ತಿಪಟೂರು: ಬರಪೀಡಿತ ತಿಪಟೂರು ತಾಲ್ಲೂಕಿನ ಪ್ರತಿ ಹೋಬಳಿಗೊಂದು ಗೋಶಾಲೆ ಆರಂಭಿಸಿ ಜಾನುವಾರುಗಳಿಗೆ ಮೇವು ವಿತರಿಸಬೇಕು. ರೈತರಿಗೆ ಪ್ರತಿ ಎಕರೆಗೆ ₹25 ಸಾವಿರ ಬರ ಪರಿಹಾರ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಹಳ್ಳಿಕಾರ್ ರೈತ ಸಂಘ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ–ರೈತ ಶಕ್ತಿ ಸಂಘಟನೆಗಳ ನೇತೃತ್ವದಲ್ಲಿ ರೈತರು ಎತ್ತಿನಗಾಡಿ ಹಾಗೂ ಟ್ರ್ಯಾಕ್ಟರ್ ಜಾಥಾ ನಡೆಸಿದರು.

ನಗರದ ಹಾಸನ ವೃತ್ತದಿಂದ ಆರಂಭವಾದ ಜಾಥಾವು ಬಿ.ಎಚ್. ರಸ್ತೆಯ ಮೂಲಕ ಸಾಗಿ ನಗರಸಭಾ ವೃತ್ತ ತಲುಪಿತು. ಬಳಿಕ ಪ್ರತಿಭಟನಾ ಸಭೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಹಳ್ಳಿಕಾರ್ ರೈತ ಸಂಘದ ಅಧ್ಯಕ್ಷ ವಿನಯ್ ಕುಮಾರ್ ಮಾಡೇನೂರು, ತಾಲ್ಲೂಕಿನಲ್ಲಿ ಬರಗಾಲ ತೀವ್ರವಾಗಿದ್ದು, ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವಿನ ಸಮಸ್ಯೆ ಎದುರಾಗಿದೆ. ಈ ಕುರಿತು ರೈತರು ನಿರಂತರವಾಗಿ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಕೂಡಲೇ ಪ್ರತಿ ಹೋಬಳಿಗೊಂದು ಗೋಶಾಲೆ ಆರಂಭಿಸಿ ಮೇವು ವಿತರಿಸಬೇಕು. ಪ್ರತಿ ರೈತರ ಖಾತೆಗೆ ₹25 ಸಾವಿರ ಬರ ಪರಿಹಾರ ನೀಡಬೇಕು. ಸಹಕಾರಿ ಸಂಘಗಳು ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ರೈತರ ಸಾಲ ಮನ್ನಾ ಮಾಡಬೇಕು. ಅರಣ್ಯ ಒತ್ತುವರಿ ಹೆಸರಿನಲ್ಲಿ ರೈತರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಿ, ರೈತರು ಸಾಗುವಳಿ ಮಾಡುತ್ತಿರುವ ಭೂಮಿಗೆ ಹಕ್ಕು ನೀಡಬೇಕು ಎಂದು ಒತ್ತಾಯಿಸಿದರು.

ರೈತ ಸಂಘ–ರೈತ ಶಕ್ತಿ ಸಂಘದ ಜಿಲ್ಲಾಧ್ಯಕ್ಷ ಪದ್ದಣ್ಣ ಮಾತನಾಡಿ, ಸರ್ಕಾರ ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು. ರಾಜ್ಯದಲ್ಲಿ ಬರಗಾಲ ಆವರಿಸಿದ್ದು, ರೈತರು ಬೆಳೆದ ಬೆಳೆಗಳು ನಷ್ಟವಾಗಿವೆ. ಆದ್ದರಿಂದ ರೈತರಿಗೆ ಪ್ರತಿ ಎಕರೆಗೆ ₹25 ಸಾವಿರ ತಾತ್ಕಾಲಿಕ ಬರ ಪರಿಹಾರ ನೀಡಬೇಕು. ಜಾನುವಾರುಗಳಿಗೆ ಮೇವು ವಿತರಿಸಲು ಕ್ರಮ ಕೈಗೊಳ್ಳಬೇಕು. ಬಗರ್‌ಹುಕುಂ ಸಾಗುವಳಿದಾರರಿಗೆ ಸಾಗುವಳಿ ಚೀಟಿ ನೀಡಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ದೇವರಾಜ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಬೇಕು. ರಾಜ್ಯ ಸರ್ಕಾರ ಕೂಡಲೇ ಬರ ಪರಿಹಾರದ ಹಣ ಬಿಡುಗಡೆ ಮಾಡಬೇಕು. ಬೆಂಬಲ ಬೆಲೆ ಯೋಜನೆಯಡಿ ರಾಗಿ ಮಾರಾಟ ಮಾಡಿರುವ ರೈತರಿಗೆ ಹಣ ಪಾವತಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಗೌರವಾಧ್ಯಕ್ಷ ತೀರ್ಥನಾಗೇಂದ್ರ, ಬಿಜೆಪಿ ಯುವ ಮುಖಂಡ ವಿಶ್ವದೀಪ್ ನಾಗೇಶ್, ಪ್ರಸನ್ನ ಕುಮಾರ್. ತಾಲ್ಲೋಕು ಅಧ್ಯಕ್ಷ ಈಶ್ವರ್ .ಹೊನ್ನೆನಹಳ್ಳಿವಿರುಪಾಕ್ಷಯ್ಯ.ಮಾದಿಹಳ್ಳಿ.ಗೊಲ್ಲರಹಟ್ಟಿ ಮಂಜಣ್ಣ.ಹಾಲ್ಕುರಿಕೆ ಪರಮೇಶ.ಮುಂತ್ತಾದವರು ಉಪಸ್ಥಿದರು.
ವರದಿ :ಮಂಜುನಾಥ್ ಹಾಲ್ಕುರಿಕೆ





