Spread the love

ತಿಪಟೂರು: ಸರ್ಕಾರವು ಪೂರ್ಣ ಪ್ರಮಾಣದಲ್ಲಿ ಒಳಮೀಸಲಾತಿಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಮಾದರ ಮಹಾಸಭಾ ತಿಪಟೂರು ವತಿಯಿಂದ ತಾಲ್ಲೂಕು ಆಡಳಿತ ಸೌಧದ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಹಾಗೂ ಒಳಮೀಸಲಾತಿ ವಿರೋಧಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.


ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮಾದರ ಮಹಾಸಭಾ ಅಧ್ಯಕ್ಷ ಕೆ.ಎಂ. ಶಾಂತಪ್ಪ ಸರ್ಕಾರವು ಒಳಮೀಸಲಾತಿಯನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸದೆ ಕೋರ್ಟ್ ಪ್ರಕರಣಗಳನ್ನು ನೆಪವಿಟ್ಟು ನಾಟಕವಾಡುತ್ತಿದೆ ಎಂದು ಆರೋಪಿಸಿದರು. ಪಟ್ಟಭದ್ರ ಹಿತಾಸಕ್ತಿಯುಳ್ಳ ಕೆಲವು ಸಚಿವರ ಕುತಂತ್ರದಿಂದ ಒಳಮೀಸಲಾತಿ ಜಾರಿಗೆ ಸರ್ಕಾರ ವಿಳಂಬ ಮಾಡುತ್ತಿದೆ, ಸರ್ಕಾರವು ಮಾದಿಗರ ಮತ ಪಡೆದು ಅಧಿಕಾರಕ್ಕೆ ಬಂದಿದೆ. ಈಗ ಮಾದಿಗರಿಗೆ ದ್ರೋಹ ಮಾಡುವ ಕೆಲಸಕ್ಕೆ ಮುಂದಾಗಿರುವುದು ಸರಿಯಲ್ಲ ,ಒಳಮೀಸಲಾತಿ ಸಂವಿಧಾನಬದ್ಧವಾದ ನಮ್ಮ ಹಕ್ಕು. ಈ ಹಕ್ಕಿಗಾಗಿ ಮಾದಿಗ ಬಂಧುಗಳು ನಾಲ್ಕು ದಶಕಗಳಿಂದ ಹೋರಾಟ ಮಾಡುತ್ತಿದ್ದಾರೆ. ಒಳಮೀಸಲಾತಿ ನೀಡುವುದು ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವ ವಿಷಯ ಎಂದು ಸುಪ್ರೀಂ ಕೋರ್ಟ್ ಹೇಳಿದ್ದರೂ ಸಹ ಸರ್ಕಾರ ಮಾದಿಗರಿಗೆ ಅನ್ಯಾಯ ಮಾಡುತ್ತಿದೆ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿರುವ ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಒಳಮೀಸಲಾತಿ ಜಾರಿಯಾಗಿದ್ದರೂ, ಕರ್ನಾಟಕ ಸರ್ಕಾರ ಅದನ್ನು ಜಾರಿಗೊಳಿಸದೆ ವಿಳಂಬ ಮಾಡುತ್ತಿದೆ. ಮಾದಿಗರನ್ನು ಕಡೆಗಣಿಸಿದರೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವ ಸಮಯ ದೂರದಲ್ಲಿಲ್ಲ ಎಂದು ಎಚ್ಚರಿಸಿದರು.


ಮಾದಿಗ ದಂಡೋರಾ ಅಧ್ಯಕ್ಷ ಕುಪ್ಪಾಳು ರಂಗಸ್ವಾಮಿ ಮಾತನಾಡಿ, ಒಳಮೀಸಲಾತಿ ಭಿಕ್ಷೆಯಲ್ಲ, ಅದು ನಮ್ಮ ಹಕ್ಕು ಸ್ವಾತಂತ್ರ್ಯ ಬಂದಾಗಿನಿಂದಲೇ ಮಾದಿಗರು ಬಹುಸಂಖ್ಯಾತರಾಗಿದ್ದರೂ ಕುತಂತ್ರಗಳಿಂದ ಮೀಸಲಾತಿ, ಸರ್ಕಾರಿ ಸೌಲಭ್ಯಗಳು ಹಾಗೂ ರಾಜಕೀಯ ಅಧಿಕಾರವನ್ನು ಕೆಲವರು ಕಬಳಿಸುತ್ತಾ ಬಂದಿದ್ದಾರೆ.
ಒಳಮೀಸಲಾತಿ ಜಾರಿಯಾದರೆ ಮಾದಿಗರಿಗೆ ಸಮಾನ ಪಾಲು ದೊರೆಯುತ್ತದೆ ಮತ್ತು ಅವರು ಆರ್ಥಿಕವಾಗಿ ಮುಂದುವರೆಯುತ್ತಾರೆ ಎಂಬ ಅಸೂಯೆಯಿಂದ ಕೆಲವರು ಕೋರ್ಟ್ ಆದೇಶವನ್ನು ನೆಪವಿಟ್ಟು ಒಳಮೀಸಲಾತಿಯನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ. ಇಂತಹ ಕುತಂತ್ರಗಳಿಗೆ ಮಾದಿಗ ಸಮುದಾಯ ಬಗ್ಗುವುದಿಲ್ಲ. ನಮ್ಮ ನಾಯಕರು ಸಮರ್ಥವಾಗಿ ಹೋರಾಟ ನಡೆಸುತ್ತಿದ್ದಾರೆ. ಅವರ ಹೋರಾಟಕ್ಕೆ ಇಡೀ ಮಾದಿಗ ಸಮುದಾಯ ಬೆಂಬಲವಾಗಿ ನಿಲ್ಲುತ್ತದೆ.ಒಳಮೀಸಲಾತಿ ಜಾರಿಯಾಗುವವರೆಗೆ ಸರ್ಕಾರಿ ಉದ್ಯೋಗ ನೇಮಕಾತಿ ಪ್ರಕ್ರಿಯೆ ನಡೆಸಬಾರದು. ಒಳಮೀಸಲಾತಿ ಆಧಾರದಲ್ಲಿ ನೇಮಕಾತಿ ಮಾಡಿ, ಮಾದಿಗರ ಪಾಲಿನ ಶೇಕಡಾ 6 ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಾಗ್ತಿಹಳ್ಳಿ ಕೃಷ್ಣಮೂರ್ತಿ ಮಾತನಾಡಿ, ಸರ್ಕಾರವು ಒಳಮೀಸಲಾತಿ ಅಧ್ಯಯನಕ್ಕಾಗಿ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ, ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗ ಹಾಗೂ ಮಾಜಿ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ನೇತೃತ್ವದಲ್ಲಿ ಸಮಿತಿಗಳನ್ನು ರಚಿಸಿ ವಸ್ತುನಿಷ್ಠವಾಗಿ ಅಧ್ಯಯನ ನಡೆಸಿದೆ. ಆಯೋಗಗಳು ಮಾದಿಗರಿಗೆ ತಲೆತಲಾಂತರಗಳಿಂದ ಮೀಸಲಾತಿ ಹಂಚಿಕೆಯಲ್ಲಿ ಅನ್ಯಾಯವಾಗಿರುವ ಬಗ್ಗೆ ವರದಿ ನೀಡಿವೆ.
ರಾಜ್ಯದಲ್ಲಿ ಹೆಚ್ಚು ಜನಸಂಖ್ಯೆ ಹೊಂದಿದ್ದರೂ ಮಾದಿಗ ಸಮುದಾಯ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಜನಾಂಗವಾಗಿದೆ. ತುಳಿತಕ್ಕೊಳಗಾದವರನ್ನು ಮೇಲೆತ್ತುವುದು ಸಂವಿಧಾನದ ಆಶಯವಾಗಿದೆ.ಸಂವಿಧಾನದ ಬಗ್ಗೆ ಮಾತನಾಡುವ ಸಚಿವ ಹೆಚ್.ಸಿ. ಮಹದೇವಪ್ಪ ಸೇರಿದಂತೆ ಕೆಲ ಸಚಿವರು ಪಕ್ಷಪಾತ ಧೋರಣೆ ಅನುಸರಿಸುತ್ತಿರುವುದು ಸರಿಯಲ್ಲ.
ಸಾಮಾಜಿಕ ನ್ಯಾಯದ ಪರಿಕಲ್ಪನೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಳಮೀಸಲಾತಿಯನ್ನು ಜಾರಿಗೊಳಿಸಿ ತಮ್ಮ ಬದ್ಧತೆಯನ್ನು ತೋರಿಸಬೇಕು ಎಂದು ಒತ್ತಾಯಿಸಿದರು.


ಆದಿಜಾಂಬವ ಮಹಾಸಭಾ ಅಧ್ಯಕ್ಷ ಪೆದ್ದಿಹಳ್ಳಿ ನರಸಿಂಹಯ್ಯ ಮಾತನಾಡಿ, ಒಳಮೀಸಲಾತಿ ಮಾದಿಗರ ನ್ಯಾಯಬದ್ಧವಾದ ಹಕ್ಕು. ನಮ್ಮ ಹಕ್ಕನ್ನು ನಾವು ಪಡೆದೇ ತೀರುತ್ತೇವೆ ಸರ್ಕಾರವು ಅನಗತ್ಯ ಕಾರಣಗಳನ್ನು ನೀಡದೆ ಕೂಡಲೇ ಪೂರ್ಣ ಪ್ರಮಾಣದಲ್ಲಿ ಒಳಮೀಸಲಾತಿ ಜಾರಿಗೊಳಿಸಬೇಕು.ಒತ್ತಡ ಹಾಗೂ ಕುತಂತ್ರಗಳಿಗೆ ಮಣಿದು
ಸರ್ಕಾರ ಕೈಕಟ್ಟಿ ಕುಳಿತರೆ ಮುಂದಿನ ಚುನಾವಣೆಯಲ್ಲಿ ಮಾದಿಗರ ಶಕ್ತಿಯನ್ನು ತೋರಿಸಬೇಕಾಗುತ್ತದೆ. ನಾವು ಯಾರ ಹಕ್ಕನ್ನೂ ಕಸಿದುಕೊಳ್ಳಲು ಹೊರಟಿಲ್ಲ. ನಮ್ಮ ಪಾಲಿನ ಹಕ್ಕನ್ನು ಮಾತ್ರ ಕೇಳುತ್ತಿದ್ದೇವೆ. ರಾಜ್ಯದಲ್ಲಿ ಹೆಚ್ಚಿನ ಜನಸಂಖ್ಯೆ ಹೊಂದಿರುವ ಮಾದಿಗರು 6 ಶೇಕಡಕ್ಕಿಂತಲೂ ಹೆಚ್ಚು ಪಾಲಿಗೆ ಅರ್ಹರಾಗಿದ್ದರೂ ಸರ್ಕಾರ ನಿಗದಿಪಡಿಸಿದ ಶೇಕಡಾ 6 ಮೀಸಲಾತಿಗೆ ಒಪ್ಪಿಕೊಂಡಿದ್ದೇವೆ. ಆದರೂ ಕೆಲವರು ಅಸೂಯೆಯಿಂದ ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮತ್ತಿಹಳ್ಳಿ ಹರೀಶ್ ಗೌಡ, ಕೊಪ್ಪ ಜಗದಾರ್ಯಸ್ವಾಮಿ, ಹತ್ಯಾಳ್ ಮೂರ್ತಿ, ಡಾ. ಅಂಬೇಡ್ಕರ್ ಸೇವಾ ಸಮಿತಿ ಅಧ್ಯಕ್ಷ ಶಿವಕುಮಾರ್, ವಿಭಾಗೀಯ ಅಧ್ಯಕ್ಷ ಯಗಚೀಕಟ್ಟೆ ರಾಘವೇಂದ್ರ, ಮುಖಂಡರಾದ ಮಾರನಗೆರೆ ರಮೇಶ್, ಗಾಂಧಿನಗರ ಬಸವರಾಜು, ಟಿ.ಕೆ. ಕುಮಾರ್, ಬಿಳಿಗೆರೆ ಚಂದ್ರಶೇಖರ್, ಮಹದೇವಯ್ಯ, ಡಿಎಸ್ಎಸ್ ಅಧ್ಯಕ್ಷ ರಾಜು ಬೆಣ್ಣೆನಹಳ್ಳಿ, ರವೀಶ್, ಜಕ್ಕನಹಳ್ಳಿ ಮೋಹನ್, ಈಚನೂರು ಗ್ರಾಮಪಂಚಾಯ್ತಿ ಮಾಜಿ ಅಧ್ಯಕ್ಷ ಉದಯ್ ಕುಮಾರ್ ಕೊಪ್ಪ.ಮೈನ್ಸ್ ಬಸವರಾಜು ಸೇರಿದಂತೆ ಹಲವರು ಭಾಗವಹಿಸಿದ್ದರು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಬೈಕ್ ರ್ಯಾಲಿ ಮೂಲಕ ತಾಲ್ಲೂಕು ಆಡಳಿತ ಸೌಧಕ್ಕೆ ತೆರಳಿದ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

ವರದಿ :ಮಂಜುನಾಥ್ ಹಾಲ್ಕುರಿಕೆ

error: Content is protected !!