Spread the love

ಹುಲಿಹಳ್ಳಿ ಗ್ರಾಮದಲ್ಲಿ ದೇವರ ಪವಾಡದ ಚರ್ಚೆ

ದೇವಾಲಯದ ಬಳಿ ಜಮಾಯಿಸಿದ ಭಕ್ತರ ದಂಡು

ತಿಪಟೂರು: ತಾಲ್ಲೂಕಿನ ಹೊನ್ನವಳ್ಳಿ ಹೋಬಳಿಯ ಹುಲಿಹಳ್ಳಿ ಗ್ರಾಮದ ಶ್ರೀ ಮಸಣಿಕಮ್ಮ ದೇವಾಲಯದ ಗದ್ದುಗೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಶ್ರೀ ಧೂತಯ್ಯ ಸ್ವಾಮಿಯ ಉತ್ಸವ ಮೂರ್ತಿ ಅಚ್ಚರಿಯ ರೀತಿಯಲ್ಲಿ ಚಲಿಸಿ ದೇವಾಲಯದ ಬಾಗಿಲಿನ ಬಳಿ ಬಂದಿರುವ ಘಟನೆ ಗ್ರಾಮದಲ್ಲಿ ಸಂಚಲನ ಮೂಡಿಸಿದೆ.

ಹುಲಿಹಳ್ಳಿ ಗ್ರಾಮದ ಶ್ರೀ ಮಸಣಿಕಮ್ಮ ದೇವಾಲಯದಲ್ಲಿ ನಡೆದಿರುವ ಈ ಘಟನೆಯನ್ನು ಗ್ರಾಮಸ್ಥರು ದೇವರ ಪವಾಡವೆಂದು ಭಾವಿಸಿದ್ದು, ದೇವಾಲಯದ ಬಳಿ ಭಕ್ತರ ದಂಡೇ ಹರಿದುಬಂದಿದೆ.

ದೇವಾಲಯದಲ್ಲಿ ಶ್ರೀ ಮಸಣಿಕಮ್ಮ ದೇವಿಯ ಉತ್ಸವ ಮೂರ್ತಿ ಹಾಗೂ ಶ್ರೀ ಧೂತಯ್ಯ ಸ್ವಾಮಿಯ ಮೂರ್ತಿಯನ್ನು ರಾತ್ರಿ 11.30ರ ಸಮಯದಲ್ಲಿ ಗದ್ದುಗೆಯಲ್ಲಿ ಕೂರಿಸಿ ಬಾಗಿಲು ಹಾಕಲಾಗಿತ್ತು ಎನ್ನಲಾಗಿದೆ. ಆದರೆ, ಬೆಳಗ್ಗೆ 5 ಗಂಟೆಯ ಸಮಯದಲ್ಲಿ ಅರ್ಚಕ ಶೇಖರಪ್ಪ ಅವರು ನಿತ್ಯಪೂಜೆಗಾಗಿ ದೇವಾಲಯದ ಬಾಗಿಲು ತೆರೆಯಲು ಹೋದಾಗ ಅಚ್ಚರಿಯ ದೃಶ್ಯ ಕಂಡುಬಂದಿದೆ.

ದೇವಾಲಯದ ಬಾಗಿಲು ತೆರೆಯಲು ಸಾಧ್ಯವಾಗದಿರುವುದನ್ನು ಗಮನಿಸಿದ ಅರ್ಚಕರು ಗ್ರಾಮಸ್ಥರನ್ನು ಕರೆದು ತೋರಿಸಿದ್ದಾರೆ. ಈ ವೇಳೆ ದೇವಾಲಯದ ಬಾಗಿಲಿನ ಕಿಂಡಿಯ ಯಿಂದ ನೋಡಲಾಗಿ ಬಾಗಿಲಿಗೆ ಅಡ್ಡಲಾಗಿ ಶ್ರೀ ಧೂತಯ್ಯ ಸ್ವಾಮಿಯ ಉತ್ಸವ ಮೂರ್ತಿ ಕುಳಿತಿರುವುದು ಬೆಳಕಿಗೆ ಬಂದಿದೆ.

ಈ ಸುದ್ದಿ ತಿಳಿಯುತ್ತಿದ್ದಂತೆ ಹುಲಿಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ದೇವಾಲಯದ ಬಳಿ ಜಮಾಯಿಸಿದ್ದು, ದೇವರ ಪವಾಡವನ್ನು ನೋಡಲು ಮುಗಿಬಿದ್ದಿದ್ದಾರೆ.

ದೇವಾಲಯದ ಬಾಗಿಲು ತೆರೆಯಲು ಗ್ರಾಮಸ್ಥರು ಕಾಳಮ್ಮನ ಬೆಟ್ಟದ ಪಂಡಿತರಾದ ಕಾಳಾಚಾರ್ ಅವರ ಮೊರೆ ಹೋಗಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇವರ ಶಕ್ತಿಯಿಂದ ಉತ್ಸವ ಮೂರ್ತಿಯು ಗದ್ದುಗೆಯಿಂದ ಸುಮಾರು 7ರಿಂದ 8 ಅಡಿಗಳಷ್ಟು ಚಲಿಸಿ ಬಾಗಿಲಿನ ಬಳಿ ಬಂದಿದೆ. ದೇವರಿಗೆ ಸೂಕ್ತವಾದ ಪುಣ್ಯಶಾಂತಿ ಪೂಜೆ ನೆರವೇರಿಸಿ ಮೂರ್ತಿಯನ್ನು ತೆರವುಗೊಳಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಘಟನೆಯಿಂದ ಹುಲಿಹಳ್ಳಿ ಗ್ರಾಮದಲ್ಲಿ ಭಕ್ತಿಭಾವದ ವಾತಾವರಣ ನಿರ್ಮಾಣವಾಗಿದ್ದು, ದೇವರ ಪವಾಡದ ಕುರಿತು ಗ್ರಾಮಸ್ಥರಲ್ಲಿ ತೀವ್ರ ಕುತೂಹಲ ಮೂಡಿದೆ.

ವರದಿ :ಮಂಜುನಾಥ್ ಹಾಲ್ಕುರಿಕೆ

error: Content is protected !!