Spread the love

ತಿಪಟೂರು: ಚಿಕ್ಕನಾಯ್ಕನಹಳ್ಳಿ ತಾಲ್ಲೂಕಿನ 22 ಕೆರೆಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆಯ ವ್ಯಾಪ್ತಿಯಲ್ಲಿರುವ ಹಾಲ್ಕುರಿಕೆಗೆ ನಾಲೆ-2ರ ಕಾಮಗಾರಿ ಕೈಗೊಂಡು ನೀರು ಹರಿಸುವಂತೆ ಒತ್ತಾಯಿಸಿ ಹಾಲ್ಕುರಿಕೆ ಗ್ರಾಮಸ್ಥರು ಶಾಸಕ ಕೆ. ಷಡಕ್ಷರಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ನಗರದ ಶಾಸಕರ ಗೃಹ ಕಚೇರಿಯಲ್ಲಿ ಮನವಿ ಪತ್ರ ಸಲ್ಲಿಸಿದ ಗ್ರಾಮಸ್ಥರು, ಹೇಮಾವತಿ ನಾಲೆಯಿಂದ ಚಿಕ್ಕನಾಯ್ಕನಹಳ್ಳಿ ಕುಡಿಯುವ ನೀರಿನ ಯೋಜನೆಯ ವ್ಯಾಪ್ತಿಯಲ್ಲಿ ನಾಲೆ-2ರ ಕಾಮಗಾರಿ ಪೂರ್ಣಗೊಳಿಸಿ ಶೆಟ್ಟಿಕೆರೆ, ಸಾಸಲು ಸೇರಿದಂತೆ ಹಲವಾರು ಗ್ರಾಮಗಳ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಯೋಜನೆಯ ವ್ಯಾಪ್ತಿಯ ನಾಲೆ-2ರ ಪಟ್ಟದದೇವರ ಕೆರೆ ಹಾಗೂ ಹಾಲ್ಕುರಿಕೆ ಕೆರೆಗಳಿಗೆ ನೀರು ಹರಿಸಲು ನಾಲೆ ಅರಣ್ಯದ ಮೂಲಕ ಹಾದುಹೋಗಬೇಕಿರುವ ಕಾರಣ ಅರಣ್ಯ ಇಲಾಖೆ ಕಾಮಗಾರಿಗೆ ತಡೆ ನೀಡಿದೆ. ಅರಣ್ಯ ಇಲಾಖೆಯ ನಿಯಮಗಳಂತೆ ಯೋಜನೆಗೆ ಬಳಕೆಯಾಗುವ ಭೂಮಿಗೆ ಪರ್ಯಾಯವಾಗಿ ಭೂಮಿ ನೀಡಬೇಕಿರುವುದರಿಂದ ಸರ್ಕಾರವು ಪರ್ಯಾಯ ಭೂಮಿಯನ್ನು ಅರಣ್ಯ ಇಲಾಖೆಗೆ ನೀಡಿ, ಹಾಲ್ಕುರಿಕೆಗೆ ನೀರು ಹರಿಸುವ ನಾಲೆ ಕಾಮಗಾರಿ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಶಾಸಕ ಕೆ. ಷಡಕ್ಷರಿ ಅವರು, ಹಾಲ್ಕುರಿಕೆ ಸೇರಿದಂತೆ ವಿವಿಧ ಕೆರೆಗಳಿಗೆ ನೀರು ಹರಿಸಲು ಯೋಜನೆ ರೂಪಿಸಲಾಗಿತ್ತು. ಆದರೆ ಈ ಯೋಜನೆಗೆ ಗ್ರಾಮಸ್ಥರು ಸಹಕರಿಸಿಲ್ಲ. ಚಿಕ್ಕನಾಯ್ಕನಹಳ್ಳಿ ಕುಡಿಯುವ ನೀರಿನ ಯೋಜನೆಯ ನಾಲೆ-2ರ ಕಾಮಗಾರಿಗೆ ಅಗತ್ಯವಾದ ಭೂಮಿ ಒದಗಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದ್ದು, ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಯೋಜನೆಯ ಯಶಸ್ಸಿಗೆ ಅಗತ್ಯವಾದ ಸಹಕಾರ ನೀಡುತ್ತೇನೆ ಎಂದು ತಿಳಿಸಿದರು.

ಮುಖಂಡರಾದ ನಂಜುಂಡಪ್ಪ, ಹೆಚ್.ವಿ. ನಾಗರಾಜು, ಹೆಚ್.ಎಸ್. ಕುಮಾರಸ್ವಾಮಿ, ಸಿದ್ದಯ್ಯ, ಗನಾನಂದಮೂರ್ತಿ, ಪ್ರಕಾಶ್, ಗಂಗಾಧರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು

ವರದಿ :ಮಂಜುನಾಥ್ ಹಾಲ್ಕುರಿಕೆ

error: Content is protected !!