ಪ್ಯಾರಚೂಟ್ ಕಲ್ಪವೃಕ್ಷ ಸಂಸ್ಥೆಯಿಂದ ತೆಂಗು ಮತ್ತು ಅಡಿಕೆ ಬೆಳೆಗಾರರಿಗೆ ಉಚಿತ ಮಾಹಿತಿ ಕಾರ್ಯಾಗಾರ.
ತಿಪಟೂರು: ತೆಂಗು ಕಲ್ಪತರು ನಾಡಿನ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಉತ್ತಮ ಇಳುವರಿ ಪಡೆಯಲು ತೆಂಗಿನ ನಿರ್ವಹಣೆಯ ಸಮಗ್ರ ಮಾಹಿತಿ ಅಗತ್ಯವಾಗಿದೆ ಎಂದು ಪ್ಯಾರಚೂಟ್ ಕಲ್ಪವೃಕ್ಷ ಸಂಸ್ಥೆಯ ಕರ್ನಾಟಕ ತಂಡದ ಮುಖ್ಯಸ್ಥ ಪ್ರದೀಪ್ ತಿಳಿಸಿದರು.

ತಾಲೂಕಿನ ಹೊನ್ನವಳ್ಳಿ ಹೋಬಳಿಯ ಲಕ್ಷ್ಮಣಪುರ ಗ್ರಾಮದಲ್ಲಿ ಪ್ಯಾರಚೂಟ್ ಕಲ್ಪವೃಕ್ಷ ಸಂಸ್ಥೆಯ ವತಿಯಿಂದ ತೆಂಗು ಮತ್ತು ಅಡಿಕೆ ಬೆಳೆಗಾರರಿಗಾಗಿ ಆಯೋಜಿಸಿದ್ದ ಉಚಿತ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಿಪಟೂರು ಸೇರಿದಂತೆ ಕಲ್ಪತರು ನಾಡಿನಲ್ಲಿ ತೆಂಗು ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಕೊಬ್ಬರಿಗೆ ಉತ್ತಮ ಬೆಲೆ ದೊರೆಯುತ್ತಿದ್ದರೂ ಬೆಲೆ ಏರಿಳಿತ, ಕೀಟಬಾಧೆ, ರೋಗಗಳ ಹಾವಳಿ ಹಾಗೂ ಬರಗಾಲದಿಂದ ತೆಂಗಿನ ಇಳುವರಿ ಕಡಿಮೆಯಾಗಿದೆ. ಕಪ್ಪುತಲೆ ಹುಳು, ಬಿಳಿನೊಣ, ಕಾಂಡ ಸೋರುವಿಕೆ, ಅಣಬೆ ರೋಗ, ರೈನೋಸರಸ್ ದುಂಬಿ ಸೇರಿದಂತೆ ವಿವಿಧ ಸಮಸ್ಯೆಗಳು ತೆಂಗು ಬೆಳೆಗಾರರನ್ನು ಕಾಡುತ್ತಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ನೆರವಿಗೆ ಧಾವಿಸಿ, ಇಳುವರಿ ಹೆಚ್ಚಳಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದರು.
ಪ್ಯಾರಚೂಟ್ ಕಲ್ಪವೃಕ್ಷ ಸಂಸ್ಥೆಯು ತೆಂಗು ಮತ್ತು ಅಡಿಕೆ ಬೆಳೆಗಾರರಿಗೆ ಉಚಿತವಾಗಿ ಮಾಹಿತಿ ನೀಡುವ ಮೂಲಕ ರೈತರ ನೆರವಿಗೆ ನಿಂತಿದೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಹಲವು ಜಿಲ್ಲೆಗಳಲ್ಲಿ ಸಂಸ್ಥೆಯ ಕೃಷಿ ತಜ್ಞರ ಮೂಲಕ ರೈತರಿಗೆ ಅಗತ್ಯ ಮಾರ್ಗದರ್ಶನ ನೀಡಲಾಗುತ್ತಿದೆ. ರೈತರು ಸಂಸ್ಥೆಯಿಂದ ಯಾವಾಗ ಬೇಕಾದರೂ ಕೃಷಿಗೆ ಸಂಬಂಧಿಸಿದ ಮಾಹಿತಿ ಪಡೆಯಬಹುದು. ತೆಂಗು ಬೆಳೆಗಾರರ ಹಿತ ಕಾಯುವುದು ಸಂಸ್ಥೆಯ ಮೊದಲ ಆದ್ಯತೆಯಾಗಿದೆ ಎಂದು ತಿಳಿಸಿದರು.

ಕೃಷಿ ವಿಜ್ಞಾನಿ ಸೋಮಶೇಖರ್ ಮಾತನಾಡಿ, ತೆಂಗಿನ ಮರಗಳಿಗೆ ತಗಲುವ ರೋಗಗಳ ನಿಯಂತ್ರಣ, ರಸಗೊಬ್ಬರಗಳ ಬಳಕೆಯ ವಿಧಾನ, ಸೂಕ್ತ ನೀರಾವರಿ ಪದ್ಧತಿ ಹಾಗೂ ಸರ್ಕಾರದ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಸಂಸ್ಥೆಯ ಕೃಷಿ ತಜ್ಞ ಗಂಗಾಧರ್ ನಾಗರಾಜ್ ಮಾತನಾಡಿ, ಕರ್ನಾಟಕದಲ್ಲಿ ಸುಮಾರು 30 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದೆ. ಕಪ್ಪುತಲೆ ಹುಳುವಿನ ನಿಯಂತ್ರಣಕ್ಕಾಗಿ ಗೋನಿಯೋಜಸ್ ನೆಫಾಂಡಿಟಿಸ್ ಎಂಬ ಪರೋಪಜೀವಿಗಳನ್ನು ಉತ್ಪಾದಿಸಿ ತೆಂಗಿನ ಗರಿಗಳಿಗೆ ಬಿಡುಗಡೆ ಮಾಡಲಾಗಿದೆ. ತೆಂಗು ಬೆಳೆಗಾರರ ಸಮಸ್ಯೆಗಳನ್ನು ಅರಿಯಲು ಕಾಸರಗೋಡಿನ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಕೇಂದ್ರದ ವಿಜ್ಞಾನಿಗಳ ತಂಡವು ಹೊಸ ಪ್ರಯೋಗಗಳನ್ನು ನಡೆಸುತ್ತಿದೆ. ರೋಗಬಾಧಿತ ಮರಗಳಿಗೆ ಬೇವಿನ ಹಿಂಡಿಯನ್ನು ಬಳಸುವುದರಿಂದ ಇತರ ಕೆಲವು ಸಮಸ್ಯೆಗಳನ್ನೂ ನಿಯಂತ್ರಿಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಚಿಕ್ಕನಾಯಕನಹಳ್ಳಿ ತಂಡದ ಮುಖ್ಯಸ್ಥ ರಕ್ಷಿತ್, ಗ್ರಾಮದ ಮುಖಂಡರಾದ ವಸಂತ್ ಕುಮಾರ್, ಶಿವಪ್ಪ, ಶಂಕರ್ ಹಾಗೂ ಕೃಷಿ ತಜ್ಞರಾದ ಬೀರೇಂದ್ರ, ಮುರುಳಿ ಮತ್ತು ಶಂಕರಮೂರ್ತಿ.ಯುವ ಮುಖಂಡ ಮನು ಅಶ್ವತ್ ನಾರಾಯಣ್. ಉಪಸ್ಥಿತರಿದ್ದರು.
ವರದಿ : ಮಂಜುನಾಥ್ ಹಾಲ್ಕುರಿಕೆ





