Spread the love

ತಿಪಟೂರು: ಇತ್ತೀಚಿನ ದಿನಗಳಲ್ಲಿ ತಂದೆ–ತಾಯಿಯ ಆಸ್ತಿಯನ್ನು ಪಡೆಯಲು ಮಕ್ಕಳು ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಿಸುವ ಘಟನೆಗಳು ಹೆಚ್ಚುತ್ತಿರುವುದು ಸಮಾಜದಲ್ಲಿ ಕ್ರೌರ್ಯದ ಸಂಕೇತವಾಗಿದ್ದು, ಅವಮಾನಕರ ಪರಿಸ್ಥಿತಿಯನ್ನು ಉಂಟುಮಾಡುತ್ತಿದೆ ಎಂದು ಚಿತ್ರದುರ್ಗ ಜಿಲ್ಲೆಯ ಸಿರಿಗೆರೆ ತರಳಬಾಳು ಜಗದ್ಗುರು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ಕೆ.ಆರ್. ಬಡಾವಣೆ ಗೋವಿನಪುರ ಸರ್ಕಲ್‌ನಲ್ಲಿ ನಿರ್ಮಿಸಲಾದ ಶಿವ ವಿವಿಧೋದ್ದೇಶ ಸಹಕಾರ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿ ಶ್ರೀಗಳು ಮಾತನಾಡಿದರು.
ಇಂತಹ ಘಟನೆಗಳಿಂದ ಕುಟುಂಬ ಸಂಬಂಧಗಳಲ್ಲಿ ಬಿರುಕುಗಳು ಮೂಡಿ ಸಂಬಂಧಗಳು ದೂರವಾಗುತ್ತಿರುವುದು ದುಃಖಕರ ಸಂಗತಿಯಾಗಿದೆ ಎಂದರು. ತಂದೆ–ತಾಯಿ ಮತ್ತು ಮಕ್ಕಳ ನಡುವಿನ ಸಂಬಂಧವು ಅತ್ಯಂತ ಅಮೂಲ್ಯವಾದದ್ದು. ಅಂತಹ ಸಂದರ್ಭಗಳಲ್ಲಿ ನ್ಯಾಯಾಲಯದ ಮೊರೆ ಹೋಗುವುದಕ್ಕಿಂತ ಪರಸ್ಪರ ಕುಳಿತು ಮಾತನಾಡಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದು ಉತ್ತಮ.
ಮನುಷ್ಯನ ಜೀವನದಲ್ಲಿ ಮಾನವೀಯ ಸಂಬಂಧಗಳು ಅತ್ಯಂತ ಮುಖ್ಯವಾಗಿದ್ದು, ಮನುಷ್ಯ–ಮನುಷ್ಯರ ನಡುವಿನ ಸಂಬಂಧಗಳು ಉಳಿದಾಗ ಮಾತ್ರ ಜೀವನಕ್ಕೆ ನಿಜವಾದ ಅರ್ಥ ಸಿಗುತ್ತದೆ,ಕಾನೂನು ಮತ್ತು ಧರ್ಮವು ಪರಸ್ಪರ ಸಂಬಂಧ ಹೊಂದಿದ್ದು, ಧರ್ಮದ ಮೂಲ ತತ್ವಗಳೇ ಕಾನೂನಿನಲ್ಲಿ ಅಡಕವಾಗಿವೆ. ಸಮಾಜದಲ್ಲಿ ಶಿಸ್ತು ಮತ್ತು ನ್ಯಾಯ ಸ್ಥಾಪನೆಗೆ ಕಾನೂನು ಮಹತ್ವದ ಪಾತ್ರ ವಹಿಸುತ್ತಿದೆ. ಆದ್ದರಿಂದ ಕಾನೂನುಗಳನ್ನು ಗೌರವಿಸಿ ಅವುಗಳನ್ನು ಪಾಲಿಸುವ ಮನೋಭಾವ ಪ್ರತಿಯೊಬ್ಬರಲ್ಲೂ ಬೆಳೆಯಬೇಕು ಎಂದು ಹೇಳಿದರು.
ಕಾನೂನುಗಳನ್ನು ಉತ್ತಮ ಉದ್ದೇಶದಿಂದ ರೂಪಿಸಿದರೂ ಅವುಗಳನ್ನು ತಪ್ಪಿಸಲು ಮಾರ್ಗಗಳನ್ನು ಹುಡುಕುವ ಮನೋಭಾವ ಕೆಲವರಲ್ಲಿ ಕಾಣಿಸುತ್ತಿರುವುದು ದುಃಖಕರ ಸಂಗತಿಯಾಗಿದೆ. ಕಾನೂನು ಪಂಡಿತರನ್ನೇ ಮೀರಿಸುವಂತಹ ಒಳಸುಳಿವುಗಳನ್ನು ಹುಡುಕಿ ಕಾನೂನನ್ನು ತಪ್ಪಿಸಲು ಯತ್ನಿಸುವುದು ಸಮಾಜದಲ್ಲಿ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಆರ್.ಬಿ. ಆನಂದಮೂರ್ತಿ ಮಾತನಾಡಿ, ಸಹಕಾರ ಸಂಘಗಳು ಸಮಾಜದ ಆರ್ಥಿಕ ಅಭಿವೃದ್ಧಿಗೆ ಪ್ರಮುಖ ಆಧಾರವಾಗಿವೆ. ಸಾಮಾನ್ಯ ಜನರು ಪರಸ್ಪರ ಸಹಕಾರದ ಮೂಲಕ ತಮ್ಮ ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಹಕಾರ ಸಂಘಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದರು. ಸದಸ್ಯರ ಉಳಿತಾಯವನ್ನು ಉತ್ತೇಜಿಸುವುದರ ಜೊತೆಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯಗಳನ್ನು ಒದಗಿಸುವ ಮೂಲಕ ಜನರ ಜೀವನಮಟ್ಟವನ್ನು ಸುಧಾರಿಸಲು ಸಹಕಾರ ಸಂಘಗಳು ಸಹಕಾರಿಯಾಗುತ್ತವೆ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ತಾಲ್ಲೂಕು ಸಾಧು ವೀರಶೈವ ಸಮಾಜದ ಅಧ್ಯಕ್ಷ ಪಿ.ಬಿ. ನಂಜುಡಪ್ಪ, ಶಿವ ವಿವಿಧೋದ್ದೇಶ ಸಹಕಾರ ಸಂಘದ ಉಪಾಧ್ಯಕ್ಷ ಜಗದೀಶ್, ನಿರ್ದೇಶಕರಾದ ಈಶ್ವರಪ್ಪ ಬೈರನಾಯಕನಹಳ್ಳಿ, ಗಿರೀಶ್ ಮತ್ತಿಹಳ್ಳಿ, ನವೀನ್ ಕುಮಾರ್ ಹಾಲ್ಕುರಿಕೆ, ಈಶ್ವರಪ್ಪ ಎಂ.ಸಿ. ಮತ್ತಿಹಳ್ಳಿ, ಬಸವರಾಜು ಪಟ್ರೇಹಳ್ಳಿ, ಭವ್ಯ ಸೂರಗೊಂಡನಹಳ್ಳಿ, ಲೋಲಾಕ್ಷಮ್ಮ, ಓಂಕಾರಮೂರ್ತಿ ಕರೀಕೆರೆ, ಕಾರ್ಯದರ್ಶಿ ದಿವಾಕರ್, ಸಿಬ್ಬಂದಿಗಳಾದ ಟಿ.ಆರ್. ರಮೇಶ್, ಪುಟ್ಟೇಗೌಡ, ಮಾಜಿ ಅಧ್ಯಕ್ಷರಾದ ರಾಜಶೇಖರ್, ಸೋಮಶೇಖರ್, ರೇಣುಕಮ್ಮ, ಲಿಂಗರಾಜು, ದಿನೇಶ್, ನಾಗರಾಜು, ಗಂಗಾಧರ್, ನಗರಸಭೆಯ ಮಾಜಿ ಸದಸ್ಯ ಪ್ರಸನ್ನಕುಮಾರ್, ಯೋಗೀಶ್, ನಂಜುಂಡಪ್ಪ, ಹರೀಶ್, ವಿನಯ್, ಪ್ರಮೋದ್, ಶಿವಕುಮಾರ್, ಪುಟ್ಟ ಶಂಕ್ರಪ್ಪ, ಪ್ರಶಾಂತ್, ವಿಜಯ್ ಕುಮಾರ್, ಬಸವರಾಜು, ಶಂಕರಪ್ಪ, ಮರುಳಪ್ಪ, ಓಂಕಾರಮೂರ್ತಿ, ಚಂದ್ರಶೇಖರ್ ಸೇರಿದಂತೆ ಸಮಾಜದ ಬಾಂಧವರು ಹಾಗೂ ಸಂಘದ ಶೇರುದಾರರು ಭಾಗವಹಿಸಿದ್ದರು.

ವರದಿ :ಮಂಜುನಾಥ್ ಹಾಲ್ಕುರಿಕೆ

error: Content is protected !!