Spread the love

ಚಿರನಿದ್ರೆಗೆ ಜಾರಿದ ಕಲ್ಪತರು ನಾಡಿನ ಕಣ್ಮಣಿ

ತಿಪಟೂರು: ತಿಪಟೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ (67) ಅವರು ಅನಾರೋಗ್ಯದಿಂದ ಬೆಂಗಳೂರಿನ ಜಯನಗರದಲ್ಲಿರುವ ಪುತ್ರಿ ಶಾರದ ಅವರ ನಿವಾಸದಲ್ಲಿ ವಿಧಿವಶರಾದರು.

ಕಳೆದ ಎರಡು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಮಂಗಳವಾರ ಅನಾರೋಗ್ಯದ ಕಾರಣ ಕೊನೆಯುಸಿರೆಳೆದಿದ್ದಾರೆ. ಅವರ ನಿಧನಕ್ಕೆ ತುಮಕೂರು ಜಿಲ್ಲೆಯ ಜನತೆ ಹಾಗೂ ರಾಜಕೀಯ ಗಣ್ಯರು ತೀವ್ರ ಕಂಬನಿ ಮಿಡಿದಿದ್ದಾರೆ.

ತಿಪಟೂರು ವಿಧಾನಸಭಾ ಕ್ಷೇತ್ರವನ್ನು ಎರಡು ಬಾರಿ ಪ್ರತಿನಿಧಿಸಿದ್ದ ಬಿ.ಸಿ. ನಾಗೇಶ್ ಅವರು ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಬಿ.ಇ. ಎಂಜಿನಿಯರಿಂಗ್ ಪದವೀಧರರಾಗಿದ್ದ ಅವರು ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಕಟ್ಟಾಳು ಎಂದೇ ಹೆಸರುವಾಸಿಯಾಗಿದ್ದ ಬಿ.ಸಿ. ನಾಗೇಶ್ ಅವರು ತಿಪಟೂರು ಭಾಗದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಲು ಶ್ರಮಿಸಿದ ಹಿರಿಯ ಧುರೀಣರಾಗಿದ್ದರು.

ಅವರ ಅಗಲಿಕೆಗೆ ರಾಜಕೀಯ ಮುಖಂಡರು, ಗಣ್ಯರು, ಅಭಿಮಾನಿಗಳು ಹಾಗೂ ಸಾರ್ವಜನಿಕರು ಸಂತಾಪ ಸೂಚಿಸಿದ್ದಾರೆ.

ಬಿ.ಸಿ. ನಾಗೇಶ್ ಅವರು ಪತ್ನಿ ವೀಣಾ ನಾಗೇಶ್, ಪುತ್ರ ವಿಶ್ವದೀಪ್ ಬಿ.ಸಿ. ನಾಗೇಶ್ ಹಾಗೂ ಪುತ್ರಿ ಶಾರದ ಅವರನ್ನು ಅಗಲಿದ್ದಾರೆ. ಅವರ ಪಾರ್ಥಿವ ಶರೀರವನ್ನು ತಿಪಟೂರಿಗೆ ರವಾನಿಸಲು ಕುಟುಂಬಸ್ಥರು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ.

ವರದಿ :ಮಂಜುನಾಥ್ ಹಾಲ್ಕುರಿಕೆ

error: Content is protected !!