Spread the love

ತಿಪಟೂರು: ನಗರ ಸೇರಿದಂತೆ ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಕೆ. ಷಡಕ್ಷರಿ ತಿಳಿಸಿದ್ದಾರೆ.
ನಗರದ ಕೆಲವು ಬಡಾವಣೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಅಧಿಕಾರಿಗಳ ಸಭೆ ನಡೆಸಿ ತುರ್ತು ಕ್ರಮಗಳನ್ನು ಕೈಗೊಳ್ಳಲಾಗಿದೆ. ವಾರ್ಡ್ ಸಂಖ್ಯೆ 8, 9, 15, 16, 17 ಹಾಗೂ ಗಾಂಧೀನಗರ ಭಾಗಗಳಲ್ಲಿ ಅಂತರ್ಜಲ ಕೊರತೆ ಇರುವ ಪ್ರದೇಶಗಳಲ್ಲಿ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಮಾರನಗೆರೆ ಸಮೀಪ ಬೋರ್‌ವೆಲ್ ಕೊರೆಸಿ ನೀರು ಸರಬರಾಜಿಗೆ ವ್ಯವಸ್ಥೆ ಮಾಡಲಾಗಿದೆ.
ಮಾರನಗೆರೆ ಕೆರೆ ಹತ್ತಿರ ಸರ್ಕಾರಿ ಜಾಗದಲ್ಲಿ 5 ಲಕ್ಷ ಲೀಟರ್ ಸಾಮರ್ಥ್ಯದ ಎಸ್‌ಎಲ್‌ಎಸ್‌ಆರ್ ಕಾಮಗಾರಿ ಕೈಗೊಳ್ಳಲಾಗಿದ್ದು, ಗಾಂಧೀನಗರ ಓಎಚ್‌ಟಿ‌ಗಳಿಗೆ ಎರಡು 50 ಹೆಚ್‌ಪಿ ಸಾಮರ್ಥ್ಯದ ಪಂಪಿಂಗ್ ಸ್ಟೇಷನ್‌ಗಳ ನಿರ್ಮಾಣವೂ ಪ್ರಗತಿಯಲ್ಲಿದೆ. ತುರ್ತು ಪರಿಸ್ಥಿತಿಯಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ವ್ಯವಸ್ಥೆಯೂ ಮಾಡಲಾಗಿದೆ. ಮುಂದಿನ 15 ದಿನಗಳಲ್ಲಿ ನೀರಿನ ಸಮಸ್ಯೆಯನ್ನು ನಿವಾರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.


ನಗರಸಭೆ ಆವರಣದ ಶಾಸಕರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಪ್ರಸ್ತುತ 241 ಕೊಳವೆಬಾವಿಗಳು ಕಾರ್ಯನಿರ್ವಹಿಸುತ್ತಿವೆ. ಬೇಸಿಗೆಯಿಂದಾಗಿ ಕೆಲವು ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಮಟ್ಟ ಕುಸಿದಿರುವುದರಿಂದ, ಅಗತ್ಯವಿರುವ ಕಡೆಗಳಲ್ಲಿ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತಿದೆ.
ನಗರದ ಹಾಸನ ಸರ್ಕಲ್ ಬಳಿ 10 ಲಕ್ಷ ಲೀಟರ್, ಸ್ಟೇಡಿಯಂ ಬಳಿ 10 ಲಕ್ಷ ಲೀಟರ್, ಅಣ್ಣಾಪುರ ಬಳಿ 5 ಲಕ್ಷ ಲೀಟರ್, ಕರ್ನಾಟಕ ಲೇಔಟ್ ಬಳಿ 10 ಲಕ್ಷ ಲೀಟರ್, ಗಾಂಧೀನಗರ ಬಳಿ 10 ಲಕ್ಷ ಲೀಟರ್ ಹಾಗೂ ಚಿಕ್ಕಪೇಟೆ ಬಳಿ 10 ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕ್‌ಗಳು ಕಾರ್ಯನಿರ್ವಹಿಸುತ್ತಿವೆ.
ನಗರಕ್ಕೆ ನೀರು ಸರಬರಾಜು ಮಾಡುತ್ತಿದ್ದ ಈಚನೂರು ಕೆರೆಗೆ ಯುಜಿಡಿ ನೀರು ಸೇರಿ ಕಲ್ಮಶವಾಗಿರುವುದರಿಂದ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಆ ಮೂಲದಿಂದ ನೀರು ಸರಬರಾಜನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ನಗರದ ಜನಸಂಖ್ಯೆ 2 ಲಕ್ಷದ ಗಡಿಯನ್ನು ದಾಟುತ್ತಿರುವ ಹಿನ್ನೆಲೆಯಲ್ಲಿ, ಭವಿಷ್ಯದ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ನೊಣವಿನಕೆರೆಯಿಂದ ನೀರು ಪೂರೈಕೆ ಮಾಡುವ ಯೋಜನೆ ರೂಪಿಸಲಾಗಿದ್ದು, ಇದಕ್ಕಾಗಿ 60 ಕೋಟಿ ರೂ. ಹೆಚ್ಚುವರಿ ಅನುದಾನಕ್ಕಾಗಿ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಉಪಚುನಾವಣೆಯ ನಂತರ ಅನುಮೋದನೆ ಪಡೆದು ಟೆಂಡರ್ ಪ್ರಕ್ರಿಯೆ ಆರಂಭಿಸಿ, ಒಂದು ವರ್ಷದೊಳಗೆ ಯೋಜನೆಯನ್ನು ಪೂರ್ಣಗೊಳಿಸಲಾಗುತ್ತದೆ ಎಂದು ತಿಳಿಸಿದರು.
ಗ್ರಾಮೀಣ ಜಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ತುಂಬೆನಹಳ್ಳಿ ಅಗ್ರಹಾರದಿಂದ ನೀರು ತಂದು ಮನೆಮನೆಗೆ ಪೂರೈಕೆ ಮಾಡುವ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಶೀಘ್ರದಲ್ಲೇ ಪೂರ್ಣಗೊಳ್ಳಲಿವೆ ಎಂದರು.


ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಸುದರ್ಶನ್ ಮಾತನಾಡಿ, ತಾಲ್ಲೂಕಿನ 9 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ದೂರುಗಳು ಬಂದಿದ್ದು, ಪಕ್ಕದ ಗ್ರಾಮಗಳಲ್ಲಿ ಲಭ್ಯವಿರುವ ನೀರಿನ ಮೂಲಗಳನ್ನು ಬಳಸಿಕೊಂಡು ಕೊಳವೆಬಾವಿ ಕೊರೆಸಿ ನೀರು ಪೂರೈಕೆ ಮಾಡಲಾಗುತ್ತಿದೆ. ಸಾರ್ವಜನಿಕರ ದೂರುಗಳಿಗೆ ತಕ್ಷಣ ಸ್ಪಂದಿಸಲು ಪಿಡಿಒಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಪೌರಾಯುಕ್ತ ವಿಶ್ವೇಶ್ವರ ಬದರಗಡೆ, ಜಿ.ಪಂ. ಗ್ರಾಮೀಣ ಕುಡಿಯುವ ನೀರು ವಿಭಾಗದ ಎಇಇ ನಾಗೇಂದ್ರ ಹಾಗೂ ಸಣ್ಣ ನೀರಾವರಿ ಇಲಾಖೆ ಎಇಇ ವಿನಯ್ ಉಪಸ್ಥಿತರಿದ್ದರು.

ವರದಿ :ಮಂಜುನಾಥ್ ಹಾಲ್ಕುರಿಕೆ

error: Content is protected !!