ನೊಣವಿನಕೆರೆ ಹಾಗೂ ಮಲ್ಲಘಟ್ಟ ಕೆರೆಯಲ್ಲಿ ವಿಶೇಷ ಪೂಜೆ; ಅಭಿವೃದ್ಧಿಗೆ 35 ಕೋಟಿ ರೂ. ಘೋಷಣೆ.
ತಿಪಟೂರು, ಜೂ. 7: ಕಲ್ಪತರು ನಾಡಿನ ಶಕ್ತಿಪೀಠವಾದ ನೊಣವಿನಕೆರೆ ಸೋಮೆಕಟ್ಟೆ ಶ್ರೀ ಕಾಡಸಿದ್ದೇಶ್ವರ ಮಠಕ್ಕೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ನೊಣವಿನಕೆರೆ ಸೋಮೆಕಟ್ಟೆ ಶ್ರೀಕಾಡಸಿದ್ದೇಶ್ವರ ಮಠದ ಶ್ರೀ ಕರಿವೃಷಭದೇಶಿಕೇಂದ್ರ ಶಿವಯೋಗೀಶ್ವರ ಮಹಾಸ್ವಾಮೀಜಿಗಳ ನೇತೃತ್ವದಲ್ಲಿ ಮಠದ ಆವರಣದಲ್ಲಿರುವ ಗುಹೆಯಲ್ಲಿ ವಿಶೇಷ ಪೂಜೆ ನೆರವೇರಿತು. ಈ ವೇಳೆ ಮಠದ ಕಿರಿಯ ಶ್ರೀಗಳಾದ ಅಭಿನವ ಶ್ರೀ ಕಾಡಸಿದ್ದೇಶ್ವರ ಮಹಾಸ್ವಾಮೀಜಿಗಳು ಹಾಗೂ ಶಾಸಕರು ಹಾಗೂ ಅಧಿಕಾರಿಗಳನ್ನು ಹೊರಗಿಡಲಾಗಿತ್ತು.
ಬಳಿಕ ಶ್ರೀ ಕಾಡಸಿದ್ದೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಮುಖ್ಯಮಂತ್ರಿ, ಅಭಿಮಾನಿಗಳತ್ತ ಕೈಬೀಸಿ ಶುಭಾಶಯ ಕೋರಿದರು. ನಂತರ ಗುರುಭವನದಲ್ಲಿ ಸ್ವಾಮೀಜಿಗಳೊಂದಿಗೆ ಕೆಲಕಾಲ ವಿಶ್ರಾಂತಿ ಪಡೆದರು.

ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, “ನೊಣವಿನಕೆರೆ ಕಾಡಸಿದ್ದೇಶ್ವರ ಮಠಕ್ಕೆ ನಾನು ಹೊಸಬನಲ್ಲ. ಕಳೆದ 25 ವರ್ಷಗಳಿಂದ ಇಲ್ಲಿಗೆ ಬರುತ್ತಿದ್ದೇನೆ. ಎಷ್ಟು ಬಾರಿ ಬಂದಿದ್ದೇನೆ ಎಂಬುದು ನನಗೂ ಗೊತ್ತಿಲ್ಲ. ಪ್ರತಿಬಾರಿಯೂ ಸೇವೆ ಮಾಡಿ, ಮಾರ್ಗದರ್ಶನ ಹಾಗೂ ದರ್ಶನ ಪಡೆದುಕೊಂಡಿದ್ದೇನೆ. ನನಗೂ ಸೇರಿದಂತೆ ರಾಜ್ಯಕ್ಕೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದ್ದೇನೆ. ನಾನು ಇಲ್ಲಿ ಮುಖ್ಯಮಂತ್ರಿಯಾಗಿ ಬಂದಿಲ್ಲ; ಮೊದಲು ಭಕ್ತನಾಗಿ ಬಂದಿದ್ದೇನೆ. ಸಚಿವ ಸ್ಥಾನ ನಂತರದ ವಿಷಯ, ಮೊದಲು ನಾನು ಭಕ್ತ,” ಎಂದು ಹೇಳಿದರು. ತುರುವೇಕೆರೆ ತಾಲ್ಲೂಕಿನ ಮಲ್ಲಘಟ್ಟ ಕೆರೆಗೆ ಭೇಟಿ ನೀಡಿದ ಮುಖ್ಯಮಂತ್ರಿ, ಶ್ರೀ ಕರಿವೃಷಭದೇಶಿಕೇಂದ್ರ ಶಿವಯೋಗೀಶ್ವರ ಮಹಾಸ್ವಾಮೀಜಿಗಳ ನೇತೃತ್ವದಲ್ಲಿ ಗಂಗಾಪೂಜೆ ಹಾಗೂ ಪುಷ್ಪಾರ್ಚನೆ ನೆರವೇರಿಸಿದರು. ನಂತರ ಗಂಗಾಧರೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮಾತನಾಡಿದರು.

“ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಈ ಸನ್ನಿಧಿಗೆ ಭೇಟಿ ನೀಡಿದ್ದೇನೆ. ಮಲ್ಲಘಟ್ಟ ಕೆರೆ ಹಾಗೂ ಗಂಗಾಧರೇಶ್ವರ ದೇವಾಲಯಕ್ಕೆ ಈ ಹಿಂದೆ ಮೂರು-ನಾಲ್ಕು ಬಾರಿ ಬಂದಿದ್ದೇನೆ. ಇದು ಐತಿಹಾಸಿಕ ಮತ್ತು ಪವಿತ್ರ ಸ್ಥಳವಾಗಿದೆ. ಇಲ್ಲಿನ ನೀರನ್ನು ನನ್ನ ಗೃಹಪ್ರವೇಶದ ಸಂದರ್ಭದಲ್ಲೂ ತೆಗೆದುಕೊಂಡು ಹೋಗಿದ್ದೆ. ಸುಮಾರು 25 ವರ್ಷಗಳಿಂದ ಈ ಕ್ಷೇತ್ರದೊಂದಿಗೆ ಒಡನಾಟವಿದೆ. ಇಲ್ಲಿಗೆ ಬಂದಾಗ ಮನಸ್ಸಿಗೆ ಸಂತೋಷ ಮತ್ತು ನೆಮ್ಮದಿ ಸಿಗುತ್ತದೆ,” ಎಂದು ತಿಳಿಸಿದರು.
ಮಲ್ಲಘಟ್ಟ ಕೆರೆ ಪವಿತ್ರ ಕ್ಷೇತ್ರವಾಗಿದ್ದು, ಇದರ ಅಭಿವೃದ್ಧಿಗಾಗಿ 35 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಭಾಗದ ರೈತರಿಗೆ ಅನುಕೂಲವಾಗುವಂತೆ ಕಾಲುವೆ ವ್ಯವಸ್ಥೆ, ಸೋಪಾನ ಮಂಟಪ, ಅತಿಥಿಗೃಹ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದು ಹೇಳಿದರು.
“ಸ್ಥಳೀಯರು, ಸಂಸ್ಥೆಯವರು ಹಾಗೂ ಕಾಡಸಿದ್ದೇಶ್ವರ ಮಠದವರೊಂದಿಗೆ ಚರ್ಚೆ ನಡೆಸಿದ್ದೇನೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತೇನೆ. ನನಗೆ ರಾಜಕಾರಣಕ್ಕಿಂತ ರಾಜ್ಯದ ಅಭಿವೃದ್ಧಿಯೇ ಮುಖ್ಯ. ಮಠದೊಂದಿಗಿನ ನನ್ನ ಸಂಬಂಧ ಹಲವು ವರ್ಷಗಳದ್ದು. ಅಜ್ಜಯ್ಯನವರು ತೋರಿಸುವ ಧರ್ಮಮಾರ್ಗದಲ್ಲಿಯೇ ನಡೆಯುತ್ತೇನೆ,” ಎಂದರು.
ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಎಲ್ಲ ಧರ್ಮಗಳ ಪೀಠಾಧಿಪತಿಗಳನ್ನು ಆಹ್ವಾನಿಸಲಾಗಿತ್ತು. ಹಿಂದೂ, ಕ್ರೈಸ್ತ, ಸಿಖ್ ಹಾಗೂ ಬೌದ್ಧ ಸೇರಿದಂತೆ ಎಲ್ಲ ಧರ್ಮಗಳನ್ನು ಸಮಾನ ಗೌರವದಿಂದ ಕಾಣಲಾಗುತ್ತದೆ. ಪ್ರತಿಯೊಬ್ಬರ ಧಾರ್ಮಿಕ ಆಚರಣೆ ಅವರವರಿಗೆ ಶ್ರೇಷ್ಠವಾಗಿದ್ದು, ಎಲ್ಲ ಧರ್ಮಗಳನ್ನೂ ಗೌರವಿಸಬೇಕು ಎಂದು ಮುಖ್ಯಮಂತ್ರಿ ಹೇಳಿದರು.

ಈ ಸಂದರ್ಭದಲ್ಲಿ ನೊಣವಿನಕೆರೆ ವಿರಕ್ತಮಠದ ಶ್ರೀ ಅಭಿನವ ಶ್ರೀ ಕಾಡಸಿದ್ದೇಶ್ವರ ಮಹಾಸ್ವಾಮೀಜಿ, ಷಡಕ್ಷರ ಮಠದ ಶ್ರೀ ರುದ್ರಮುನಿಸ್ವಾಮೀಜಿ, ಶಾಸಕ ಕೆ.ಷಡಕ್ಷರಿ ಎಂ.ಟಿ. ಕೃಷ್ಣಪ್ಪ, ಗುಬ್ಬಿ ಶ್ರೀನಿವಾಸ್, ಕುಣಿಗಲ್ ಶಾಸಕ ಡಾ.ರಂಗನಾಥ್ ಅರಸೀಕೆರೆ ಶಾಸಕ ಕೆ.ಎಂ ಶಿವಲಿಂಗೇಗೌಡ ಮಾಜಿ ಸಚಿವ ಟಿ.ಬಿ ಜಯಚಂದ್ರ. ನಿಖಿಲ್ ರಾಜ್ ಮೌರ್ಯ.ಕೆಪಿಸಿಸಿ ಸದಸ್ಯ ವಿ.ಯೋಗೇಶ್ , ನಿಖಿಲ್ ರಾಜಣ್ಣ ಕಾಂಗ್ರೆಸ್ ಅಧ್ಯಕ್ಷ ಮಡೇನೂರು ಕಾಂತರಾಜು, ಮಾಜಿ ತಾ.ಪಂ. ಅಧ್ಯಕ್ಷ ನ್ಯಾಕೇನಹಳ್ಳಿ ಸುರೇಶ್, ನಗರಾಧ್ಯಕ್ಷ ಟಿ.ಎನ್. ಪ್ರಕಾಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ :ಮಂಜುನಾಥ್ ಹಾಲ್ಕುರಿಕೆ





