ತಿಪಟೂರು: ತಾಲ್ಲೂಕು ಎಲ್ಲಾ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿ ಹೊಂದುವಂತೆ ಕ್ರಮ ಕೈಗೊಳ್ಳಲಾಗುತ್ತಿದ್ದು, ನಗರ ಹಾಗೂ ಗ್ರಾಮೀಣ ಭಾಗಗಳ ಕುಡಿಯುವ ನೀರಿಗೆ ಆದ್ಯತೆ ನೀಡಲಾಗಿದೆ. ಇನ್ನೊಂದು ತಿಂಗಳೊಳಗೆ ತಿಪಟೂರು ನಗರಕ್ಕೆ ಕುಡಿಯುವ ನೀರು ಒದಗಿಸುವ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಶಾಸಕ ಕೆ. ಷಡಕ್ಷರಿ ತಿಳಿಸಿದ್ದಾರೆ.
ನಗರದ ಕೃಷಿ ಇಲಾಖೆ ಆವರಣದಲ್ಲಿ ಕೃಷಿ, ಗ್ರಾಮೀಣ ಕೈಗಾರಿಕೆ ಹಾಗೂ ಕಾರ್ಮಿಕ ಇಲಾಖೆಗಳ ವಿವಿಧ ಸೌಲಭ್ಯಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,

“ನಾನು ರೈತನ ಮಗನಾಗಿ ರೈತರು ಮತ್ತು ಬಡವರ ಪರವಾಗಿ ಕೆಲಸ ಮಾಡುವುದು ನನ್ನ ಆದ್ಯತೆ. ತಾಲ್ಲೂಕಿನ ಅಭಿವೃದ್ಧಿಗಾಗಿ ಹಲವು ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದ್ದು, ಅವು ಪ್ರಗತಿಯಲ್ಲಿವೆ” ಎಂದು ಹೇಳಿದರು.
ಗ್ರಾಮೀಣ ಕುಡಿಯುವ ನೀರಿನ ಯೋಜನೆಯಡಿ ಗನ್ನಿಗಡದಿಂದ ನೀರು ತಂದು ಮನೆಮನೆಗೆ ಪೂರೈಕೆ ಮಾಡುವ ಕಾಮಗಾರಿ ಏಪ್ರಿಲ್ ವೇಳೆಗೆ ಪೂರ್ಣಗೊಳ್ಳಲಿದೆ. ನಗರ ಕುಡಿಯುವ ನೀರಿನ ಯೋಜನೆ ಒಂದು ತಿಂಗಳಿನಲ್ಲಿ ಆರಂಭಿಸಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ರಾಜ್ಯದ ಪ್ರತಿಯೊಬ್ಬ ಪ್ರಜೆಗೆ ಕನಿಷ್ಠ ಸೌಲಭ್ಯ ಒದಗಿಸುವುದು ಸರ್ಕಾರದ ಧ್ಯೇಯವಾಗಿದೆ. ಯಾವುದೇ ವ್ಯಕ್ತಿ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಅನ್ನಭಾಗ್ಯ ಯೋಜನೆಯಡಿ ಹತ್ತು ಕೆಜಿ ಅಕ್ಕಿಗೆ ಬದಲಾಗಿ ಐದು ಕೆಜಿ ಅಕ್ಕಿ, ಒಂದು ಕೆಜಿ ಬೇಳೆ ಹಾಗೂ ಒಂದು ಕೆಜಿ ಎಣ್ಣೆ ಒಳಗೊಂಡ ‘ಇಂದಿರಾ ಕಿಟ್’ ವಿತರಿಸಲು ಬಜೆಟ್ ನಂತರ ಕ್ರಮ ಕೈಗೊಳ್ಳಲಾಗುವುದು ಮತ್ತೆ ಮುಂದಿನ ಭಾರಿಯೂ ಜನರು ಕಾಂಗ್ರೇಸ್ ಪಕ್ಷಕ್ಕೆ ಆಶೀರ್ವಾದ ಮಾಡಿದರೆ ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸಲಾಗುವುದು ಎಂದರು.
ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ಆಧುನಿಕ ಕೃಷಿ ಪರಿಕರಗಳನ್ನು ವಿತರಿಸಲಾಗುತ್ತಿದೆ. ರೈತರು ಆಧುನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು ಹೆಚ್ಚಿನ ಇಳುವರಿ ಪಡೆಯಬೇಕು ಎಂದು ಕರೆ ನೀಡಿದರು. ಕಾರ್ಮಿಕರ ಮಕ್ಕಳ ಅನುಕೂಲಕ್ಕಾಗಿ 6ನೇ ತರಗತಿಯಿಂದ ಪಿಯುಸಿ ವರೆಗೆ ಕಾರ್ಮಿಕ ವಸತಿ ಶಾಲೆ ಆರಂಭಿಸಲು ಬಜೆಟ್‌ನಲ್ಲಿ ₹38 ಕೋಟಿ ಅನುದಾನ ಮಂಜೂರಾಗಿದೆ. ಇಎಸ್ಐ ಆಸ್ಪತ್ರೆಯೂ ಮಂಜೂರಾಗಿದೆ ಎಂದು ತಿಳಿಸಿದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪವನ್ ಕುಮಾರ್ ಮಾತನಾಡಿ, ಆತ್ಮ ಯೋಜನೆಯಡಿ ರೈತರಿಗೆ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಸಾವಿರ ರೈತರ ಜಮೀನುಗಳಲ್ಲಿ ಮಣ್ಣು ಪರೀಕ್ಷೆ ನಡೆಸಿ ಮಣ್ಣು ಪರೀಕ್ಷಾ ಕಾರ್ಡ್‌ಗಳನ್ನು ವಿತರಿಸಲಾಗುತ್ತಿದೆ ಎಂದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಮಾತನಾಡಿ, ರೈತರು ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಕೃಷಿಯಲ್ಲಿ ಹೆಚ್ಚಿನ ಇಳುವರಿ ಪಡೆಯಬೇಕು. ಕೃಷಿ ಇಲಾಖೆಯಿಂದ ದೊರೆಯುವ ಮಾಹಿತಿಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಯೋಗಿಶ್, ಉಪಾಧ್ಯಕ್ಷ ಮೋಹನ್, ನಿರ್ದೇಶಕರಾದ ಸಂಗಮೇಶ್ ಮತ್ತು ಬಸವರಾಜು, ಟಿಎಪಿಸಿಎಂಎಸ್ ಅಧ್ಯಕ್ಷ ಮುದ್ದೇಗೌಡ, ದೇವರಾಜ ಅರಸು ಅಭಿವೃದ್ಧಿ ನಿಗಮದ ನಿರ್ದೇಶಕಿ ಉಮಾದೇವಿ, ಗ್ರಾಮೀಣ ಕೈಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಸುಮನ, ಕಾರ್ಮಿಕ ನಿರೀಕ್ಷಕಿ ಸುಶೀಲಮ್ಮ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ :ಮಂಜುನಾಥ್ ಹಾಲ್ಕುರಿಕೆ





