Spread the love

ತಿಪಟೂರು: ಕನ್ನಡ ಚಲನಚಿತ್ರ ರಂಗದ ಸಂಗೀತ ಕ್ಷೇತ್ರದಲ್ಲಿ ಹಾಡುಗಾರಿಕೆಯನ್ನು ಉಸಿರಾಗಿಸಿಕೊಂಡ ಜಾನಕಮ್ಮನವರ ಸ್ವರ ಮಾಧುರ್ಯಕ್ಕೆ ಮನ ಸೋಲದವರೇ ಇಲ್ಲ ಎಂದು ಶ್ರೀ ಸಿದ್ಧಿವಿನಾಯಕ ಸೇವಾ ಸಂಘದ ಅಧ್ಯಕ್ಷ ಮಾದಿಹಳ್ಳಿ ಉಮೇಶ್ ತಿಳಿಸಿದರು.

ತಾಲೂಕಿನ ಮೀಸೆ ತಿಮ್ಮನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಜಯಕರ್ನಾಟಕ ಜನಪರ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಇತ್ತೀಚೆಗೆ ನಿಧನರಾದ ಕನ್ನಡ ಚಲನಚಿತ್ರ ರಂಗದ ಗಾನಕೋಗಿಲೆ ಎಸ್.ಜಾನಕಿ ಅಮ್ಮನವರಿಗೆ ನುಡಿ ನಮನ ಹಾಗೂ ಸ್ಮರಣಾರ್ಥವಾಗಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ಮತ್ತು ಲೇಖನ ಸಾಮಗ್ರಿಗಳ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸುಮಾರು 48 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ ಅಸಾಧಾರಣ ಗಾಯಕಿ. 30ಕ್ಕೂ ಹೆಚ್ಚು ಭಾರತೀಯ ಭಾಷೆಗಳು ಸೇರಿದಂತೆ, ಕೆಲವು ವಿದೇಶಿ ಭಾಷೆಗಳಲ್ಲಿ ಗಾಯನ ಸಂಯೋಜನೆ ಮಾಡಿ, ಚಲನಚಿತ್ರರಂಗದ ವರ್ಚಸ್ಸನ್ನು ಹೆಚ್ಚಿಸಿದ್ದಾರೆ ಎಂದು ತಿಳಿಸಿದರು.

ಎಸ್‌ಡಿಎಂಸಿ ಅಧ್ಯಕ್ಷ ತೋಂಟರಾಧ್ಯ ಮಾತನಾಡಿ, ನಮ್ಮ ಶಾಲೆಯನ್ನು ಗುರುತಿಸಿ, ಸ್ವರ ಸಾಮ್ರಾಜ್ಯ ಲೋಕದ ತಾರೆ ಜಾನಕಮ್ಮನವರ ಹೆಸರಿನಲ್ಲಿ ಮಕ್ಕಳ ವಿದ್ಯಾಭ್ಯಾಸದಲ್ಲಿ ಅನುಕೂಲವಾಗಲೆಂದು ಪರಿಕರಗಳನ್ನು ವಿತರಿಸಿರುವುದು ಸಂಗೀತ ಲೋಕಕ್ಕೆ ಸಂದ ಗೌರವವಾಗಿದೆ. 60 ವರ್ಷಗಳ ಸಂಗೀತ ಪಯಣದಲ್ಲಿ ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, 33 ವಿವಿಧ ರಾಜ್ಯಗಳ ಚಲನಚಿತ್ರ ಪ್ರಶಸ್ತಿಗಳು ಮುಡುಗೇರಿಸಿಕೊಂಡು, ಅವರ ಕಂಠಕ್ಕೆ ಸರಿಸಾಟಿ ಇಲ್ಲದಂತೆ ಬೆಳೆದು ಅಜರಾಮರಾಗಿದ್ದಾರೆ ಎಂದು ತಿಳಿಸಿದರು.

ಹಿರಿಯ ಮುಖಂಡ ಭಾಸ್ಕರ್ ಮಾತನಾಡಿ, ಇಂತಹ ಕುಗ್ರಾಮದಲ್ಲಿ ಗ್ರಾಮೀಣ ಪ್ರತಿಭೆಯ ಮಕ್ಕಳನ್ನು ಗುರುತಿಸಿ, ಎಸ್.ಜಾನಕಿ ಅಮ್ಮನವರ ಕನ್ನಡ ಚಲನಚಿತ್ರರಂಗದ ಸೇವೆಯನ್ನು ನೆನೆದು, ಮಕ್ಕಳಿಗೆ ಪರಿಚಯಿಸಲೆಂದು ಜಯಕರ್ನಾಟಕ ಜನಪರ ವೇದಿಕೆಯು ನುಡಿ ನಮನ ಹಮ್ಮಿಕೊಂಡಿರುವುದು, ಸಂಘಟನೆಯ ಸಾಮಾಜಿಕ ಸೇವೆಗೆ ಸಾಕ್ಷಿಯಾಗಿದೆ. ತಾಲೂಕಿನಲ್ಲಿ ಸಂಘಟನೆಯು ನೂರಾರು ಸಮಾಜಮುಖಿ ಕಾರ್ಯಕ್ರಮಗಳು ಹಮ್ಮಿಕೊಂಡು ಬರುತ್ತಿರುವುದು ಶ್ಲಾಘನೀಯ. ಅವರ ಹಾಡುಗಳು ಇಂದಿಗೂ ಜನಪ್ರಿಯತೆ ಮತ್ತು ಪದೇಪದೇ ಅವರು ಹಾಡಿದ ಹಾಡುಗಳನ್ನು ಕೇಳಲು ಮನಸ್ಸಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಅಗಲಿದ ಹಿರಿಯರಾದ ಶ್ರೀಮತಿ ಚನ್ನಮ್ಮ ದೇವೇಗೌಡರಿಗೆ ಹಾಗೂ ಅಮೃತವಾಣಿ ದಿನಪತ್ರಿಕೆಯ ಸಹ ಸಂಪಾದಕಿ ಶ್ರೀಮತಿ ಕಮಲ ಗಂಗಾಹನುಮಯ್ಯನವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಕಾರ್ಯಕ್ರಮದಲ್ಲಿ ಆಯೋಜಕ ಹಾಗೂ ಸಂಘಟನೆಯ ತಾ.ಅಧ್ಯಕ್ಷ ಬಿ.ಟಿ.ಕುಮಾರ್, ಮುಖಂಡ ಆರ್.ವಿ.ನಟರಾಜು, ಮಾನ್ಯಶ್ರೀ ಕೋಕಾನೆಟ್ ನ ಧನಂಜಯ್, ಗ್ರಾಪಂ ಮಾಜಿ ಸದಸ್ಯರಾದ ಪಾರ್ವತಿಬಾಯಿ ಮತ್ತು ಲಕ್ಷ್ಮಣ್ ನಾಯಕ್, ಮುಖ್ಯ ಶಿಕ್ಷಕ ಬುದ್ಧ ಪ್ರಸಾದ್,ಸಹ ಶಿಕ್ಷಕಿ ಶೋಭಕುಮಾರಿ,ಹಿರಿಯ ವಿದ್ಯಾರ್ಥಿ ಸಂಘದ ಮೋಹನ್, ಗ್ರಾಮಸ್ಥರಾದ ರಾಮನಾಯಕ್, ವಿನಯ್,ಮಲ್ಲಿಕಾರ್ಜುನಯ್ಯ, ಪವನ್,ರವಿ,ಆನಂದಕುಮಾರ್, ಶಾಲಾ ಜಮೀನಿನ ದಾನಿ ಗಿರಿಜಮ್ಮ,ಪೂಜಾ,ರೇಖಾ ಮತ್ತು ಅನಿತಾ ಸೇರಿದಂತೆ ಪೋಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ವರದಿ :ಮಂಜುನಾಥ್ ಹಾಲ್ಕುರಿಕೆ

error: Content is protected !!