Spread the love

ತಿಪಟೂರು ಫೆ 26: ಜಲಸಂಪನ್ಮೂಲ ಇಲಾಖೆಯ ಎತ್ತಿನಹೊಳೆ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿರುವ ಸುಮಾರು 18ಕೋಟಿ ವೆಚ್ಚದ ವಿವಿಧ ರಸ್ತೆ ಅಭಿವೃದ್ದಿ ಕಾಮಗಾರಿಗಳಿಗೆ ಶಾಸಕ ಕೆ.ಷಡಕ್ಷರಿ ಗುದ್ದಲಿ ಪೂಜೆ ನೆರವೇರಿಸಿದರು.


ತಾಲ್ಲೋಕಿನ ಮದ್ಲೇಹಳ್ಳಿ–ಮಲ್ಲೇನಹಳ್ಳಿ ಹಾಗೂ ಅರಳಗುಪ್ಪೆ–ಬಳ್ಳೆಕಟ್ಟೆ ರಸ್ತೆ ಅಭಿವೃದ್ಧಿಗೆ ₹4.70 ಕೋಟಿ, ಶಿಡ್ಲೇಹಳ್ಳಿ–ರಾಮೇನಹಳ್ಳಿ–ದೇವರಹಳ್ಳಿ ರಸ್ತೆ ಅಭಿವೃದ್ಧಿಗೆ ಸುಮಾರು ₹4.50 ಕೋಟಿ, ಕೋಟೆನಾಯ್ಕನಹಳ್ಳಿ–ಬೊಮ್ಮಲಾಪುರ ರಸ್ತೆ ಅಭಿವೃದ್ಧಿಗೆ ಸುಮಾರು ₹4.40 ಕೋಟಿ ಹಾಗೂ ಮಾದಿಹಳ್ಳಿ–ಚಟ್ಟನಹಳ್ಳಿ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಸೇರಿವೆ. ಅಲ್ಲದೆ, ಹೊನ್ನವಳ್ಳಿ–ಸೂರನಹಳ್ಳಿ–ವಾಸುದೇವರಹಳ್ಳಿ–ಗೊಲ್ಲರಹಟ್ಟಿ ವ್ಯಾಪ್ತಿಯ ರಸ್ತೆ ಅಭಿವೃದ್ಧಿಗೆ ಸುಮಾರು ₹4 ಕೋಟಿ ವೆಚ್ಚದ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಯಿತು.


ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಕೆ. ಷಡಕ್ಷರಿ ಅವರು, ಗ್ರಾಮೀಣ ಭಾಗದ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ರಸ್ತೆ ಕಾಮಗಾರಿಯನ್ನ ಗುಣಮಟ್ಟದೊಂದಿಗೆ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.ನಾನು ಮೊದಲ ಅವಧಿಯಲ್ಲಿಯ ಶಾಸಕನಾಗಿದ ವೇಳೆ ಸೂರನಹಳ್ಳಿ–ಹನುಮಂತಪುರ ಗಡಿಭಾಗದ ರಸ್ತೆಗಳ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದಾಗಿ ಅವರು ನೆನಪಿಸಿದರು. ಪ್ರಸ್ತುತ ತಾಲ್ಲೂಕಿನಲ್ಲಿ ಸುಮಾರು ₹30 ಕೋಟಿ ಮೌಲ್ಯದ ರಸ್ತೆ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಇನ್ನೂ ಕೆಲವು ಯೋಜನೆಗಳು ಅನುಮೋದನೆ ಹಂತದಲ್ಲಿವೆ. ಅವುಗಳನ್ನೂ ಶೀಘ್ರದಲ್ಲೇ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ನ್ಯಾಕೆಡನಹಳ್ಳಿ ಸುರೇಶ್, ಹೊನ್ನವಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪುರುಷೋತ್ತಮ್, ಮಾದಿಹಳ್ಳಿ ರೇಣು, ಬಸವರಾಜು, ಚಟ್ಟನಹಳ್ಳಿ ಮಹಲಿಂಗಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವರದಿ :ಮಂಜುನಾಥ್ ಹಾಲ್ಕುರಿಕೆ

error: Content is protected !!