ತಿಪಟೂರು: ತಾಲೂಕಿನ ಕಸಬಾ ಹೋಬಳಿಯ ಮತ್ತಿಹಳ್ಳಿ ಗ್ರಾಮದಲ್ಲಿ ವೀರಭದ್ರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಮಾರ್ಚ್ 3ರಂದು ಅಗ್ನಿ ಕೆಂಡೋತ್ಸವ ಕಾರ್ಯಕ್ರಮವು ಭಕ್ತಿ ಭಾವದಿಂದ ಅದ್ದೂರಿಯಾಗಿ ನಡೆಯಲಿದೆ.

ಜಾತ್ರೆಯ ಅಂಗವಾಗಿ ಗ್ರಾಮದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ರಾತ್ರಿ ಅನ್ನಸಂತರ್ಪಣೆಯ ವ್ಯವಸ್ಥೆ ಕೂಡ ಮಾಡಲಾಗಿದೆ. ಈ ವೇಳೆ ಗ್ರಾಮದ ವೀರಭದ್ರೇಶ್ವರ ಸ್ವಾಮಿಯನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಸುತ್ತಮುತ್ತಲಿನ ಗ್ರಾಮಗಳಿಗೆ ಕರೆದುಕೊಂಡು ಹೋಗಿ ದವಸ-ಧಾನ್ಯಗಳ ಭಿಕ್ಷಾಟನೆ ಕಾರ್ಯಕ್ರಮವನ್ನು ದೇವರ ಸಮ್ಮುಖದಲ್ಲಿ ನೆರವೇರಿಸಲಾಯಿತು.
ಭಿಕ್ಷಾಟನೆಯಲ್ಲಿ ರೈತಾಪಿ ಜನರು ತಾವು ಬೆಳೆದ ರಾಗಿ, ಜೋಳ, ಉರುಳಿ, ತೆಂಗಿನಕಾಯಿ ಸೇರಿದಂತೆ ವಿವಿಧ ದಿನಸಿ ಪದಾರ್ಥಗಳನ್ನು ಭಕ್ತಿಭಾವದಿಂದ ಸಮರ್ಪಿಸಿದರು. ವೀರಭದ್ರೇಶ್ವರ ಸ್ವಾಮಿ ಆಗಮನದ ಹಿನ್ನೆಲೆಯಲ್ಲಿ ತಿಮ್ಲಾಪುರ, ಚಿಕ್ಕಬಿದರೆ, ಬಿದರೆಗುಡಿ, ಬೈರಾಪುರ, ಕರೀಕೆರೆ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಬೀದಿಗಳಿಗೆ ರಂಗೋಲಿ ಹಾಕಿ ದೇವರನ್ನು ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ಮಕ್ಕಳು ಕುಣಿದು ಕುಪ್ಪಳಿಸಿ ಭಕ್ತಿಭಾವ ಮೆರೆದರು. ಜಾತ್ರಾ ಮಹೋತ್ಸವವು ಗ್ರಾಮೀಣ ಸಂಪ್ರದಾಯ ಮತ್ತು ಭಕ್ತಿಯ ಸಂಭ್ರಮವನ್ನು ಪ್ರತಿಬಿಂಬಿಸುತ್ತಿದ್ದು, ಭಕ್ತರಲ್ಲಿ ಉತ್ಸಾಹ ಮೂಡಿಸಿದೆ.
ವರದಿ :ಮಂಜುನಾಥ್ ಹಾಲ್ಕುರಿಕೆ





