ತಿಪಟೂರು, ಜು. 10: ತಾಲೂಕಿನ ಕೊನೆಹಳ್ಳಿ ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ) ಆವರಣದ ಕೃಷಿ ತಾಕುವಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮಕ್ಕೆ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಹಾಗೂ ಹಿರಿಯ ವಿಜ್ಞಾನಿಗಳಾದ ಡಾ. ಶಂಕರ್ ಚಾಲನೆ ನೀಡಿ ಮಾತನಾಡಿ, ಪರಿಸರ ಸಂರಕ್ಷಣೆ, ಪಶು-ಪಕ್ಷಿಗಳಿಗೆ ಆಹಾರ ಹಾಗೂ ಆಶ್ರಯ ಕಲ್ಪಿಸುವುದರ ಜೊತೆಗೆ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ಗಿಡ ನೆಡುವಿಕೆ ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪರಿಸರಪರ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದ ಅವರು, ನೆಡಲಾದ ಸಸಿಗಳ ಸಂರಕ್ಷಣೆ ಹಾಗೂ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿಯನ್ನು ಕೃಷಿ ವಿಜ್ಞಾನ ಕೇಂದ್ರ ವಹಿಸಿಕೊಳ್ಳಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬೆಣ್ಣೆಹಣ್ಣು, ಗೋಡಂಬಿ (ಗೇರು), ಮಾವು, ಪರಂಗಿ, ಸೀಬೆ ಹಾಗೂ ಹಲಸು ಸೇರಿದಂತೆ ಕಾಡಿನ ಹಣ್ಣಿನ ವಿವಿಧ ತಳಿಗಳ 250ಕ್ಕೂ ಹೆಚ್ಚು ಸಸಿಗಳನ್ನು ಕೃಷಿ ವಿಜ್ಞಾನ ಕೇಂದ್ರದ ಮೂರು ಎಕರೆ ಪ್ರದೇಶದಲ್ಲಿ ನೆಡಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಉದಯ್ ಮಾತನಾಡಿ, ಪರಿಸರ ಸಂರಕ್ಷಣೆ ಹಾಗೂ ಕೃಷಿ ಉಳಿವಿಗಾಗಿ ಯೋಜನೆಯ ವತಿಯಿಂದ ಕೃಷಿ ರೈತ ಕ್ಷೇತ್ರ ಪಾಠಶಾಲೆ, ಪರಿಸರ ಜಾಗೃತಿ ಕಾರ್ಯಕ್ರಮಗಳು, ವಿಶೇಷ ಕೃಷಿ ಅಧ್ಯಯನ ಪ್ರವಾಸ, ಕೆರೆ ಪುನಶ್ಚೇತನ, ಕೆರೆಯಂಗಳದಲ್ಲಿ ಗಿಡ ನೆಡುವಿಕೆ ಹಾಗೂ ಸಾಮಾಜಿಕ ಅರಣ್ಯೀಕರಣದಂತಹ ಹಲವಾರು ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಕೀರ್ತಿ ಶಂಕರ್, ದರ್ಶನ್, ಸಿಂದು, ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಹರೀಶ್ ಗೌಡ ಹಾಗೂ ಮಲ್ಲಿಗಪ್ಪಾಚಾರ್, ತಾಲೂಕು ಕೃಷಿ ಅಧಿಕಾರಿ ಪ್ರಮೋದ್ ಕುಮಾರ್, ಮೇಲ್ವಿಚಾರಕಿ ರಮ್ಯಾ ಶೆಟ್ಟಿ, ಸೇವಾ ಪ್ರತಿನಿಧಿಗಳಾದ ಮೀನಾಕ್ಷಿ ಮತ್ತು ಪ್ರಮೀಳ ಸೇರಿದಂತೆ ಹೊನ್ನವಳ್ಳಿ–ಬಿದರೆಗುಡಿ ಭಾಗದ 200ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.
ವರದಿ :ಮಂಜುನಾಥ್ ಹಾಲ್ಕುರಿಕೆ





