ತಿಪಟೂರು: ಗಂಗಾಧರ್ ಯಗಚೀಕಟ್ಟೆ ನಾಯಕನಾಗಿ ಅಭಿನಯಿಸಿರುವ ಕಾಡ್ ಪುಟ್ಟ ಚಲನಚಿತ್ರದ ಧ್ವನಿಸುರಳಿ ಬಿಡುಗಡೆ ಸಮಾರಂಭವನ್ನು ಮಾರ್ಚ್ 06ರಂದು ಯಗಚೀಕಟ್ಟೆ ಗ್ರಾಮದಲ್ಲಿ ಅದ್ದೂರಿಯಾಗಿ ಆಯೋಜಿಸಲಾಗಿದೆ.

ಹಳ್ಳಿ ಹುಡುಗರ ತಂಡ ನಿರ್ಮಿಸಿರುವ ಈ ಚಿತ್ರ ಅಪ್ಪಟ ಗ್ರಾಮೀಣ ಸೊಗಡಿನ ಕಥಾಹಂದರ ಹೊಂದಿದ್ದು, ಶಿಕ್ಷಣದಿಂದ ವಂಚಿತರಾದವರ ಬದುಕಿನ ಬವಣೆಗಳನ್ನು ಚಿತ್ರಕಥೆಯ ತಿರುಳಾಗಿ ಒಳಗೊಂಡಿದೆ. ಈ ಹಿಂದೆ ವೇಷಧಾರಿ ಸೇರಿದಂತೆ ಹಲವು ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದ್ದ ಗಂಗಾಧರ್ ಯಗಚೀಕಟ್ಟೆ ಅವರು ಇದೇ ಮೊದಲ ಬಾರಿಗೆ ನಾಯಕನಾಗಿ ನಟಿಸಿದ್ದಾರೆ.
ಚಿತ್ರಕ್ಕೆ ಶಿವಾನಂದ ಬಿ. ಭೂಷಿ ಅವರು ಕಥೆ, ಚಿತ್ರಕಥೆ, ಸಾಹಿತ್ಯ, ನಿರ್ದೇಶನ ಹಾಗೂ ನಿರ್ಮಾಣದ ಜವಾಬ್ದಾರಿಗಳನ್ನು ಹೊತ್ತಿದ್ದಾರೆ. ಬಹುತೇಕ ಹೊಸಬರೇ ಸೇರಿ ಈ ಚಿತ್ರವನ್ನು ನಿರ್ಮಿಸಿರುವುದು ವಿಶೇಷ.
ನಗರದ ಶಿವಂ ಕೆಫೆ ಹೋಟೆಲ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಯಕ ನಟ ಗಂಗಾಧರ್ ಯಗಚೀಕಟ್ಟೆ, “ನಾಯಕನಾಗಿ ಅಭಿನಯಿಸುವುದು ನನ್ನ ಬಹುಕಾಲದ ಕನಸಾಗಿತ್ತು. ನಿರ್ದೇಶಕ ಶಿವಾನಂದ ಭೂಷಿ ಅವರು ಉತ್ತಮ ಅವಕಾಶ ನೀಡಿದ್ದಾರೆ. ಚಿತ್ರವು ಉತ್ತಮವಾಗಿ ಮೂಡಿಬಂದಿದೆ,” ಎಂದು ಹೇಳಿದರು.
ಮಾರ್ಚ್ 06ರಂದು ಯಗಚೀಕಟ್ಟೆ ಗ್ರಾಮದ ಶ್ರೀ ಲಕ್ಕಮ್ಮ ದೇವಿ ಜಾತ್ರೆಯ ಅಂಗವಾಗಿ ಸಂಜಯ್ ಈವೆಂಟ್ಸ್ ವತಿಯಿಂದ ಆರ್ಕೆಸ್ಟ್ರಾ ಕಾರ್ಯಕ್ರಮದ ಜೊತೆಗೆ ಧ್ವನಿಸುರಳಿ ಬಿಡುಗಡೆ ಸಮಾರಂಭವೂ ನಡೆಯಲಿದೆ.
ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಮಂಜುನಾಥ್ ಅವರು ಧ್ವನಿಸುರಳಿಯನ್ನು ಬಿಡುಗಡೆ ಮಾಡಲಿದ್ದಾರೆ. ತಿಪಟೂರು ಷಡಕ್ಷರ ಮಠದ ಶ್ರೀ ರುದ್ರಮುನಿ ಮಹಾಸ್ವಾಮೀಜಿ, ಕುಪ್ಪೂರು ತಮ್ಮಡಿಹಳ್ಳಿ ವಿರಕ್ತಮಠದ ಶ್ರೀ ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಮಹಾಸ್ವಾಮೀಜಿ, ಶಾಸಕ ಕೆ. ಷಡಕ್ಷರಿ, ಜೆಡಿಎಸ್ ವಿಪಕ್ಷ ನಾಯಕ ಸಿ.ಬಿ. ಸುರೇಶ್ ಬಾಬು, ಮಾಜಿ ಸಚಿವ ಬಿ.ಸಿ. ನಾಗೇಶ್, ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ್ ಹಾಗೂ ಕರ್ನಾಟಕ ರಾಜ್ಯ ಕೋಕೋ ಸಂಸ್ಥೆ ಅಧ್ಯಕ್ಷ ಲೋಕೇಶ್ವರ್ ಸೇರಿದಂತೆ ಅನೇಕ ಗಣ್ಯರು, ಚಿತ್ರರಂಗದ ಕಲಾವಿದರು ಮತ್ತುತಂತ್ರಜ್ಞರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಚಿತ್ರನಟ ಆಭಿಷೇಕ್ ನವೀನ್, ಮುಖಂಡ ಹರೀಶ್ ಯಗಚೀಕಟ್ಟೆ ಹಾಗೂ ಈಚನೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಉದಯ್ ಕುಮಾರ್ ಉಪಸ್ಥಿತರಿದ್ದರು.
ವರದಿ :ಮಂಜುನಾಥ್ ಹಾಲ್ಕುರಿಕೆ





