Spread the love

ತಿಪಟೂರು: ಬೆಂಗಳೂರು ನಿರ್ಮಾತೃ, ಕರ್ನಾಟಕ ಕಂಡ ಅಪ್ರತಿಮ ಆಡಳಿತಗಾರ ನಾಡಪ್ರಭು ಕೆಂಪೇಗೌಡರು ತಮ್ಮ ಆಡಳಿತದಲ್ಲಿ ಕೃಷಿ, ನೀರಾವರಿ, ನಾಡು-ನುಡಿಗೆ ಹೆಚ್ಚಿನ ಆದ್ಯತೆ ನೀಡಿದ್ದರು. ಕೃಷಿ ಹಾಗೂ ನೀರಾವರಿ ಕ್ಷೇತ್ರದಲ್ಲಿ ಹಲವಾರು ಸುಧಾರಣೆಗಳನ್ನು ತಂದು ರೈತರ ಬದುಕು ಹಸನಾಗಲು ಕಾರಣರಾದರು. ವರ್ತಕರಿಗೆ ವ್ಯಾಪಾರಕ್ಕೆ ಅನುಕೂಲವಾಗುವ ರೀತಿಯಲ್ಲಿ ಹಲವಾರು ಪೇಟೆಗಳನ್ನು ನಿರ್ಮಿಸಿದರು.ಕೆರೆಕಟ್ಟೆ ದೇವಾಲಯಗಳನ್ನ ನಿರ್ಮಿಸಿ ಉತ್ತಮ ಆಡಳಿತ ನಡೆಸಿದ ನಾಡಪ್ರಭುಗಳ ರಾಜನೀತಿಯ ತತ್ವಗಳೇ ಕನ್ನಡ ನಾಡಿನ ಏಳಿಗೆಗೆ ಇಂದಿಗೂ ಪ್ರೇರಣೆಯಾಗಿವೆ ಎಂದು ಹೊನ್ನವಳ್ಳಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಶ್ವತ್ ನಾರಾಯಣ್ ತಿಳಿಸಿದರು.


ನಗರದ ಟಿ.ಎಂ. ಮಂಜುನಾಥ್ ನಗರದ ತಮ್ಮ ಗೃಹ ಕಚೇರಿಯಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 517ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಡಪ್ರಭು ಕೆಂಪೇಗೌಡರು ತಮ್ಮ ಆಳ್ವಿಕೆಯಲ್ಲಿ ಸರ್ವಜನಾಂಗಕ್ಕೂ ಸಮಾನ ಅವಕಾಶಗಳನ್ನು ನೀಡಿದರು. ತಮ್ಮ ಆಡಳಿತದಲ್ಲಿ ಭವ್ಯ ಬೆಂಗಳೂರನ್ನು ನಿರ್ಮಿಸಿ, ಕೆರೆ-ಕಟ್ಟೆಗಳು ಹಾಗೂ ಗುಡಿ-ಗೋಪುರಗಳನ್ನು ನಿರ್ಮಿಸುವ ಮೂಲಕ ಬೆಂಗಳೂರನ್ನು ವಿಶ್ವವಿಖ್ಯಾತ ನಗರವನ್ನಾಗಿ ರೂಪಿಸಿದರು. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹೊನ್ನೇನಹಳ್ಳಿ ವಿರುಪಾಕ್ಷಣ್ಣ ಮಾತನಾಡಿ, ಬೆಂಗಳೂರು ವಿಶ್ವವಿಖ್ಯಾತ ನಗರವಾಗಲು ನಾಡಪ್ರಭು ಕೆಂಪೇಗೌಡರ ಕನಸೇ ಕಾರಣವಾಗಿದೆ. ಅವರು ಕಟ್ಟಿದ ಕನಸಿನ ಬೆಂಗಳೂರಿಗೆ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ವಿಶೇಷ ಒತ್ತು ನೀಡಿ, ಸಿಲಿಕಾನ್ ಸಿಟಿಯನ್ನಾಗಿ ರೂಪಿಸುವ ಮೂಲಕ ಜಾಗತಿಕ ಮನ್ನಣೆ ದೊರೆಯುವಂತೆ ಮಾಡಿದ್ದಾರೆ. ಕೆಂಪೇಗೌಡರ ಆಡಳಿತ ನೀತಿಯನ್ನು ಇಂದಿನ ರಾಜಕಾರಣಿಗಳು ಅಳವಡಿಸಿಕೊಂಡು ಸರ್ವಜನಾಂಗದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಹೊನ್ನೇನಹಳ್ಳಿ ವಿರುಪಾಕ್ಷಣ್ಣ, ಮಡೇನೂರು ಗೊಲ್ಲರಹಟ್ಟಿ ಮಂಜಣ್ಣ, ಸತೀಶ್, ಪ್ರದೀಪ್, ರಂಗಣ್ಣ, ರವಿಕುಮಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವರದಿ :ಮಂಜುನಾಥ್ ಹಾಲ್ಕುರಿಕೆ

error: Content is protected !!