Spread the love

ಸಕಲ ಸರ್ಕಾರಿ ಗೌರವಗಳೊಂದಿಗೆ ಕಲ್ಪತರು ನಾಡ ಕಣ್ಮಣಿಗೆ ಅಂತಿಮ ವಿದಾಯ.

ತಿಪಟೂರು: ಮಾಜಿ ಶಾಸಕ ಹಾಗೂ ಮಾಜಿ ಶಿಕ್ಷಣ, ಸಾಕ್ಷರತಾ ಸಚಿವ ಬಿ.ಸಿ. ನಾಗೇಶ್ ಅವರ ಅಂತ್ಯಕ್ರಿಯೆ ಗುರುವಾರ ತಿಪಟೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.

ಬೆಂಗಳೂರಿನ ತಮ್ಮ ಪುತ್ರಿಯ ನಿವಾಸದಲ್ಲಿ ನಿಧನರಾದ ಬಿ.ಸಿ. ನಾಗೇಶ್ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸಾರ್ವಜನಿಕ ದರ್ಶನಕ್ಕೆ ಇಟ್ಟ ಬಳಿಕ ತಿಪಟೂರಿನ ಸ್ವಗೃಹಕ್ಕೆ ತರಲಾಯಿತು. ಇಲ್ಲಿ ಪೂಜೆ ಸಲ್ಲಿಸಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಸಾರ್ವಜನಿಕರು ಅಂತಿಮ ದರ್ಶನ ಪಡೆದರು.

ನಂತರ ಅಲಂಕೃತ ವಾಹನದಲ್ಲಿ ನಗರದ ಬಿ.ಎಚ್. ರಸ್ತೆ, ದೊಡ್ಡಪೇಟೆ, ಕೋಡಿ ಸರ್ಕಲ್ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಪಾರ್ಥಿವ ಶರೀರದ ಮೆರವಣಿಗೆ ನಡೆಸಲಾಯಿತು. ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿದ ವ್ಯಾಪಾರಿಗಳು ಹಾಗೂ ವರ್ತಕರು ಅಂತಿಮ ನಮನ ಸಲ್ಲಿಸಿದರು.

ನಗರದ ಹಿಂದೂ ರುದ್ರಭೂಮಿಯಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಯಿತು ಶ್ರೀರಂಗಪಟ್ಟಣದ ಜ್ಯೋತಿಷಿಗಳಾದ ಬಾನುಪ್ರಕಾಶ್ ಶರ್ಮ ಮತ್ತು ಹಾಸನದ ಕೇಶವ ಅವಧಾನಿ ನೇತೃತ್ವದ ಋತ್ವಿಕರ ತಂಡ ವಿಧಿವಿಧಾನಗಳನ್ನು ನೆರವೇರಿಸಿತು. ಪುತ್ರ ವಿಶ್ವದೀಪ್ ನಾಗೇಶ್ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.

ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ನೇತೃತ್ವದ ಗೌರವ ರಕ್ಷೆ ತಂಡ ರಾಷ್ಟ್ರಗೀತೆ ನುಡಿಸಿ, ಕುಶಲತೋಪು ಸಿಡಿಸುವ ಮೂಲಕ ಗೌರವ ಸಲ್ಲಿಸಿತು. ಬಿ.ಸಿ. ನಾಗೇಶ್ ಅವರ ಪಾರ್ಥಿವ ಶರೀರದ ಮೇಲೆ ಹೊದಿಸಿದ್ದ ರಾಷ್ಟ್ರಧ್ವಜವನ್ನು ಸರ್ಕಾರದ ಪರವಾಗಿ ಶಾಸಕ ಕೆ.ಷಡಕ್ಷರಿ ಯವರು ಬಿ.ಸಿ ನಾಗೇಶ್ ರವರ ಪತ್ನಿ ವೀಣಾ ನಾಗೇಶ್ ಅವರಿಗೆ ಹಸ್ತಾಂತರಿಸಲಾಯಿತು.

ಬಿ.ಸಿ ನಾಗೇಶ್ ಹಿನ್ನೆಲೆ .

ಬೆಳ್ಳೂರು ಮೈಲಾರಯ್ಯನವರ ವಂಶಸ್ಥರಾದ ತಿಪಟೂರಿನ ಮಾಜಿ ಶಾಸಕ ಎಸ್. ಚಂದ್ರಶೇಖರಯ್ಯ ಅವರ ಮೂರನೇ ಪುತ್ರರಾಗಿದ್ದ ಬಿ.ಸಿ. ನಾಗೇಶ್ ಅವರು. ೧೯೫೯ರ ಜುಲೈ ೧ರಂದು ಚಿಕ್ಕಮಗಳೂರಿನಲ್ಲಿ ತಮ್ಮ ತಾಯಿ ತವರು ಮನೆಯಲ್ಲಿ ಜನಿಸಿದರು.ಪ್ರಾಥಮಿಕ ಶಿಕ್ಷಣ ತಿಪಟೂರಿನಲ್ಲಿ ಪಡೆದ ಅವರು ಬೆಂಗಳೂರಿನ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದರು.

ವಿದ್ಯಾರ್ಥಿ ದೆಸೆಯಿಂದಲೇ ಎಬಿವಿಪಿ ಸಂಘಟನೆಯಲ್ಲಿ ಸಕ್ರೀಯರಾಗಿದರು. ಸಂಘಟನಾ ಕಾರ್ಯದರ್ಶಿ ಸೇರಿದಂತೆ ಹಲವಾರು ಹುದ್ದೆ ನಿಭಾಯಿಸಿದರು ನಂತರ ಆರ್‌ಎಸ್‌ಎಸ್‌ನ ಸಕ್ರಿಯ ಕಾರ್ಯಕರ್ತರಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ಮಾಜಿ ಕೇಂದ್ರ ಸಚಿವ ಅನಂತಕುಮಾರ್, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದರು. ಆರ್‌ಎಸ್‌ಎಸ್ ಸಿದ್ಧಾಂತದಲ್ಲಿ ಅಚಲ ನಂಬಿಕೆ ಹೊಂದಿದವರು.
ತಂದೆ ಬಿ.ಎಸ್ ಚಂದ್ರಶೇಖರಯ್ಯನವರು ರಾಮಕೃಷ್ಣ ಹೆಗಡೆಯವರೊಂದಿಗೆ ಜನತಾಪಕ್ಷದಲ್ಲಿ ಶಾಸಕರಾಗಿದರೂ ಸ್ಪಲ್ಪ ಪ್ರಮಾಣದಲ್ಲಿ ರಾಜಕೀಯದಿಂದ ಅಂತರಕಾಯ್ದುಕೊಂಡಿದರು.

1990ರಲ್ಲಿ ಬಿಜೆಪಿ ಪಕ್ಷದ ಸಕ್ರೀಯ ರಾಜಕೀಯಕ್ಕೆ ತೊಡಗಿಕೊಂಡರು ಹಲವಾರು ಜನಪರ ಹೋರಾಟದ ಮೂಲಕ ಜನಮನ್ನಣೆ ಪಡೆದ ಅವರು ನಾಯಕರಾಗಿ 2004ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಯಿಂದ ಸ್ಪರ್ಧೆಮಾಡಿ ಸೋಲು ಅನುಭವಿಸಿದರು., 2008 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು. 2018ರ ಚುನಾವಣೆಯಲ್ಲಿಯೂ ಗೆದ್ದು ಶಾಸಕರಾಗಿ ಆಯ್ಕೆಯಾಗಿ, 2021ರಿಂದ 2022ರವರೆಗೆ ಪ್ರಾಥಮಿಕ ಶಿಕ್ಷಣ, ಸಾಕ್ಷರತೆ ಮತ್ತು ಸಕಾಲ ಸಚಿವರಾಗಿ ಕಾರ್ಯನಿರ್ವಹಿಸಿದರು.

2023 ರ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡ ಬಳಿಕ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಗಾಗಿದ್ದರು. ಮೆದುಳಿನಲ್ಲಿ ಸಣ್ಣ ಗಡ್ಡೆ ಪತ್ತೆಯಾದ ಹಿನ್ನೆಲೆಯಲ್ಲಿ ಬೆಂಗಳೂರಿನ ಆಸ್ಟ್ರಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಚಿಕಿತ್ಸೆ ಮುಂದುವರಿದಿದ್ದರೂ ಸಾರ್ವಜನಿಕ ಜೀವನದ ಚಟುವಟಿಕೆಗಳಲ್ಲಿ ಅವರು ಮತ್ತೆ ಮತ್ತೆ ತೊಡಗಿಸಿಕೊಂಡಿದ್ದರು. ಇತ್ತೀಚೆಗೆ ಬೆಂಗಳೂರಿನಲ್ಲೇ ಉಳಿದು ಚಿಕಿತ್ಸೆ ಪಡೆಯುತ್ತಿದ್ದರು.
ದೀರ್ಘ ಅನಾರೋಗ್ಯದಿಂದ ಬಳಲುತಿತ್ತ ಅವರು ಕೊನೆಉಸಿರೆಳೆದಿದ್ದಾರೆ.

ಮೊದಲ ಭಾರೀ ಶಾಸಕರಾಗಿದ ಅವಧಿಯಲ್ಲಿ ತಿಪಟೂರಿನ ಬಿ.ಹೆಚ್ ರಸ್ತೆ ಅಗಲೀಕರಣ ಹಾಗೂ ನವೀಕರಣ.
ತಿಪಟೂರು ಕೆರೆ ಅಭಿವೃದ್ದಿಗೊಳಿಸಿ ನೀರು ತುಂಬಿಸುವ ಮೂಲಕ 38ವರ್ಷಗಳ ಕಾಲ ನೀರಿಲ್ಲದೆ ಬರಿದ್ದಾಗಿದ ಕೆರೆಗೆ ನೀರುತುಂಬಿಸಿದ ಭಗೀರತರಾದರು.
ಹೊನ್ನವಳ್ಳಿ ಏತನೀರಾವರಿ ಮೂಲಕ ಹೊನ್ನವಳ್ಳಿ ಹಾಗೂ ಕಸಬಾ ಹೋಬಳಿ ಕೆರೆಗಳಿಗೆ ನೀರುಹರಿಸುವ ಕೆಲಸ ಮಾಡಿದರು.
ನಗರ ಹಾಗೂ ಗ್ರಾಮೀಣ ಭಾಗಕ್ಕೆ ಹಲವಾರು ಉತ್ತಮ ಜನಪರ ಯೋಜನೆಗಳನ್ನ ತಂದು ಅಭಿವೃದ್ದಿಯ ಹರಿಕಾರರೆಂದು ಗುರ್ತಿಸಿಕೊಂಡರು.ಸರಳ ಸಜ್ಜನಿಕೆ ಮೂಲಕ ಮತದಾರರ ಮನಗೆದ್ದರು.

ಬಿ.ಸಿ ನಾಗೇಶ್ ರವರು
2ನೇ ಅವಧಿಗೆ ಶಾಸಕರಾಗಿ ಆಯ್ಕೆಯಾಗಿ ಬಸವರಾಜ ಬೊಮ್ಮಯಿ ಸಂಪುಟದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವರಾಗಿ ವಿವೇಕ ಯೋಜನೆ. ಪಠ್ಯಪುಸ್ತಕ ಪರೀಷ್ಕರಣೆ.
ಸಮಾನ ವಸ್ತ್ರ ಸಂಹಿತರ. ಹಿಜಾಬ್ ನಿಷೇಧ .ಶಿಕ್ಷಕರ ವರ್ಗಾವಣೆಗೆ ಜೆಷ್ಠತೆ ಆಧಾರದಲ್ಲಿ ಹೊಸ ನಿಯಮಗಳ ಜಾರಿ ಮೂಲಕ ರಾಜ್ಯದಲ್ಲಿ ಉತ್ತಮ ಹೆಸರುಗಳಿಸಿದರು. ರಾಜ್ಯ ರಾಜಕಾರಣದಲ್ಲಿ ತಮ್ಮದೇ ಚಾಪು ಮೂಡಿಸಿ.ಪಕ್ಷದ ವರೀಷ್ಠರ ಮೆಚ್ಚುಗೆಗಳಿಸಿದ ಬಿ.ಸಿ ನಾಗೇಶ್ ರವರು

ಪತ್ನಿ ಶ್ರೀಮತಿ ವೀಣಾ ನಾಗೇಶ್ ಪುತ್ರಿ ಶಾರದಾ ಪುತ್ರ ವಿಶ್ವದೀಪ್ ಸೇರಿ ಕುಟುಂಬ ಸೇರಿ ಅಪಾರ ಬಂಧುಮಿತ್ರರನ್ನ ಅಗಲಿದ್ದಾರೆ.

ಗಣ್ಯರ ಸಂತಾಪ

ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್. ಉಪಮುಖ್ಯಮಂತ್ರಿ ಜಿ.ಪರಮೇಶ್ವರ್. ಶಾಸಕ ಕೆ.ಷಡಕ್ಷರಿ. ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ ವಿಜಯೇಂದ್ರ .ಮಾಜಿ ಸಚಿವ ಜೆ.ಸಿ ಮಾಧುಸ್ವಾಮಿ.ಮಾಜಿ ಉಪಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ.ಶಾಸಕ ಬಸನಗೌಡ ಪಾಟೀಲ್ ಯತ್ನಾಲ್.ಮಾಜಿ ಸಚಿವ ಸೊಗಡು ಶಿವಣ್ಣ.ತುಮಕೂರು ಶಾಸಕ ಬಿ.ಜಿ ಜ್ಯೋತಿಗಣೇಶ್ .ಜೆಡಿಎಸ್ ಮುಖಂಡ ಕೆ.ಟಿ ಶಾಂತಕುಮಾರ್.ಕೆಪಿಸಿಸಿ ಸದಸ್ಯ ವಿ.ಯೋಗೇಶ್ .ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿಶಂಕರ್ . ಸೇರಿ ಅನೇಕ ಮುಖಂಡರು ಅಂತಿಮ ದರ್ಶನ ಪಡೆದು ಸಂತಾಪಸೂಚಿಸಿದರು.

….ಗಣ್ಯರ ಕಂಬನಿ..

ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, “ಬಿ.ಸಿ. ನಾಗೇಶ್ ಅವರು ಸರಳ, ಸಜ್ಜನಿಕೆಯ ರಾಜಕಾರಣಿ. ತಮ್ಮ ಸರಳತೆಯ ಮೂಲಕವೇ ರಾಜ್ಯದಾದ್ಯಂತ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಎಬಿವಿಪಿ ಹಾಗೂ ಆರ್‌ಎಸ್‌ಎಸ್ ಸಂಘಟನೆಯಲ್ಲಿ ಸಕ್ರಿಯರಾಗಿದ್ದ ಅವರು ಬಿ.ಎಸ್. ಯಡಿಯೂರಪ್ಪ ಹಾಗೂ ಅನಂತಕುಮಾರ್ ಅವರೊಂದಿಗೆ ರಾಜ್ಯಾದ್ಯಂತ ಸಂಚರಿಸಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ಅವರ ಅಗಲಿಕೆ ಬಿಜೆಪಿ ಪಕ್ಷಕ್ಕೆ ಹಾಗೂ ರಾಜ್ಯಕ್ಕೆ ತುಂಬಲಾರದ ನಷ್ಟ” ಎಂದು ಹೇಳಿದರು.

ಕೇಂದ್ರ ಸಚಿವ ವಿ. ಸೋಮಣ್ಣ ಮಾತನಾಡಿ, “ಬಿ.ಸಿ. ನಾಗೇಶ್ ಅವರು ಸರಳ, ಸಜ್ಜನ ರಾಜಕಾರಣಿಯಾಗಿದ್ದರು. ಪಕ್ಷ ಸಂಘಟನೆಗೆ ಹಗಲಿರುಳು ಶ್ರಮಿಸಿದ್ದ ಅವರು ಅನಾರೋಗ್ಯದಿಂದ ನಮ್ಮನ್ನು ಅಗಲಿರುವುದು ತೀವ್ರ ನೋವುಂಟು ಮಾಡಿದೆ” ಎಂದರು.

ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿ, “ಬಿ.ಸಿ. ನಾಗೇಶ್ ಅವರು ಸರಳ, ಸಜ್ಜನಿಕೆಯ ಅಪರೂಪದ ರಾಜಕಾರಣಿ. ಕಡಿಮೆ ಜನಸಂಖ್ಯೆ ಹೊಂದಿರುವ ಕ್ಷೇತ್ರದಿಂದಲೂ ಜನಮನ್ನಣೆ ಗಳಿಸಿದ ರಾಜಕಾರಣಿ. ಅವರ ಅಗಲಿಕೆಯಿಂದ ಉತ್ತಮ ಮಾನವೀಯ ಮೌಲ್ಯಗಳ ವ್ಯಕ್ತಿಯೊಬ್ಬರನ್ನು ಕಳೆದುಕೊಂಡಂತಾಗಿದೆ. ವೈಯಕ್ತಿಕವಾಗಿ ನನಗೆ ತುಂಬಾ ನೋವುಂಟಾಗಿದೆ” ಎಂದರು.

ಬಿಜೆಪಿ ಶಾಸಕ ಹಾಗೂ ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, “ಬಿ.ಸಿ. ನಾಗೇಶ್ ಅವರು ಸರಳ, ಸಜ್ಜನಿಕೆಯ ರಾಜಕಾರಣಿ. ವಿದ್ಯಾರ್ಥಿ ಸಂಘಟನೆಯಲ್ಲಿ ಸಕ್ರಿಯ ಸದಸ್ಯರಾಗಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಿದ್ದೇವೆ. ಶಾಸಕರಾಗಿಯೂ ಜೊತೆಯಾಗಿ ಕೆಲಸ ಮಾಡಿದ್ದೇವೆ. ಶಿಕ್ಷಣ ಸಚಿವರಾಗಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ ನಾಗೇಶ್ ಅವರ ಅಗಲಿಕೆ ತೀವ್ರ ನೋವುಂಟು ಮಾಡಿದೆ. ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ” ಎಂದು ಸಂತಾಪ ಸೂಚಿಸಿದರು.

ಈ ಸಂದರ್ಭದಲ್ಲಿ ಪುತ್ರ ವಿಶ್ವದೀಪ್, ಪುತ್ರಿ ಶಾರದಾ, ಪತ್ನಿ ವೀಣಾ ನಾಗೇಶ್, ಶ್ರೀಸತ್ಯ ಗಣಪತಿ ಸೇವಾ ಟ್ರಸ್ಟ್ ಅಧ್ಯಕ್ಷ ಶ್ರೀಕಂಠ ಸೇರಿದಂತೆ ಕುಟುಂಬದ ಸದಸ್ಯರು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳು, ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ :ಮಂಜುನಾಥ್ ಹಾಲ್ಕುರಿಕೆ

error: Content is protected !!