ವಾಪಾಸ್ ಕಳಿಸಿದ್ದಾರೆ.
ವರದಿ :ಮಂಜುನಾಥ್ ಹಾಲ್ಕುರಿಕೆ






