ತುರುವೇಕೆರೆ : ತಾಲೂಕಿನಲ್ಲಿ ಗೃಹ ಬಳಕೆಗಾಗಿ ನೀಡಲಾಗುವ ಅಡುಗೆ ಅನಿಲ ಸಿಲಿಂಡರ್‌ಗಳನ್ನು ಅಕ್ರಮವಾಗಿ ವಾಣಿಜ್ಯ ಉದ್ದೇಶಗಳಿಗೆ ಬಳಸುತ್ತಿರುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತುರುವೇಕೆರೆ ತಹಶೀಲ್ದಾರ್ ಎಂ. ಎನ್ ಕುಂ ಇ ಅಹಮದ್ ರವರು ಎಚ್ಚರಿಸಿದ್ದಾರೆ.
ತಹಶೀಲ್ದಾರ್ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಪ್ರಸ್ತುತ ಜಾಗತಿಕ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ಇಂಧನ ಸರಬರಾಜಿನಲ್ಲಿ ಅಲ್ಪ ಪ್ರಮಾಣದ ವ್ಯತ್ಯಯ ಉಂಟಾಗಿದ್ದರೂ ತುರುವೇಕೆರೆ ತಾಲ್ಲೂಕಿನಲ್ಲಿ ಅಡುಗೆ ಅನಿಲ ಪೂರೈಕೆ ಸ್ಥಿರವಾಗಿದೆ. ಸಾರ್ವಜನಿಕರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬಾರದು,ತೈಲ ಕಂಪನಿ ಏಜನ್ಸಿಗಳು.ತಾಲ್ಲೂಕಿನಾದ್ಯಂತ ಅಡುಗೆ ಅನಿಲ ಸಿಲಿಂಡರ್‌ಗಳು ಅವಶ್ಯಕತೆಗೆ ತಕ್ಕಂತೆ ಸರಬರಾಜು ಆಗುತ್ತಿವೆ. ದಾಸ್ತಾನು ಕೊರತೆಯಿದೆ ಎಂಬಂತಹ ಯಾವುದೇ ಸುಳ್ಳು ಸುದ್ದಿ ಅಥವಾ ಗಾಳಿ ಮಾತುಗಳಿಗೆ ಸಾರ್ವಜನಿಕರು ಕಿವಿಗೊಡಬಾರದು. ಸಾರ್ವಜನಿಕರ ದೈನಂದಿನ ಬಳಕೆಗೆ ಯಾವುದೇ ಅಡಚಣೆಯಾಗದಂತೆ ಕ್ರಮ ವಹಿಸಲಾಗಿದೆ,ತಾಲ್ಲೂಕಿನಲ್ಲಿರುವ ಹೋಟೆಲ್‌ಗಳು, ಬೇಕರಿಗಳು ಹಾಗೂ ಬೀದಿ ಬದಿ ವ್ಯಾಪಾರಿಗಳು ಕಡ್ಡಾಯವಾಗಿ ವಾಣಿಜ್ಯ ಸಿಲಿಂಡರ್‌ಗಳನ್ನೇ ಬಳಸಬೇಕು,ಒಂದು ವೇಳೆ ಗೃಹ ಬಳಕೆಯ ಸಿಲಿಂಡರ್‌ಗಳನ್ನು ವಾಣಿಜ್ಯ ಚಟುವಟಿಕೆಗಳಿಗೆ ಉಪಯೋಗಿಸುವುದು ಕಂಡುಬಂದಲ್ಲಿ, ಅಂತಹವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ-1955 ಮತ್ತು ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ್ ಆದೇಶ-2000 ರ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು,ಅಡುಗೆ ಅನಿಲ ಪೂರೈಕೆಯಲ್ಲಿ ಪಾರದರ್ಶಕತೆ ಕಾಪಾಡಲು ಮತ್ತು ಅಕ್ರಮಗಳನ್ನು ತಡೆಯಲು ಸಾರ್ವಜನಿಕರು ಸಹಕರಿಸಬೇಕು. ಯಾವುದಾದರೂ ಅಕ್ರಮ ದಾಸ್ತಾನು ಅಥವಾ ದುರುಪಯೋಗ ಕಂಡುಬಂದಲ್ಲಿ ತಕ್ಷಣವೇ ತಾಲ್ಲೂಕು ಆಡಳಿತಕ್ಕೆ ಮಾಹಿತಿ ನೀಡಬೇಕೆಂದು ತಿಳಿಸಿದರು.
ವರದಿ :ಸುರೇಶ್ ಬಾಬು ತುರುವೇಕೆರೆ





