ತಿಪಟೂರು: ಇಂದಿನ ದಿನಮಾನದಲ್ಲಿ ಯುವಕರು ಉತ್ತಮ ಆರೋಗ್ಯ ಹಾಗೂ ಸದೃಢ ಮನಸ್ಸನ್ನು ಹೊಂದಲು ಕ್ರೀಡೆಯಲ್ಲಿ ಭಾಗವಹಿಸುವುದು ಅಗತ್ಯವಾಗಿದೆ ಎಂದು ಕೆಪಿಸಿಸಿ ಸದಸ್ಯ ವಿ.ಯೋಗೇಶ್ ತಿಳಿಸಿದರು.
ತಾಲೂಕಿನ ಹೊನ್ನವಳ್ಳಿ ಹೋಬಳಿಯ ಬ್ಯಾಡರಹಳ್ಳಿ ಗ್ರಾಮದ ಶ್ರೀ ಸತ್ಯ ಗಣಪತಿ ವಿನಾಯಕ ಗೆಳೆಯರ ಬಳಗದ ವತಿಯಿಂದ ಶ್ರೀ ಗಣಪತಿ ಮೂರ್ತಿ ವಿಸರ್ಜನಾ ಮಹೋತ್ಸವ ಹಾಗೂ ಗ್ರಾಮ ದೇವರುಗಳ ಪರವು ಅಂಗವಾಗಿ ಮೂರನೇ ವರ್ಷದ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು.

ಪಂದ್ಯಾವಳಿಯಲ್ಲಿ ಭಾಗವಹಿಸಿ ಮಾತನಾಡಿದ ವಿ.ಯೋಗೇಶ್, ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸುವುದರಿಂದ ಗ್ರಾಮಗಳ ನಡುವೆ ಸ್ನೇಹ ಸೇತುವೆ ನಿರ್ಮಾಣವಾಗುವುದರ ಜೊತೆಗೆ ಯುವಕರು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗಲು ಸಹಕಾರಿಯಾಗುತ್ತದೆ. ಇಂತಹ ಕ್ರೀಡಾಕೂಟಗಳನ್ನು ನಿರಂತರವಾಗಿ ಆಯೋಜಿಸುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ತಾಪಂ ಮಾಜಿ ಸದಸ್ಯ ರವಿಕುಮಾರ್ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಕ್ರೀಡಾ ಚಟುವಟಿಕೆಗಳು ಕಡಿಮೆಯಾಗುತ್ತಿವೆ. ಯುವಕರನ್ನು ಕ್ರೀಡೆಯತ್ತ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅಗತ್ಯ ಬೆಂಬಲ ನೀಡಲಾಗುತ್ತಿದೆ. ಪ್ರತಿಯೊಂದು ಗ್ರಾಮದಲ್ಲಿಯೂ ಕ್ರೀಡಾ ಚಟುವಟಿಕೆಗಳು ಮುಂದುವರಿಯಬೇಕು ಎಂದು ಆಶಿಸಿದರು.
ಕಾಂಗ್ರೆಸ್ ಯುವ ಮುಖಂಡ ತಿಲಕ್ ಕುಮಾರ್ ಮಾತನಾಡಿ, ಯುವಕರು ದುಶ್ಚಟಗಳಿಗೆ ಬಲಿಯಾಗದೆ, ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ ಇಂತಹ ಆರೋಗ್ಯಕರ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಯುವಕರು ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು.
ಪಂದ್ಯಾವಳಿಯಲ್ಲಿ ಹಾಲೇನಹಳ್ಳಿ ಗೊಲ್ಲರಹಟ್ಟಿ ಯುವಕರ ತಂಡ ಪ್ರಥಮ ಬಹುಮಾನವಾಗಿ ₹10,000 ಹಾಗೂ ಟ್ರೋಫಿ, ಬ್ಯಾಡರಹಳ್ಳಿ ಗೆಳೆಯರ ಬಳಗದ ತಂಡ ದ್ವಿತೀಯ ಬಹುಮಾನವಾಗಿ ₹5,000 ಹಾಗೂ ಟ್ರೋಫಿ ಹಾಗೂ ಕಲ್ಕೆರೆ ಗ್ರಾಮದ ಯುವಕರ ತಂಡ ತೃತೀಯ ಬಹುಮಾನವಾಗಿ ₹3,000 ಹಾಗೂ ಟ್ರೋಫಿಯನ್ನು ಪಡೆದುಕೊಂಡವು.
ಕಾರ್ಯಕ್ರಮದಲ್ಲಿ ಜಯಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ಬಿ.ಟಿ.ಕುಮಾರ್, ಎಪಿಎಂಸಿ ಮಾಜಿ ಸದಸ್ಯ ಕಾಂತರಾಜು, ಗುತ್ತಿಗೆದಾರ ವಿ.ಎ.ಯೋಗೇಶ್, ಗ್ರಾಮದ ಮುಖಂಡರಾದ ಶಂಕರಪ್ಪ, ಹೊನ್ನಪ್ಪ, ಅಶೋಕ್, ಗೆಳೆಯರ ಬಳಗದ ಪ್ರಜ್ವಲ್ ಹಾಗೂ ದಯಾನಂದ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದರು
ವರದಿ :ಮಂಜುನಾಥ್ ಹಾಲ್ಕುರಿಕೆ





