,: ನಗರದ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜು ಆವರಣದಲ್ಲಿ ಶ್ರೀ ವಿಘ್ನೇಶ್ವರ ಕೃಪಾಪೋಷಿತ ಮಹಿಳಾ ಕಲಾತಂಡದಿಂದ ಪ್ರದರ್ಶಿಸಲಾದ ‘ಕುರುಕ್ಷೇತ್ರ ಅಥವಾ ಧರ್ಮರಾಜ್ಯ ಸ್ಥಾಪನೆ’ ಪೌರಾಣಿಕ ನಾಟಕ ಪ್ರೇಕ್ಷಕರ ಮನಸೂರೆಗೊಂಡು ಭಾರೀ ಪ್ರಶಂಸೆಗೆ ಪಾತ್ರವಾಯಿತು.
ಸಂಪೂರ್ಣ ಮಹಿಳಾ ಕಲಾವಿದರೇ ಮಹಾಭಾರತದ ಪ್ರಮುಖ ಪಾತ್ರಗಳಿಗೆ ಜೀವ ತುಂಬಿದ್ದು ನಾಟಕದ ಪ್ರಮುಖ ವಿಶೇಷತೆಯಾಗಿತ್ತು. ಕೃಷ್ಣನ ಪಾತ್ರದಲ್ಲಿ ಚಂದ್ರಕಲಾ ನಟರಾಜ್ ಹಾಗೂ ಶೋಭಾ ಶ್ರೀನಿವಾಸ್, ಧರ್ಮರಾಜನಾಗಿ ಮಹದೇವಮ್ಮ, ಭೀಮನಾಗಿ ರುಬೀನಾ ಬಾನು, ಅರ್ಜುನನಾಗಿ ಕವಿತಾ, ಕರ್ಣನಾಗಿ ವಿದ್ಯಾಶ್ರೀ, ಅಭಿಮನ್ಯುವಾಗಿ ನಾಗವೇಣಿ ಹಾಗೂ ಬಲರಾಮನಾಗಿ ಮಮತಾ ರಂಗಸ್ವಾಮಿ ಸೇರಿದಂತೆ ಕಲಾವಿದರು ತಮ್ಮ ಅದ್ಭುತ ಅಭಿನಯದ ಮೂಲಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.
ವಿಶೇಷವಾಗಿ ದುರ್ಯೋಧನನ ಪಾತ್ರದ ಆರ್ಭಟದ ಅಭಿನಯಕ್ಕೆ ಪ್ರೇಕ್ಷಕರಿಂದ ಸಿಳ್ಳೆ, ಚಪ್ಪಾಳೆಗಳ ಸುರಿಮಳೆಯೇ ಸುರಿಯಿತು. ಭಾವಪೂರ್ಣ ಸಂಭಾಷಣೆ, ಮನಮೋಹಕ ರಂಗಸಜ್ಜಿಕೆ ಹಾಗೂ ಪಾತ್ರಧಾರಿಗಳ ನೈಜ ಅಭಿನಯ ನಾಟಕದ ಯಶಸ್ಸಿಗೆ ಮತ್ತಷ್ಟು ಮೆರುಗು ತಂದಿತು.
ನಾಟಕಕ್ಕೆ ಬಸವರಾಜು ನಿರ್ದೇಶನ ನೀಡಿದ್ದು, ಮಹಿಳಾ ಕಲಾತಂಡದ ವ್ಯವಸ್ಥಾಪಕರು ಕಾರ್ಯಕ್ರಮದ ಯಶಸ್ವಿ ನಿರ್ವಹಣೆಗೆ ಶ್ರಮಿಸಿದರು.

ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸುದರ್ಶನ್ ಮಾತನಾಡಿ, “ಕಲೆ ಮತ್ತು ಸಾಹಿತ್ಯಕ್ಕೆ ಪುರುಷ-ಮಹಿಳೆ ಎಂಬ ಭೇದವಿಲ್ಲ. ಕುರುಕ್ಷೇತ್ರದಂತಹ ಪೌರಾಣಿಕ ನಾಟಕವನ್ನು ಮಹಿಳೆಯರು ಅಭ್ಯಾಸ ಮಾಡಿ ಯಶಸ್ವಿಯಾಗಿ ಅಭಿನಯಿಸುತ್ತಿರುವುದು ಶ್ಲಾಘನೀಯ. ಇಂತಹ ಕಲಾವಿದರಿಗೆ ಸಮಾಜದಿಂದ ಹೆಚ್ಚಿನ ಪ್ರೋತ್ಸಾಹ ದೊರೆಯಬೇಕು,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಸದಸ್ಯ ವಿ. ಯೋಗೇಶ್ ಸೇರಿದಂತೆ ಅನೇಕರು ಉಪಸ್ಥಿತರಿದರು.
ವರದಿ :ಮಂಜುನಾಥ್ ಹಾಲ್ಕುರಿಕೆ





