ತಿಪಟೂರು: ತಾಲ್ಲೂಕಿನ ಹೊನ್ನವಳ್ಳಿ ಹೋಬಳಿಯ ಆಲೂರು–ಹೊಸಕೆರೆ, ಅರಚನಹಳ್ಳಿ–ವಾಸುದೇವರಹಳ್ಳಿ, ಚೌಲೀಹಳ್ಳಿ–ಸಾರ್ಥವಳ್ಳಿ ಹಾಗೂ ಹೊನ್ನವಳ್ಳಿ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ₹4 ಕೋಟಿ 20 ಲಕ್ಷ ಅನುದಾನದಡಿ ಗುದ್ದಲಿಪೂಜೆ ನೆರವೇರಿಸಲಾಯಿತು.

ಹೊನ್ನವಳ್ಳಿ ಹೋಬಳಿಯ ಆಲೂರು ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೆ. ಷಡಕ್ಷರಿ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿ, ತಾಲ್ಲೂಕಿನ ಗ್ರಾಮೀಣ ಭಾಗದ ರಸ್ತೆ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು. ಗ್ರಾಮೀಣ ಪ್ರದೇಶಗಳ ಮೂಲಸೌಕರ್ಯಗಳಾದ ರಸ್ತೆ ಮತ್ತು ಕುಡಿಯುವ ನೀರಿನ ವ್ಯವಸ್ಥೆಗೆ ಹೆಚ್ಚಿನ ಅನುದಾನ ಒದಗಿಸಲಾಗುತ್ತಿದ್ದು, ಬಹುತೇಕ ಗ್ರಾಮೀಣ ರಸ್ತೆಗಳು ಈಗಾಗಲೇ ಅಭಿವೃದ್ಧಿಪಡಿಸಲಾಗಿದೆ ಎಂದರು.
ಕಾವೇರಿ ಅಭಿವೃದ್ಧಿ ಅನುದಾನದಡಿ ಆಲೂರು, ಸಾರ್ಥವಳ್ಳಿ, ಅರಚನಹಳ್ಳಿ, ವಾಸುದೇವರಹಳ್ಳಿ ಹಾಗೂ ಚೌಲೀಹಳ್ಳಿ ಗ್ರಾಮಗಳ ರಸ್ತೆ ಅಭಿವೃದ್ಧಿಗೆ ₹4.20 ಕೋಟಿ ಮೀಸಲಿಡಲಾಗಿದೆ. ಕಾಮಗಾರಿಗಳನ್ನು ಶೀಘ್ರ ಪ್ರಾರಂಭಿಸಿ, ಗುಣಮಟ್ಟ ಕಾಪಾಡುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು. ಮಹಿಳೆಯರೊಂದಿಗೆ ಚರ್ಚೆ ನಡೆಸಿದ ಶಾಸಕರು, ಸರ್ಕಾರದ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಜನರಿಗೆ ತಲುಪುತ್ತಿದೆಯೇ ಎಂಬುದನ್ನು ವಿಚಾರಿಸಿದರು. ಮುಂದಿನ ತಿಂಗಳಿನಿಂದ ಪಡಿತರ ಧಾನ್ಯಗಳಾದ 5 ಕೆಜಿ ಅಕ್ಕಿ, ಸಕ್ಕರೆ, ಬೇಳೆ, ಎಣ್ಣೆ ಮತ್ತು ಉಪ್ಪು ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಪ್ರಕಾಶ್ ಯಾದವ್, ಮುಖಂಡರಾದ ನರೇಂದ್ರ, ಹೇಮಾವತಿ ನಾಲಾವಲಯದ ಎಇಇ ಎನ್.ಡಿ. ನಾಗಭೂಷಣ್, ಎಇ ದಿವ್ಯ, ಶ್ರೀಧರ್, ಮಾಸ್ಟರ್ ಸಿದ್ದಪ್ಪ, ಸಾರ್ಥವಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ಲಕ್ಷ್ಮಿಬಾಯಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ :ಮಂಜುನಾಥ್ ಹಾಲ್ಕುರಿಕೆ





