Spread the love

ಮದೀನ ಮಸೀದಿಯಲ್ಲಿ ಮುಖಂಡರ ಸುದ್ದಿಘೋಷ್ಠಿ ನಾಡಿನ ಶಾಂತಿ ಸೌಹಾರ್ದತೆಗೆ ಬೆಂಬಲ ಘೋಷಣೆ.

ತಿಪಟೂರು: ನಗರದ ಹೊರವಲಯದಲ್ಲಿ ರಂಜಾನ್ ಹಬ್ಬದ ದಿನ ನಡೆದ ಗೋ ಸಾಗಾಣಿಕೆದಾರರು ಹಾಗೂ ಸಂಘಟನೆ ಕಾರ್ಯಕರ್ತರ ಗಲಾಟೆಗೂ ಮುಸ್ಲಿಂ ಸಮುದಾಯಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಮುಸ್ಲಿಂ ಸಮುದಾಯದ ಮುಖಂಡರು ಸ್ಪಷ್ಟಪಡಿಸಿದ್ದಾರೆ. ಅನಗತ್ಯವಾಗಿ ಸಮುದಾಯವನ್ನು ಗುರಿಯಾಗಿಸಿಕೊಂಡು ಅಪಪ್ರಚಾರ ಮಾಡುವುದನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಮದೀನಾ ಮಸೀದಿ ಆವರಣದಲ್ಲಿ ನಡೆದ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ಮಹಮ್ಮದ್ ದಸ್ತಗೀರ್ ಅವರು, ರಂಜಾನ್ ದಿನ ನಗರ ಹೊರವಲಯದಲ್ಲಿ ಗೋ ಸಾಗಾಣಿಕೆಗೆ ಸಂಬಂಧಿಸಿದಂತೆ ಕೆಲ ದನದ ವ್ಯಾಪಾರಿಗಳು ಮತ್ತು ಕೆಲವು ಸಂಘಟನೆಗಳ ಕಾರ್ಯಕರ್ತರ ನಡುವೆ ನಡೆದ ಗಲಾಟೆಯಲ್ಲಿ ಹಲ್ಲೆ ನಡೆದಿರುವುದಕ್ಕೆ ಮುಸ್ಲಿಂ ಸಮುದಾಯ ವಿಷಾದ ವ್ಯಕ್ತಪಡಿಸುತ್ತದೆ. ತಿಪಟೂರಿನಲ್ಲಿ ಹಿಂದೂ–ಮುಸ್ಲಿಮರು ಅಣ್ಣತಮ್ಮಂದಿರಂತೆ ಒಟ್ಟಾಗಿ ಬದುಕುತ್ತಿದ್ದು, ಕೆಲ ಕಿಡಿಗೇಡಿಗಳ ಕೃತ್ಯಗಳಿಂದ ಕಲ್ಪತರು ನಾಡಿನ ಸೌಹಾರ್ದತೆ ಹಾಳಾಗಬಾರದು . ಶಾಂತಿ–ಸೌಹಾರ್ದತೆಯನ್ನು ಕಾಪಾಡಲು ಕಾನೂನು ಸುವ್ಯವಸ್ಥೆಗೆ ಸಮುದಾಯ ಸಹಕಾರ ನೀಡುತ್ತದೆ. ಯಾರೇ ತಪ್ಪು ಮಾಡಿದರೂ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಅನಗತ್ಯವಾಗಿ ಮುಸ್ಲಿಂ ಸಮುದಾಯದ ಬಗ್ಗೆ ಅಪಪ್ರಚಾರ ಮಾಡಬಾರದು ಎಂದು ತಿಳಿಸಿದರು.


ಬಿಲಾಲ್ ಮಸೀದಿ ಮುತ್ತುವಲ್ಲಿ ಷಫಿಉಲ್ಲಾ ಶರೀಫ್ ಮಾತನಾಡಿ, ದೇಶದ ಕಾನೂನು ಸುವ್ಯವಸ್ಥೆಯ ಬಗ್ಗೆ ನಮಗೆ ಗೌರವವಿದೆ. ಯಾರೇ ತಪ್ಪು ಮಾಡಿದರೂ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಲಿ. ಆದರೆ ಮಾರ್ಚ್ 18 ರಂದು ನಡೆದ ಗಲಾಟೆ ದನ ವ್ಯಾಪಾರಿಗಳು ಮತ್ತು ಕೆಲವು ಸಂಘಟನೆಗಳ ಕಾರ್ಯಕರ್ತರ ನಡುವಿನ ವೈಯಕ್ತಿಕ ಗಲಾಟೆಯಾಗಿದ್ದು, ಅದಕ್ಕೆ ಮುಸ್ಲಿಂ ಸಮುದಾಯಕ್ಕೆ ಸಂಬಂಧವಿಲ್ಲ, ಪೊಲೀಸ್ ಇಲಾಖೆಯ ಕ್ರಮವನ್ನು ನಾವು ಬೆಂಬಲಿಸುತ್ತೇವೆ. ಹಿಂದೂ–ಮುಸ್ಲಿಮರು ಸೌಹಾರ್ದತೆಯಿಂದ ಬದುಕುತ್ತಿರುವ ಈ ಪ್ರದೇಶದಲ್ಲಿ ಶಾಂತಿ ಕದಡುವ ಯಾವುದೇ ಕೃತ್ಯವನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದರು.
ಸಾರ್ವಜನಿಕರಿಗೆ ತಪ್ಪು ಸಂದೇಶ ಹೋಗಬಾರದು. ಮಾವಿನ ತೋಪಿನಲ್ಲಿ ನಿರ್ಮಾಣವಾಗುತ್ತಿರುವುದು ಮಸೀದಿ ಅಲ್ಲ. ಸುಮಾರು 20 ವರ್ಷಗಳ ಹಿಂದೆ ಅಂಜುಮಾನ್ ಉರ್ದು ಶಾಲೆಗೆ ಜಾಗ ಮಂಜೂರಾಗಿದ್ದು, ಅದರ ದಾಖಲೆಗಳು ನಗರಸಭೆಯಲ್ಲಿ ಲಭ್ಯವಿವೆ. ಕಳೆದ 20 ವರ್ಷಗಳಿಂದ ಅಲ್ಲಿ ಮಕ್ಕಳಿಗೆ ಪಾಠ ಹಾಗೂ ಧಾರ್ಮಿಕ ಶಿಕ್ಷಣ ನೀಡಲಾಗುತ್ತಿದೆ. ಈ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಕಲ್ಪತರು ನಾಡು ಶಾಂತಿ–ಸುವ್ಯವಸ್ಥೆಗೆ ಹೆಸರುವಾಸಿಯಾಗಿದ್ದು, ಯಾವುದೇ ಕಾರಣಕ್ಕೂ ಶಾಂತಿ ಕದಡುವ ಪಿತೂರಿಗಳಿಗೆ ಆಸ್ಪದ ನೀಡುವುದಿಲ್ಲ ಎಂದು ತಿಳಿಸಿದರು.
ಮುಖಂಡ ಅಲ್ಲಾಭಕ್ಷು ಮಾತನಾಡಿ, ತಿಪಟೂರಿನಲ್ಲಿ ಶಾಂತಿ–ಸೌಹಾರ್ದತೆ ನೆಲೆಸಬೇಕು ಎಂಬುದು ನಮ್ಮ ಉದ್ದೇಶ. ಎಲ್ಲಾ ಜಾತಿ–ಧರ್ಮಗಳಲ್ಲಿಯೂ ಕಿಡಿಗೇಡಿಗಳು ಇರುತ್ತಾರೆ. ಶಾಂತಿ ಕದಡುವವರ ಕೃತ್ಯಕ್ಕೆ ನಾಗರಿಕ ಸಮಾಜ ಅವಕಾಶ ನೀಡಬಾರದು. ನಮ್ಮ ಸಮುದಾಯದ ಯುವಕರಿಗೆ ತಿಳುವಳಿಕೆ ನೀಡುವ ಕಾರ್ಯವನ್ನು ಮುಖಂಡರು ನಿರಂತರವಾಗಿ ಮಾಡುತ್ತಿದ್ದಾರೆ. ಕೆಲ ದನ ವ್ಯಾಪಾರಿಗಳ ನಡುವಿನ ಗಲಾಟೆಯನ್ನು ಮುಸ್ಲಿಂ ಸಮುದಾಯಕ್ಕೆ ಕಟ್ಟುವ ಪ್ರಯತ್ನ ನಡೆಯುತ್ತಿದೆ. ಅಪಪ್ರಚಾರಗಳಿಗೆ ಸಾರ್ವಜನಿಕರು ಕಿವಿಗೊಡಬಾರದು. ನಾವು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುತ್ತೇವೆ ಹಾಗೂ ಕಾನೂನು ಸುವ್ಯವಸ್ಥೆಗೆ ಗೌರವ ನೀಡುತ್ತೇವೆ ಎಂದು ತಿಳಿಸಿದರು.


ಮದೀನಾ ಮಸೀದಿ ಉಪಾಧ್ಯಕ್ಷ ಸೈಫುಲ್ಲಾ ಎಂ. ಮಾತನಾಡಿ, ದನ ವ್ಯಾಪಾರಿಗಳ ನಡುವಿನ ಗಲಾಟೆಗೆ ಮುಸ್ಲಿಂ ಸಮುದಾಯಕ್ಕೆ ಯಾವುದೇ ಸಂಬಂಧವಿಲ್ಲ. ಕೆಲವು ವ್ಯಕ್ತಿಗಳು ಸಮುದಾಯದ ಹೆಸರನ್ನು ಬಳಸಿ ಬೇಳೆ ಬೆಯ್ಯಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ತಪ್ಪು ಮಾಡಿದವರ ವಿರುದ್ಧ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲಿ. ಆರೋಪಿಗಳ ಬಂಧನಕ್ಕೆ ನಾವು ಸಂಪೂರ್ಣ ಸಹಕಾರ ನೀಡುತ್ತೇವೆ. ಸುಳ್ಳು ಸುದ್ದಿ ಹರಡುವುದರಿಂದ ಶಾಂತಿ ಹಾಳಾಗುತ್ತದೆ ಹಾಗೂ ಅಣ್ಣತಮ್ಮಂದಿರಂತೆ ಬದುಕುತ್ತಿರುವ ಹಿಂದೂ–ಮುಸ್ಲಿಮರ ನಡುವಿನ ಸೌಹಾರ್ದತೆಗೂ ಧಕ್ಕೆ ಉಂಟಾಗುತ್ತದೆ ಎಂದು ಹೇಳಿದರು.
ಪತ್ರಿಕಾ ಘೋಷ್ಠಿಯಲ್ಲಿ ಜಾಮಿಯಾ ಮಸೀದಿ ಮುತ್ತುವಲ್ಲಿ ಹಾಜಿ ಸಲೀಂ ಪಾಷಾ, ಮದೀನಾ ಮಸೀದಿ ಮುತ್ತುವಲ್ಲಿ ಜನಾಬ್ ಮಹಮ್ಮದ್ ದಸ್ತಗೀರ್, ಬಿಲಾಲ್ ಮಸೀದಿ ಮುತ್ತುವಲ್ಲಿ ಜನಾಬ್ ಶಫಿಯುಲ್ಲಾ ಶರೀಫ್, ರಸಿದಿಯಾ ಮಸೀದಿ ಮುತ್ತುವಲ್ಲಿ ಬಾಬುಸಾಬ್, ಉಸ್ಮಾನಿಯಾ ಮಸೀದಿ ಮುತ್ತುವಲ್ಲಿ ರಹಮತುಲ್ಲಾ, ಉಸ್ಮಾನಿಯಾ ಮಸೀದಿ ಮುತ್ತುವಲ್ಲಿ ಅಸ್ಲಾಂ ಪಾಷಾ, ಮುಸ್ಲಿಂ ಮುಖಂಡ ಸಮಿಉಲ್ಲಾ ಖಾನ್ (ಸೌಹಾರ್ದ ವೇದಿಕೆ), ಅಲ್ಲಾಭಕ್ಷು (ಬ್ಲಾಕ್ ಕಾಂಗ್ರೆಸ್ ಮೈನಾರಿಟಿ ಅಧ್ಯಕ್ಷ), ಸೈಫುಲ್ಲಾ ಎಂ., ಮಿಲತ್ ಮುಸ್ಲಿಂ ಶೇಖ್ ಫಾರಾಜ್, ಜಾಮಿಯಾ ಮಸೀದಿ ಕಾರ್ಯದರ್ಶಿ ಮಹಮ್ಮದ್ ಖಲೀಲ್, ಮಹಾಜಿರೇನ್ ಮಸೀದಿ ಮುತ್ತುವಲ್ಲಿ ಇಸ್ಮಾಯಿಲ್, ಮಕ್ಕೆ ಮಸೀದಿ ಕಾರ್ಯದರ್ಶಿ ತನೀರುಲ್ಲಾ ಶರೀಫ್, ಮಕ್ಕೆ ಮಸೀದಿ ಉಪಾಧ್ಯಕ್ಷ ಸಯ್ಯದ್ ಶುಕೂರ್, ಮಹಮ್ಮದ್ ನದೀಮ್ ಸೇರಿದಂತೆ ವಿವಿಧ ಮಸೀದಿಗಳ ಆಡಳಿತ ಮಂಡಳಿ ಸದಸ್ಯರು ಹಾಗೂ ಮುಸ್ಲಿಂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

ವರದಿ :ಮಂಜುನಾಥ್ ಹಾಲ್ಕುರಿಕೆ

error: Content is protected !!