ತಿಪಟೂರು : ಬಯಲು ಸೀಮೆ ಸಾಂಸ್ಕೃತಿಕ ಹಾಗೂ ಸಮಾಜಿಕ ಸಂಘ ಕೊಡಮಾಡುವ ಕನ್ನಡ ಸಾಹಿತ್ಯ ಕಲ್ಪತರು, ಪ್ರಶಸ್ತಿಯು ಹತ್ತು ಸಾವಿರ ನಗದು, ಫಲಕ ಮತ್ತು ಸನ್ಮಾನಗಳನ್ನು ಒಳಗೊಂಡಿದೆಯೆಂದು ಸಂಘದ ಪ್ರಧಾನ ಕಾರ್ಯದರ್ಶಿ ಎನ್. ಬಾನುಪ್ರಶಾಂತ್ ಅವರು ತಿಳಿಸಿದ್ದಾರೆ.
ಆಧ್ಯಾತ್ಮಿಕ ಚಿಂತಕರು, ಶ್ರೇಷ್ಠ ವಾಗ್ಮಿಗಳು ಆಗಿರುವ ವೈ.ವಿ. ಗುಂಡೂರಾವ್ ರವರ ಸಾಧನೆಗಾಗಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಸಂಘವು ಕೊಡ ಮಾಡುತ್ತಿರುವ ಏಳನೆಯ ಪ್ರಶಸ್ತಿಯಾಗಿದ್ದು, ಇದುವರೆಗೂ “ಕನ್ನಡ ಸಾಹಿತ್ಯ ಕಲ್ಪತರು” ಪ್ರಶಸ್ತಿಗೆ ಹಿರಿಯ ಕವಿಗಳಾದ ಡುಂಡಿರಾಜ್, ಬಿ.ಆರ್. ಲಕ್ಷ್ಮಣರಾವ್, ಕನ್ನಡ ಶಾಯರಿ ಕವಿ ಅಸಾದುಲ್ಲಾ ಬೇಗ್, ಥಟ್ ಅಂತ ಹೇಳಿ ಡಾ. ನಾ. ಸೋಮೇಶ್ಬರ ಕವಿಯತ್ರಿ ಪ್ರೊ. ಎಂ.ಆರ್. ಕಮಲ ಹಾಗೂ ಮಿಮಿಕ್ರಿ ಕಲಾವಿದ ಮೈಸೂರ್ ಆನಂದ್, ರಿಚರ್ಡ್ ಲೂಯಿಸ್ ಅವರುಗಳನ್ನು ಆಯ್ಕೆ ಮಾಡಲಾಗಿದೆ.
ಸಾಹಿತಿ ವಿಮರ್ಶಕ ಹೆಚ್.ಎಸ್. ಸತ್ಯನಾರಾಯಣ ಮತ್ತು ಸಾಹಿತಿ ತುರುವೇಕೆರೆ ಪ್ರಸಾದ್ ನೇತೃತ್ವ ಸಮಿತಿಯ ಹಿರಿಯ ಚಿಂತಕ ಉಜ್ಜಜ್ಜಿ ರಾಜಣ್ಣ, ಪ್ರಾಚಾರ್ಯ ಕೆ.ಎನ್. ರೇಣುಕಯ್ಯ, ಉಪನ್ಯಾಸಕ ಎಲ್.ಎಂ. ವೆಂಕಟೇಶ್, ಶಿಕ್ಷಕರಾದ ಪಟ್ಟಾಭಿರಾಮು, ನಿವೃತ ಬ್ಯಾಂಕ್ ಮ್ಯಾನೇಜರ್ ಆರ್.ಎಂ. ಕುಮಾರಸ್ವಾಮಿ, ಪತ್ರಕರ್ತರಾದ ರಮೇಶ್ ಚಿ. ಸಾರಂಗಿ, ಸತೀಶ್ ಯಲದಬಾಗಿ ರವರನ್ನೊಳಗೊಂಡ ಆಯ್ಕೆ ಸಮಿತಿಯು ವೈ.ವಿ. ಗುಂಡೂರಾವ್ ರವರನ್ನು ಆಯ್ಕೆ ಮಾಡಿದ್ದು, ಅವರಿಗೆ 25ನೇ ವರ್ಷದ ಸಂಭ್ರಮದಲ್ಲಿರುವ ಬಯಲುಸೀಮೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘವು ಪ್ರೀತಿ ಪೂರ್ವಕವಾದ ಅಭಿನಂದನೆ ಸಲ್ಲಿಸುತ್ತದೆ.
ಪ್ರಶಸ್ತಿ ಪ್ರದಾನ ಸಮಾರಂಭವು ಜೂನ್ 13 ಶನಿವಾರ ಸಂಜೆ 6.00 ಗಂಟೆಗೆ, ತಿಪಟೂರು ನಗರದ ಶ್ರೀ ಸತ್ಯ ಗಣಪತಿ ಆಸ್ಥಾನ ಮಂಟಪದಲ್ಲಿ ಜರುಗಲಿದೆ.
ಸಮಾರಂಭದಲ್ಲಿ ಶಾಸಕರಾದ ಕೆ. ಷಡಕ್ಷರಿ, ಮಾಜಿ ಶಿಕ್ಷಣ ಸಚಿವರಾದ ಬಿ.ಸಿ. ನಾಗೆಶ್, ಸಂಯುಕ್ತ ಕರ್ನಾಟಕ ಪತ್ರಿಕೆ, ಸಂಪಾದಕೀಯ ಸಲಹೆಗಾರರಾದ ಹುಣಸವಾಡಿ ರಾಜನ್, ಹಿರಿಯ ರಂಗಕರ್ಮಿಗಳಾದ ಪಾಲ್ ಸುದರ್ಶನ್, ಪರೇಶ್ ಜವಾಲಿ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಮಕ್ಕಳ ಸಾಹಿತಿ ಟಿ.ಎಸ್. ನಾಗರಾಜಶೆಟ್ಟಿ, ನಿವೃತ ಎ.ಸಿ.ಪಿ. ಲೋಕೇಶ್ಬರ, ಅಸಿಸ್ಟೆಂಟ್ ಕಮಿಷನರ್ ಸಪ್ತಶ್ರಿ ಬಿ.ಕೆ., ಡಿ.ವೈ.ಎಸ್.ಪಿ. ಉಮೇಶ್, ತಹಶೀಲ್ದಾರ್ ಜಿ.ವಿ. ಮೋಹನ್ ಕುಮಾರ್, ಇ.ಓ. ಹೆಚ್.ಎಂ. ಸುದರ್ಶನ್, ಪೌರಾಯುಕ್ತರು ವಿಶ್ವೇಶ್ವರ ಬದರಗಡೆ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ. ತುಮಕೂರಿನ ಪ್ರಸಿದ್ದ ಸುಗಮ ಸಂಗೀತ ಗಾಯಕಿ ರೂಪ ನಾಗೇಂದ್ರ ಮತ್ತು ಶಿಭಿರಾರ್ಥಿ ವಿದ್ಯಾರ್ಥಿಗಳಿಂದ ಭಾವಗೀತ ಗಾಯನ ಏರ್ಪಡಿಸಲಾಗಿದೆ.





