ತಿಪಟೂರು: ಎಸ್ಐಆರ್ ವಿಚಾರದಲ್ಲಿ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಪಕ್ಷದ ನಾಯಕರು ಸುಳ್ಳು ಆರೋಪಗಳನ್ನು ಮಾಡುತ್ತಿದ್ದು, ದೊಂಬರಾಟ ನಡೆಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆಯನ್ನು ಸಹಿಸದೆ ಕಾಂಗ್ರೆಸ್ ಸುಳ್ಳು ಪ್ರಚಾರದಲ್ಲಿ ತೊಡಗಿದೆ ಎಂದು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಸಚಿವ ವಿ.ಸೋಮಣ್ಣ ಆರೋಪಿಸಿದರು.

ನಗರದ ಪಟೇಲ್ ಪ್ರಾಂಗಣದಲ್ಲಿ ಆಗ್ನೇಯ ಪದವೀಧರ ಕ್ಷೇತ್ರದ ಎನ್ಡಿಎ ಅಭ್ಯರ್ಥಿ ಕೆ.ಎಂ.ಸುರೇಶ್ ಪರ ಮತಯಾಚಿಸಿ ಮಾತನಾಡಿದ ಅವರು
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚಿಕ್ಕಮಕ್ಕಳಂತೆ ವರ್ತಿಸುತ್ತಿದ್ದಾರೆ. ರಾಹುಲ್ ಗಾಂಧಿ ಮತ್ತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವಿನ ಹಾವು-ಮುಂಗುಸಿ ಆಟ ಹೆಚ್ಚು ದಿನ ನಡೆಯುವುದಿಲ್ಲ. ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಗಾಂಭೀರ್ಯದಿಂದ ವರ್ತಿಸಬೇಕು .
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 12 ವರ್ಷಗಳ ಅಧಿಕಾರಾವಧಿಯಲ್ಲಿ 50 ವರ್ಷಗಳ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಇನ್ನೂ ಕೆಲವೇ ವರ್ಷಗಳಲ್ಲಿ ಭಾರತ ಜಗತ್ತಿನಲ್ಲೇ ಪ್ರಥಮ ಸ್ಥಾನಕ್ಕೇರಲಿದೆ. ವಿಶ್ವದ ಹಲವು ದೇಶಗಳ ಸಮಸ್ಯೆಗಳಿಗೆ ಮೋದಿ ಪರಿಹಾರ ನೀಡಿದ್ದಾರೆ. ಇಂತಹ ಮಹಾನ್ ನಾಯಕನ ಬಗ್ಗೆ ಕಾಂಗ್ರೆಸ್ ಪಕ್ಷ ಸುಳ್ಳು ಪ್ರಚಾರದಲ್ಲಿ ತೊಡಗಿದೆ. ಕಾಂಗ್ರೆಸ್ನ ಸ್ಥಿತಿ ‘ಕಳ್ಳನ ಮನಸ್ಸು ಹುಳ್ಳುಳ್ಳಗೆ’ ಎಂಬಂತಾಗಿದೆ .

ಎನ್ಡಿಎ ಮೈತ್ರಿಕೂಟದ ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿ ಕೆ.ಎಂ.ಸುರೇಶ್ ಅವರ ಗೆಲುವಿಗೆ ಶ್ರಮಿಸಬೇಕು. ನಾವು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಅಭ್ಯರ್ಥಿಯ ಗೆಲುವಿಗೆ ವರದಾನವಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಾಸನ–ಹಿರಿಯೂರು ಗ್ರೀನ್ ಕಾರಿಡಾರ್ ಯೋಜನೆಯನ್ನು ಪ್ರಸ್ತಾಪಿಸಿದಾಗ ಹಲವರು ಅಣಕಿಸಿದ್ದರು. ಆದರೆ, ಕೇಂದ್ರ ಸರ್ಕಾರದ ₹4,600 ಕೋಟಿ ವೆಚ್ಚದ ಈ ಯೋಜನೆಗೆ ವಿವರವಾದ ಯೋಜನಾ ವರದಿ (ಡಿಪಿಆರ್) ಸಿದ್ಧವಾಗಿದೆ. ಇನ್ನೂ ಕೆಲವೇ ತಿಂಗಳಲ್ಲಿ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುವುದು. ನಾನೇ ಕಾಮಗಾರಿಗೆ ಚಾಲನೆ ನೀಡಿ, ನನ್ನ ಅಧಿಕಾರಾವಧಿಯಲ್ಲಿಯೇ ಪೂರ್ಣಗೊಳಿಸುತ್ತೇನೆ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿಶಂಕರ್ ಮಾತನಾಡಿ, ಆಗ್ನೇಯ ಪದವೀಧರ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದೆ. ಈ ಕ್ಷೇತ್ರದಲ್ಲಿ ನಡೆದ ಎಂಟು ಚುನಾವಣೆಗಳಲ್ಲಿ ಆರು ಬಾರಿ ಬಿಜೆಪಿ ಗೆಲುವು ಸಾಧಿಸಿದೆ. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿ ಕೆ.ಎಂ.ಸುರೇಶ್ ಅವರ ಗೆಲುವಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಮಾಜಿ ಶಾಸಕ ಬಿ.ನಂಜಾಮರಿ ಮಾತನಾಡಿ, ಬಿಜೆಪಿ ಅಭ್ಯರ್ಥಿ ಕೆ.ಎಂ.ಸುರೇಶ್ ಅವರು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಅವರ ಗೆಲುವಿಗೆ ಎಲ್ಲರೂ ಸಹಕರಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಬಿಸ್ಲೇಹಳ್ಳಿ ಜಗದೀಶ್, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ, ಶಶಿಕಿರಣ್, ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿ ರಾಮ್ ಮೋಹನ್, ಮುಖಂಡರಾದ ಸಿಂಗ್ರಿದತ್ತ ಪ್ರಸಾದ್, ಪ್ರಸನ್ನ ಕುಮಾರ್,ದಿಶಾ ಸಮಿತಿ ಸದಸ್ಯ ಆಯರಹಳ್ಳಿ ಶಂಕರಪ್ಪ. ಸಾಗರನಹಳ್ಳಿ ವಿಜಯ್ ಕುಮಾರ್, ಗಂಗಾಧರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ :ಮಂಜುನಾಥ್ ಹಾಲ್ಕುರಿಕೆ





