Spread the love

ತಿಪಟೂರು: ತಾಲ್ಲೂಕಿನ ಕಸಬಾ ಹೋಬಳಿಯ ಜೈಪುರ ರಸ್ತೆ ಚಿಕ್ಕಕೊಟ್ಟಗಿಹಳ್ಳಿ ಗ್ರಾಮದ ಬಳಿಯ ತೋಟವೊಂದರಲ್ಲಿ ಗುಜರಿ ವ್ಯಾಪಾರಿಯ ಭೀಕರ ಕೊಲೆ ನಡೆದಿದ್ದು, ಗ್ರಾಮಸ್ಥರಲ್ಲಿ ಆತಂಕ ಉಂಟುಮಾಡಿದೆ.
ತಿಪಟೂರು ನಗರದ ಆರ್‌.ಸಿ.ಸಿ ಟ್ಯಾಂಕ್ ರಸ್ತೆ 3ನೇ ಕ್ರಾಸ್ ನಿವಾಸಿ ಮನ್ಸೂರ್ (32) ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆ.
ಮಾರ್ಚ್ 4ರಂದು ಗುಜರಿ ವ್ಯಾಪಾರಕ್ಕಾಗಿ ಹಳ್ಳಿಗೆ ತೆರಳಿದ್ದ ಮನ್ಸೂರ್ ಮಧ್ಯಾಹ್ನವಾದರೂ ಮನೆಗೆ ಮರಳದ ಕಾರಣ, ಪತ್ನಿ ಮತ್ತು ತಾಯಿ ಅವರ ಮೊಬೈಲ್‌ಗೆ ಹಲವು ಬಾರಿ ಕರೆ ಮಾಡಿದ್ದಾರೆ. ಆದರೆ ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ, ಕುಟುಂಬದವರು ಮತ್ತು ಸ್ನೇಹಿತರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನ ಆಧಾರದಲ್ಲಿ ಪೊಲೀಸರು ತನಿಖೆ ಆರಂಭಿಸಿದಾಗ ರಂಗಾಪುರ ರಸ್ತೆ ಜೈಪುರ ರಸ್ತೆ ಚಿಕ್ಕಕೊಟ್ಟಗಿಹಳ್ಳಿ ಬಳಿಯ ರಸ್ತೆ ಸಮೀಪ ಮನ್ಸೂರ್ ಅವರಿಗೆ ಸೇರಿದ ಗುಜರಿ ವ್ಯಾಪಾರದ ಆಟೋ ರಿಕ್ಷಾ ಪತ್ತೆಯಾಗಿದೆ. ಆಟೋ ನಿಂತಿದ್ದ ಸ್ಥಳದಿಂದ ಸ್ವಲ್ಪ ದೂರದಲ್ಲೇ ರಾಜಮ್ಮ ಎಂಬುವವರ ಆಡಿಕೆ ತೋಟದದಲ್ಲಿ ಮನ್ಸೂರ್ ಅವರ ಶವ ಪತ್ತೆಯಾಗಿದೆ.
ಶವವನ್ನು ಮರಣೋತ್ತರ ಪರೀಕ್ಷೆಗಾಗಿ ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿದೆ. ಪ್ರಕರಣವನ್ನು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಂಡು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಮೃತ ಮನ್ಸೂರ್ ಅವರು ಕೇವಲ2 ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು ಎಂದು ತಿಳಿದುಬಂದಿದೆ.

ವರದಿ :ಮಂಜುನಾಥ್ ಹಾಲ್ಕುರಿಕೆ

error: Content is protected !!