Spread the love

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಪಠ್ಯಪೂರಕ ಚಟುವಟಿಕೆಗಳಿಗೆ ದಾನಿಗಳ ಸಹಕಾರ ಅಗತ್ಯ: ಲೋಕೇಶ್ವರ.

ತಿಪಟೂರು: ಗ್ರಾಮೀಣ ಭಾಗದ ಮಕ್ಕಳಲ್ಲಿನ ವಿದ್ಯಾಭ್ಯಾಸದ ಚಟುವಟಿಕೆಗೆ ಸಹಾಯವಾಗಲೆಂದು, ಪ್ರತಿವರ್ಷ ನನ್ನ ಹುಟ್ಟು ಹಬ್ಬದಂದು ಅಭಿಮಾನಿ ಬಳಗದಿಂದ ಸಾವಿರಾರು ಮಕ್ಕಳಿಗೆ ನೋಟ್ ಬುಕ್ ವಿತರಿಸುತ್ತಿರುವುದು ಕಲಿಕೆಗೆ ಪ್ರೋತ್ಸಾಹ ಕೊಟ್ಟಂತೆ ಆಗುತ್ತದೆ ಎಂದು ನಿವೃತ್ತ ಎಸಿಪಿ ಲೋಕೇಶ್ವರ ತಿಳಿಸಿದರು.

ತಾಲೂಕಿನ ಹೊನ್ನವಳ್ಳಿ ಹೋಬಳಿಯ ಹಾಲ್ಕುರಿಕೆಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲಾ ವಿದ್ಯಾರ್ಥಿಗಳಿಗೆ ಸಮಾಜ ಸೇವಕ ಲೋಕೇಶ್ವರ ಹುಟ್ಟು ಹಬ್ಬದ ಅಂಗವಾಗಿ, ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ನೋಟ್ ಬುಕ್ ಮತ್ತು ಲೇಖನ ಸಾಮಗ್ರಿಗಳ ವಿತರಣಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ ಅವರು, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳು ಸಹ ಉತ್ತಮ ಸಾಧನೆ ಮಾಡಿ ಸಮಾಜದಲ್ಲಿ ಉತ್ತಮ ಸ್ಥಾನಕ್ಕೆ ಹೋಗಲೆಂದು ಪ್ರತಿ ವರ್ಷ ಇಂತಹ ಸಮಾಜಮುಖಿ ಕಾರ್ಯಕ್ಕೆ ಅಭಿಮಾನಿಗಳು ಮುಂದಾಗಿದ್ದಾರೆ. ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ಸುಮಾರು 113 ಅಂಗವಿಕಲ, ಬುದ್ಧಿಹೀನ ಮಕ್ಕಳನ್ನು ನಮ್ಮ ಮಾತೃಶ್ರೀ ಮನೋವಿಕಾಸ ಕೇಂದ್ರದಲ್ಲಿ ಪೋಷಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ನಗರಸಭೆ ಮಾಜಿ ಉಪಾಧ್ಯಕ್ಷ ಗಣೇಶ್ (ಸೊಪ್ಪು) ಮಾತನಾಡಿ, ಸಮಾಜದಲ್ಲಿ ಪ್ರತಿಯೊಬ್ಬರಿಗೂ ಸಮಾನ ಅವಕಾಶಗಳು ದೊರೆಯಬೇಕು ಎಂಬ ನಿಟ್ಟಿನಲ್ಲಿ ನಮ್ಮ ನಾಯಕರಾದ ಲೋಕೇಶ್ವರ ಹುಟ್ಟು ಹಬ್ಬದ ದಿನದಂದು ಪೌರ ಕಾರ್ಮಿಕರು, ಪತ್ರಿಕಾ ವಿತರಕರನ್ನು ಗುರುತಿಸಿ, ಬಟ್ಟೆ ಮತ್ತು ಸಮವಸ್ತ್ರ ವಿತರಣೆ ಹಾಗೂ ರಕ್ತದಾನ ಶಿಬಿರದಂತ ಸಮಾಜಮುಖಿ ಕಾರ್ಯಕ್ರಮಗಳನ್ನು ಪ್ರತಿ ವರ್ಷ ಹಮ್ಮಿಕೊಂಡು ಬರುತ್ತಿದ್ದೇವೆ ಎಂದು ತಿಳಿಸಿದರು.

ರೋಟರಿ ಸಂಸ್ಥೆಯ ನಿಕಟಪೂರ್ವ ಕಾರ್ಯದರ್ಶಿ ಕೋಮಲ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯು ಹಠ, ಛಲ ಮತ್ತು ಗುರಿಯೊಂದಿಗೆ ವಿದ್ಯಾಭ್ಯಾಸ ಮಾಡಿದರೆ ಯಶಸ್ಸು ಸಾಧಿಸಬಹುದು. ಇಲ್ಲಿನ ಶೈಕ್ಷಣಿಕ ವಾತಾವರಣ, ಮಕ್ಕಳ ಕಲಿಕೆಯ ಆಸಕ್ತಿ ಹಾಗೂ ಶಿಕ್ಷಕರ ಸಮರ್ಪಣಾ ಮನೋಭಾವ ವಿದ್ಯಾಭ್ಯಾಸಕ್ಕೆ ಪೂರಕವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪತ್ರಕರ್ತ ಬಿ.ಟಿ.ಕುಮಾರ್,ಎಸ್ಡಿಎಂಸಿ ಅಧ್ಯಕ್ಷ ಮಂಜುನಾಥ್,ಸಮಾಜ ಸೇವಕ ಚಂದ್ರಶೇಖರ್, ಅಭಿಮಾನಿ ಬಳಗದ ಅಧ್ಯಕ್ಷ ನಾಗರಾಜು, ಗುರುಮೂರ್ತಿ, ಶಾಲಾ ಮುಖ್ಯ ಶಿಕ್ಷಕಿ ಗಂಗಮ್ಮ, ಸಹ ಶಿಕ್ಷಕರಾದ ಶಬ್ಬೀರ್ ಖಾನ್ ಮತ್ತು ಲಕ್ಷ್ಮಿಪತಿ ಸೇರಿದಂತೆ ಸಹ ಶಿಕ್ಷಕರು, ಮುಖಂಡರು, ಎಸ್ಡಿಎಂಸಿ ಪದಾಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಪೋಷಕರು ಹಾಜರಿದ್ದರು.

ವರದಿ :ಮಂಜುನಾಥ್ ಹಾಲ್ಕುರಿಕೆ

error: Content is protected !!