Spread the love

ತಿಪಟೂರು: ನೈತಿಕ ರಾಜಕಾರಣ ಕುಸಿಯುತ್ತಿರುವ ಕಾಲಘಟ್ಟದಲ್ಲಿ ಬಿ.ಸಿ. ನಾಗೇಶ್ ಅವರು ಆದರ್ಶ ರಾಜಕಾರಣ ನಡೆಸಿದ್ದಾರೆ. ಅವರ ಕುಟುಂಬಕ್ಕೆ ರಾಜಕೀಯವಾಗಿ ಶಕ್ತಿ ತುಂಬುವುದು ಪಕ್ಷದ ಜವಾಬ್ದಾರಿಯಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ತಿಳಿಸಿದರು.

ನಗರದ ಗುರುಕುಲ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಬಿ.ಸಿ. ನಾಗೇಶ್ ಅವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ನೈತಿಕ ರಾಜಕಾರಣ ಕುಸಿಯುತ್ತಿದೆ. ಬಿ.ಸಿ. ನಾಗೇಶ್ ಅವರು ನೈತಿಕ ರಾಜಕಾರಣದ ಮೂಲಕ ಎಲ್ಲ ವರ್ಗದ ಜನರ ಮನ ಗೆದ್ದ ಜನನಾಯಕರಾಗಿದ್ದರು. ಪಕ್ಷ ಹಾಗೂ ಸಂಘ ಪರಿವಾರದ ಚಟುವಟಿಕೆಗಳಿಗೆ ತಮ್ಮ ಜೀವನವನ್ನು ತ್ಯಾಗ ಮಾಡಿದ ಅವರ ಕುಟುಂಬಕ್ಕೆ ಪಕ್ಷ ಶಕ್ತಿ ತುಂಬುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಪಕ್ಷದ ಹಿರಿಯರ ಮನವೊಲಿಸುವ ಕೆಲಸ ಮಾಡಬೇಕು ಎಂದರು.

ಒಳ್ಳೆಯ ಉದ್ದೇಶ ಈಡೇರಿಕೆಗಾಗಿ ಪ್ರತಿರೋಧ ತೋರಬೇಕಿದೆ. ಧರ್ಮ ಹಾಗೂ ನೈತಿಕತೆಯ ರಕ್ಷಣೆಗಾಗಿ ನಾನು ಸಹ ಪ್ರತಿರೋಧ ಮಾಡಿದ್ದೇನೆ. ನಮಗೆ ಧರ್ಮರಕ್ಷಣೆ ಮುಖ್ಯ. ಉತ್ತಮ ರಾಜಕೀಯ ಹಿನ್ನೆಲೆಯ ಕುಟುಂಬದಿಂದ ಬಂದಿರುವ ವಿಶ್ವದೀಪ್ ನಾಗೇಶ್ ಅವರಿಗೆ ಟಿಕೆಟ್ ನೀಡಿದರೆ ತಪ್ಪೇನಿಲ್ಲ. ಬಿ.ಸಿ. ನಾಗೇಶ್ ಅವರೊಂದಿಗೆ ನಾನು ಆತ್ಮೀಯ ಒಡನಾಟ ಹೊಂದಿದ್ದೆ. ಸರಳತೆಯ ಜೀವನ ನಡೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರ ಆದರ್ಶಮಯ ರಾಜಕೀಯ ಜೀವನವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ರಾಜಕಾರಣದಲ್ಲಿ ವ್ಯವಹಾರಿಕ ಬಿಜೆಪಿ ಮತ್ತು ವೈಚಾರಿಕ ಬಿಜೆಪಿ ಎನ್ನುವ ಎರಡು ವರ್ಗಗಳನ್ನು ಕಾಣುತ್ತೇವೆ. ಪಕ್ಷವನ್ನು ಅಧಿಕಾರಕ್ಕೆ ತರಬೇಕಾದರೆ ಮಾಸ್ ಪಾಲಿಟಿಕ್ಸ್ ಮತ್ತು ಕ್ಲಾಸ್ ಪಾಲಿಟಿಕ್ಸ್ ಎರಡೂ ಬೇಕು. ಆದರೆ ಬಿ.ಸಿ. ನಾಗೇಶ್ ಅವರು ವೈಚಾರಿಕ ರಾಜಕಾರಣವನ್ನು ಪಾಲಿಸುತ್ತಿದ್ದರು. ಶಿಕ್ಷಣ ಕ್ಷೇತ್ರದಲ್ಲಿ ನೈತಿಕ ಮೌಲ್ಯಗಳನ್ನು ತುಂಬುವ ಕೆಲಸ ಮಾಡಿದರು. ವೈಚಾರಿಕ ರಾಜಕಾರಣದ ಮೂಲಕ ಜನಮನ್ನಣೆ ಗಳಿಸಿದರು. ಸಾವಿಲ್ಲದ ಮನೆ ಇಲ್ಲ. ಅವರ ಸಾವು ಆದರ್ಶಮಯವಾಗಿದೆ. ನೈತಿಕ ರಾಜಕಾರಣಕ್ಕಾಗಿ ಅವರ ಕುಟುಂಬ ರಾಜಕೀಯಕ್ಕೆ ಬರುವುದು ಅಗತ್ಯವಿದೆ. ಚುನಾವಣೆಯಲ್ಲಿ ಟಿಕೆಟ್ ನೀಡುವ ವಿಚಾರವನ್ನು ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು.

ತಿಪಟೂರು ಷಡಕ್ಷರ ಮಠದ ಶ್ರೀ ರುದ್ರಮುನಿಸ್ವಾಮೀಜಿ ಮಾತನಾಡಿ, ಬಿ.ಸಿ. ನಾಗೇಶ್ ಅವರು ಸರಳ, ಸಜ್ಜನಿಕೆಯ ರಾಜಕಾರಣಿಯಾಗಿದ್ದರು. ತಿಪಟೂರು ನಗರ ಸೇರಿದಂತೆ ಸಮಗ್ರ ತಿಪಟೂರಿನ ಅಭಿವೃದ್ಧಿಗೆ ಹೆಚ್ಚಿನ ಪಾತ್ರವಹಿಸಿದ್ದಾರೆ. ಸಚಿವರಾಗಿದ್ದ ಸಂದರ್ಭದಲ್ಲಿ ಮಠಮಾನ್ಯಗಳಿಗೆ ಹೆಚ್ಚಿನ ಅನುದಾನ ದೊರಕಿಸಿಕೊಟ್ಟು ಅವುಗಳ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಅವರ ಪುತ್ರ ವಿಶ್ವದೀಪ್ ನಾಗೇಶ್ ಅವರಿಗೆ ತಿಪಟೂರು ಕ್ಷೇತ್ರದಿಂದ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದರು.

ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪುರ ಮಾತನಾಡಿ, ಬಿ.ಸಿ. ನಾಗೇಶ್ ಅವರು ದೇಶದಲ್ಲಿಯೇ ಮೊದಲ ಬಾರಿಗೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಲು ಹೆಚ್ಚಿನ ಪರಿಶ್ರಮ ಪಟ್ಟರು. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಭಾರತೀಯತೆಯನ್ನು ಅಳವಡಿಸಬೇಕು ಎನ್ನುವ ಕನಸು ಹೊಂದಿದ್ದರು. ದೇಶದಲ್ಲಿ ಶಿಕ್ಷಣದ ಮೌಲ್ಯಗಳು ಕುಸಿದರೆ ದೇಶ ಉಳಿಯಲು ಸಾಧ್ಯವಿಲ್ಲ ಎನ್ನುವ ನಂಬಿಕೆ ಅವರದಾಗಿತ್ತು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತಿಪಟೂರು ಗುರುಕುಲಾನಂದಾಶ್ರಮದ ಶ್ರೀ ಕರಿಬಸವದೇಶಿಕೇಂದ್ರ ಮಹಾಸ್ವಾಮೀಜಿ, ಮಾಡಾಳು ವಿರಕ್ತಮಠದ ಶ್ರೀ ರುದ್ರಮುನಿಸ್ವಾಮೀಜಿ, ತಮ್ಮಡಿಹಳ್ಳಿ ವಿರಕ್ತಮಠದ ಶ್ರೀ ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಮಹಾಸ್ವಾಮೀಜಿ, ಷಡಕ್ಷರ ಮಠದ ಶ್ರೀ ರುದ್ರಮುನಿಸ್ವಾಮೀಜಿ, ಆರ್‌ಎಸ್‌ಎಸ್ ಭಾರತೀಯ ಪರಿಕ್ರಮ ಯಾತ್ರೆಯ ಮುಖ್ಯಸ್ಥ ಸೀತಾರಾಮ್ ಕೇದಿಲಾಯರ್, ವಿಷ್ಣುಕಾಂತ್ ಚಟಪಲ್ಲಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ವೈ.ಹೆಚ್. ಹುಚ್ಚಯ್ಯ, ಶ್ರೀಮತಿ ವೀಣಾ ನಾಗೇಶ್, ಪುತ್ರ ವಿಶ್ವದೀಪ್ ನಾಗೇಶ್, ಡಾ. ಶ್ರೀಧರ್, ಡಾ. ವಿವೇಚನ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ವರದಿ :ಮಂಜುನಾಥ್ ಹಾಲ್ಕುರಿಕೆ

error: Content is protected !!