ತಿಪಟೂರು: ಬೆಸ್ಕಾಂ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಲೈನ್‌ಮ್ಯಾನ್ ಬಲಿಯಾದ ಹೃದಯವಿದ್ರಾವಕ ಘಟನೆ ತಿಪಟೂರಿನಲ್ಲಿ ನಡೆದಿದೆ.
ತಾಲೂಕಿನ ಚೌಡ್ಲಾಪುರ ಗ್ರಾಮದ ಬಳಿ ವಿದ್ಯುತ್ ಪರಿವರ್ತಕ (ಟಿಸಿ) ಅಳವಡಿಸುವ ವೇಳೆ ವಿದ್ಯುತ್ ಶಾಕ್ ತಗುಲಿ ಲೈನ್‌ಮ್ಯಾನ್ ಮೃತಪಟ್ಟಿದ್ದಾರೆ. ಕಲ್ಲುಶೆಟ್ಟಿಹಳ್ಳಿ ಗ್ರಾಮದ ಕೆ.ಪಿ. ಮನು (26) ಮೃತ ಲೈನ್‌ಮ್ಯಾನ್ ಆಗಿದ್ದಾರೆ.
ಬೆಳಿಗ್ಗೆ ಎಂದಿನಂತೆ ಕೆಲಸಕ್ಕೆ ತೆರಳಿದ್ದ ಲೈನ್‌ಮ್ಯಾನ್ ಮನು ಹಾಗೂ ಜಂಗಲ್ ಕ್ಲಿಯರೆನ್ಸ್ ಸಿಬ್ಬಂದಿ ಟಿಸಿ ಬದಲಾಯಿಸುವ ವೇಳೆ ವಿದ್ಯುತ್ ಶಾಕ್ ತಗುಲಿ ಕಂಬದಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮೃತದೇಹವನ್ನು ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿದೆ.
ಟಿಸಿ ಬದಲಾಯಿಸುವ ಸಂದರ್ಭದಲ್ಲಿ ಬೆಸ್ಕಾಂ ಅಧಿಕಾರಿಗಳು ಲೈನ್ ಕ್ಲಿಯರ್ (ಮಾರ್ಗಮುಕ್ತತೆ) ನೀಡದೆ ಕರ್ತವ್ಯಕ್ಕೆ ನಿಯೋಜಿಸಿರುವುದೇ ಈ ಅಪಘಾತಕ್ಕೆ ಕಾರಣವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಲೈನ್‌ಮ್ಯಾನ್ ಸಾವಿಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಸ್ಕಾಂ ಬೆಳಿಗೆರೆ ಶಾಖೆಯ ಕಿರಿಯ ಇಂಜಿನಿಯರ್ ಕುಶಲಾಕ್ಷ ಅವರ ನಿರ್ಲಕ್ಷ್ಯದಿಂದ ಬೆಳಿಗೆರೆ ವ್ಯಾಪ್ತಿಯಲ್ಲಿ ಈಗಾಗಲೇ ಮೂರು ಅಪಘಾತಗಳು ಸಂಭವಿಸಿರುವುದಾಗಿ ಪ್ರತಿಭಟನಾಕಾರರು ಆರೋಪಿಸಿದರು. ಅವರ ವಿರುದ್ಧ ತಕ್ಷಣ ಕ್ರಮ ಕೈಗೊಂಡು ಅಮಾನತುಗೊಳಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಇದಲ್ಲದೆ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಮೃತನ ಕುಟುಂಬಕ್ಕೆ ಸಮರ್ಪಕ ಪರಿಹಾರ ನೀಡಬೇಕು ಹಾಗೂ ಮೃತನ ಪತ್ನಿಗೆ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ಮಾತನಾಡಿ, ಬೆಳಿಗ್ಗೆ ಸುಮಾರು 11.30ಕ್ಕೆ ಘಟನೆ ನಡೆದಿದ್ದರೂ ಗ್ರಾಮಸ್ಥರಿಗೆ ತಕ್ಷಣ ಮಾಹಿತಿ ನೀಡಿಲ್ಲ. ಲೈನ್‌ಮ್ಯಾನ್ ಜೊತೆ ಬೆಸ್ಕಾಂ ಮೇಸ್ತ್ರಿಯನ್ನು ಕಳುಹಿಸಬೇಕಾಗಿದ್ದರೂ ಕಳುಹಿಸಲಿಲ್ಲ. ಟಿಸಿ ಸ್ಥಳಾಂತರದ ವೇಳೆ ಲೈನ್ ಸ್ಥಗಿತಗೊಳಿಸಿರುವ ಬಗ್ಗೆ ಯಾವುದೇ ಮಾಹಿತಿ ನೀಡಲಿಲ್ಲ ಎಂದು ಆರೋಪಿಸಿದರು.
ವರದಿ: ಮಂಜುನಾಥ್ ಹಾಲ್ಕುರಿಕೆ





