Spread the love

: ಬಹುಸಂಸ್ಕೃತಿಯ ದೇಶವಾದ ಭಾರತದಲ್ಲಿ ಸಾಮಾಜಿಕ ಅಸಮಾನತೆ ಹಾಗೂ ಶೋಷಣೆ ಹಾಸುಹೊಕ್ಕಾಗಿದ್ದು, ಎಲ್ಲಾ ಸಾಮಾಜಿಕ ಸಮಸ್ಯೆಗಳಿಗೆ ಸಂವಿಧಾನವೇ ಪರಮೌಷಧವಾಗಿದೆ ಎಂದು ಸಾಹಿತಿ ಹಾಗೂ ಉಪನ್ಯಾಸಕ ಡಾ. ಹೊನ್ನಾಂಜಿನೇಯ ಹೇಳಿದರು.


ನಗರದ ಸರ್ಕಾರಿ ನೌಕರರ ಭವನದಲ್ಲಿ ಕರ್ನಾಟಕ ಮಾದಾರ ಮಹಾಸಭಾ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಹಸಿರು ಕ್ರಾಂತಿ ಹರಿಕಾರ, ಮಾಜಿ ಉಪಪ್ರಧಾನಿ ಡಾ. ಬಾಬೂ ಜಗಜೀವನ್ ರಾಮ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತವು ಬಹುಸಂಸ್ಕೃತಿಯ ದೇಶವಾಗಿದ್ದು, ಇಲ್ಲಿ ಇರುವ ಸಾಮಾಜಿಕ ಸಮಸ್ಯೆಗಳು ದೇಶದ ಅಭಿವೃದ್ದಿಗೆ ಮಾರಕವಾಗಿವೆ. ದೇಶದ ಎಲ್ಲಾ ಸಮಸ್ಯೆಗಳಿಗೂ ಸಂವಿಧಾನದಲ್ಲೇ ಪರಿಹಾರ ಕಾಣಬಹುದು. ವಿಶ್ವಶ್ರೇಷ್ಠ ಜ್ಞಾನ ಹೊಂದಿದ ಮಹಾನ್ ಚೇತನರಾದ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಡಾ. ಬಾಬೂ ಜಗಜೀವನ್ ರಾಮ್ ಅವರ ಮೇಲೆ ಜಾತಿ ಆಧಾರಿತ ಕೊಳಕು ಹಚ್ಚಲು ಪ್ರಯತ್ನಿಸುತ್ತಿರುವುದು ವಿಷಾದನೀಯ. ಇಬ್ಬರೂ ಮಹನೀಯರು ಒಂದೇ ನಾಣ್ಯದ ಎರಡು ಮುಖಗಳಂತೆ; ಒಂದನ್ನು ಬಿಟ್ಟು ಇನ್ನೊಂದು ಇರಲು ಸಾಧ್ಯವಿಲ್ಲ ಎಂದು ಹೇಳಿದರು.
ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ. ಕಾನೂನು ಎಷ್ಟೇ ಪ್ರಬಲವಾಗಿದ್ದರೂ, ಅದನ್ನು ಜಾರಿಗೊಳಿಸುವ ಮನೋಭಾವ ಬದಲಾಗಬೇಕು. ಮಾನವ ಚಂದ್ರಲೋಕ, ಮಂಗಳಲೋಕಗಳಿಗೆ ಹೋಗಿ ಬಂದಿದ್ದರೂ, ದೇಶದಲ್ಲಿ ಅಸ್ಪೃಶ್ಯರು ಸಮಾನತೆಯಿಂದ ದೇವಾಲಯಗಳಿಗೆ ಹೋಗಲು ಸಾಧ್ಯವಾಗದಿರುವುದು ವಿಷಾದನೀಯ. ಅಸಮಾನತೆ ಮತ್ತು ಅಸ್ಪೃಶ್ಯತೆಯನ್ನು ಆಚರಿಸುವ ಮನೋಭಾವಗಳು ಬದಲಾಗಬೇಕು. ದಲಿತರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು; ಶಿಕ್ಷಣವೇ ಸಾಮಾಜಿಕ ಬದಲಾವಣೆಗೆ ದಾರಿ ಎಂದು ತಿಳಿಸಿದರು.


ಖ್ಯಾತ ವೈದ್ಯರಾದ ಡಾ. ಶ್ರೀಧರ್ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು ಸಂವಿಧಾನ ಜಾರಿಯಾಗಿ 75 ವರ್ಷಗಳಾದರೂ, ನಾವು ಇನ್ನೂ ಸಮಾನತೆ ಬಗ್ಗೆ ಮಾತನಾಡುತ್ತಲೇ ಇದ್ದೇವೆ. ಶೋಷಿತರ ಹಕ್ಕುಗಳಿಗಾಗಿ ಹೋರಾಟ ನಡೆಯುತ್ತಿದೆ. ದೇಶ ಬದಲಾಗಬೇಕಾದರೆ ಸಾಮಾಜಿಕ ವ್ಯವಸ್ಥೆ ಬದಲಾಗಬೇಕು. ಎಲ್ಲರನ್ನು ಸಮಾನವಾಗಿ ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕು. ಡಾ. ಬಿ.ಆರ್. ಅಂಬೇಡ್ಕರ್ ಕೇವಲ ದಲಿತರಿಗಾಗಿ ಮಾತ್ರ ಸಂವಿಧಾನ ನೀಡಿಲ್ಲ; ದೇಶದ ಪ್ರತಿಯೊಬ್ಬ ನಾಗರಿಕನು ಅವರನ್ನು ಗೌರವಿಸಬೇಕು. ಜ್ಞಾನವನ್ನು ಜಾತಿ-ಧರ್ಮದ ಸಂಕೋಲೆಗಳಲ್ಲಿ ಕಟ್ಟಿಹಾಕದೆ, ಎಲ್ಲ ವರ್ಗಗಳ ಸ್ವತ್ತಾಗಿ ನೋಡಬೇಕು. ಸಂವಿಧಾನದ ಆಶಯಗಳನ್ನು ಗೌರವಿಸಿ ಅನುಸರಿಸಬೇಕು ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಪ್ರಗತಿಪರ ಚಿಂತಕ ಹಾಗೂ ಪತ್ರಕರ್ತ ಉಜ್ಜಜ್ಜಿ ರಾಜಣ್ಣ ಮಾತನಾಡಿ, ಬಹುತ್ವದ ಸಂಸ್ಕೃತಿಯ ದೇಶದಲ್ಲಿ ಸಮಾನತೆ ಮತ್ತು ಸೋದರತೆ ಬೆಳೆಸಬೇಕಾದರೆ ಮೊದಲು ಸಂವಿಧಾನವನ್ನು ಅರ್ಥಮಾಡಿಕೊಳ್ಳಬೇಕು. ಡಾ. ಬಿ.ಆರ್. ಅಂಬೇಡ್ಕರ್ ಅರ್ಥವಾಗದ ಹೊರತು ಸಂವಿಧಾನ ಅರ್ಥವಾಗುವುದಿಲ್ಲ. ಸಂವಿಧಾನವೇ ದೇಶದ ಶ್ರೇಷ್ಠ ಗ್ರಂಥವಾಗಿದೆ. ಧಾರ್ಮಿಕ ಗ್ರಂಥಗಳು ಅಸಮಾನತೆ ಮತ್ತು ಅಸ್ಪೃಶ್ಯತೆಯನ್ನು ಉಂಟುಮಾಡಿವೆ. ಎಲ್ಲಾ ಧರ್ಮಗಳನ್ನು ಮೀರಿದ ಸಮಾನತೆಯನ್ನು ಪ್ರತಿಪಾದಿಸುವ ಗ್ರಂಥವೇ ಭಾರತ ಸಂವಿಧಾನ
ಮೀಸಲಾತಿ ಜಾರಿಯಾಗಿ ಅರ್ಧ ಶತಮಾನ ಕಳೆದರೂ, ಇನ್ನೂ ಮೀಸಲಾತಿ ವಿಚಾರದಲ್ಲಿ ಸಂಘರ್ಷ ನಡೆಯುತ್ತಿದೆ. ಒಳಮೀಸಲಾತಿ ಹೋರಾಟ ಮುಂದುವರಿದಿದೆ. ಹಲವಾರು ಸಮುದಾಯಗಳು ಇನ್ನೂ ಮೀಸಲಾತಿಯ ಸೌಲಭ್ಯಗಳನ್ನು ಸಂಪೂರ್ಣವಾಗಿ ಪಡೆಯಲು ಸಾಧ್ಯವಾಗಿಲ್ಲ. ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಡಾ. ಬಾಬೂ ಜಗಜೀವನ್ ರಾಮ್ ಅವರನ್ನು ಪರಿಶಿಷ್ಟ ಜಾತಿಯವರ ಸ್ವತ್ತು ಎಂದು ಪರಿಗಣಿಸದೇ, ದೇಶದ ಆಸ್ತಿಯಾಗಿ ನೋಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪೆದ್ದಿಹಳ್ಳಿ ನರಸಿಂಹಯ್ಯ ಮಾತನಾಡಿ, ಮಾದಿಗ ಸಮುದಾಯ ಒಳಮೀಸಲಾತಿಗಾಗಿ ನಾಲ್ಕು ದಶಕಗಳಿಂದ ಹೋರಾಟ ನಡೆಸುತ್ತಿದೆ. ರಾಜ್ಯ ಸರ್ಕಾರದ ಇಚ್ಚಾಶಕ್ತಿಯ ಕೊರತೆಯಿಂದ ಒಳಮೀಸಲಾತಿ ಜಾರಿಯಾಗಿಲ್ಲ. ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲು ಸರ್ಕಾರಿ ಕಾರ್ಯಕ್ರಮಗಳನ್ನು ಬಹಿಷ್ಕರಿಸಲಾಗುತ್ತಿದೆ. ಇದು ಮಹನೀಯರ ವಿರುದ್ಧವಲ್ಲ; ಅವರ ಮೇಲಿನ ಗೌರವ ಅಚಲವಾಗಿದೆ. ಒಳಮೀಸಲಾತಿ ಜಾರಿಯಾಗುವವರೆಗೆ ಹೋರಾಟ ಮುಂದುವರಿಯುತ್ತದೆ ಎಂದು ಹೇಳಿದರು


ಕಾರ್ಯಕ್ರಮದಲ್ಲಿ ಮಾದಾರ ಮಹಾಸಭಾ ಉಪಾಧ್ಯಕ್ಷ ರಾಜಣ್ಣ, ಕುಪ್ಪಾಳು ರಂಗಸ್ವಾಮಿ, ರೈತ ಮುಖಂಡ ಚನ್ನಬಸವಣ್ಣ ಸೇರಿದಂತೆ ಅನೇಕರು ಭಾಗವಹಿಸಿದರು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆ ನಡೆಸಲಾಯಿತು. ನೂರಾರು ಜನ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದರು.

ವರದಿ :ಮಂಜುನಾಥ್ ಹಾಲ್ಕುರಿಕೆ

error: Content is protected !!