ಕಲ್ಪತರು ಮಕ್ಕಳ ಆಶ್ರಮದ ಮಕ್ಕಳಿಗೆ ಉಚಿತ ಶಾಲಾ ಬ್ಯಾಗ್ ನೋಟ್ ಬ್ಯುಕ್ ಪರಿಕರಣ ವಿತರಣೆ ಕಾರ್ಯಕ್ರಮ.
ತಿಪಟೂರು: ವಿದ್ಯಾರ್ಥಿಗಳು ತಮ್ಮ ನ್ಯೂನತೆಗಳನ್ನು ಮೆಟ್ಟಿನಿಂತು ಪರಿಶ್ರಮ ಹಾಗೂ ದೃಢಸಂಕಲ್ಪದೊಂದಿಗೆ ತಮ್ಮ ಜೀವನವನ್ನು ರೂಪಿಸಿಕೊಳ್ಳುವ ಶಿಲ್ಪಿಗಳಾಗಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ರಾಜ್ಯ ಸಮಿತಿ ಸದಸ್ಯ ಚಿ.ನಿ. ಪುರುಷೋತ್ತಮ್ ಹೇಳಿದರು.

ನಗರದ ಕಲ್ಪತರು ಮಕ್ಕಳ ಸೇವಾಶ್ರಮದಲ್ಲಿ ದಿ. ಕೆ.ಎಲ್. ಪರಮೇಶ್ವರಯ್ಯ ಅವರ ಸ್ಮರಣಾರ್ಥ ಉಚಿತ ಶಾಲಾ ಬ್ಯಾಗ್, ನೋಟ್ಬುಕ್ ಹಾಗೂ ಶಿಕ್ಷಣೋಪಕರಣ ವಿತರಣಾ ಮತ್ತು ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗೂಗಲ್ ಯುಗದಲ್ಲಿ ವಿದ್ಯಾರ್ಥಿಗಳು ಎಲ್ಲ ಮಾಹಿತಿಯನ್ನು ತಕ್ಷಣ ಹುಡುಕುವ ಪ್ರವೃತ್ತಿಗೆ ಒಳಗಾಗುತ್ತಿರುವುದು ಜ್ಞಾನಾರ್ಜನೆ ಹಾಗೂ ಭವಿಷ್ಯದ ದೃಷ್ಟಿಯಿಂದ ಸೂಕ್ತವಲ್ಲ. ಪುಸ್ತಕಗಳು ಹಾಗೂ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ನಿರಂತರ ಓದು ಜ್ಞಾನವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ತಿಪಟೂರು ತಹಸೀಲ್ದಾರ್ ಜಿ.ವಿ. ಮೋಹನ್ ಕುಮಾರ್ ಮಾತನಾಡಿ, ಸಮಾಜದಲ್ಲಿ ಅನಾಥತ್ವವು ಕೇವಲ ಆರ್ಥಿಕ ಸ್ಥಿತಿಯಿಂದಲ್ಲ, ಪ್ರೀತಿ ಹಾಗೂ ಸಂಸ್ಕಾರಗಳ ಕೊರತೆಯಿಂದ ಉಂಟಾಗುತ್ತದೆ ಎಂದರು. ವಿದ್ಯೆಯಲ್ಲಿ ಮೇಲು–ಕೀಳು ಎಂಬುದಿಲ್ಲ. ಕಷ್ಟಪಟ್ಟು ಓದುವವರೇ ಜೀವನದಲ್ಲಿ ಯಶಸ್ಸು ಸಾಧಿಸುತ್ತಾರೆ ಎಂದು ಹೇಳಿದರು. ಸಮಾಜದಲ್ಲಿ ಆರ್ಥಿಕವಾಗಿ ಸಮೃದ್ಧರಾಗಿದ್ದರೂ ಸಹಾಯ ಮನೋಭಾವವಿಲ್ಲದವರಿದ್ದಾರೆ, ಮತ್ತೊಂದೆಡೆ ಆರ್ಥಿಕವಾಗಿ ದುರ್ಬಲರಾದರೂ ಸಹಾಯ ಮಾಡುವ ಮನಸ್ಸುಳ್ಳವರಿದ್ದಾರೆ. ಇಂತಹ ಸಹಾಯಕ ಮನಸ್ಸುಗಳನ್ನು ಉತ್ತೇಜಿಸಬೇಕು ಎಂದರು. ದಿ. ಕೆ.ಎಲ್. ಪರಮೇಶ್ವರಯ್ಯ ಅವರು ಜನಪರ ಕಾಳಜಿಯುಳ್ಳ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದನ್ನು ಸ್ಮರಿಸಿದರು.

ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಮಾತನಾಡಿ, ಪತ್ರಿಕಾ ರಂಗವು ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ನಂತರ ನಾಲ್ಕನೇ ಅಂಗವಾಗಿದೆ ಎಂದರು. ಸಮಾಜದಲ್ಲಿ ನಡೆಯುವ ತಪ್ಪುಗಳನ್ನು ತಿದ್ದುವ ಜವಾಬ್ದಾರಿ ಪತ್ರಕರ್ತರ ಮೇಲಿದೆ. ವಿದ್ಯಾರ್ಥಿಗಳು ಜೀವನದಲ್ಲಿ ಸಾಧನೆ ಮಾಡಲು ಕಷ್ಟಪಟ್ಟು ಓದಬೇಕು. ತಂದೆ–ತಾಯಿಗಳು ಅನುಭವಿಸಿದ ಕಷ್ಟಗಳು ನಮಗೆ ಬರಬಾರದೆಂದರೆ ಶಿಕ್ಷಣವೇ ಮುಖ್ಯ ಎಂದು ಹೇಳಿದರು.
ಪ್ರಗತಿಪರ ಚಿಂತಕ ಹಿರಿಯ ಪತ್ರಕರ್ತ ಉಜ್ಜಜ್ಜಿ ರಾಜಣ್ಣ ಮಾತನಾಡಿ, ಕಲ್ಪತರು ಮಕ್ಕಳ ಆಶ್ರಮದ ಮಕ್ಕಳಿಗೆ ಶಿಕ್ಷಣೋಪಕರಣಗಳನ್ನು ನೀಡುತ್ತಿರುವುದು ಶ್ಲಾಘನೀಯ ಕಾರ್ಯ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಕರೆಸಿ ಮಕ್ಕಳಿಗೆ ಪ್ರೇರಣೆ ನೀಡುತ್ತಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.
ಬಯಲು ಸೀಮೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘದ ಸಂಸ್ಥಾಪಕ ಹಾಗೂ ಹಿರಿಯ ಪತ್ರಕರ್ತ ಎನ್. ಬಾನುಪ್ರಶಾಂತ್ ಮಾತನಾಡಿ, ವಿದ್ಯಾರ್ಥಿ ಜೀವನ ಅತ್ಯಂತ ಮಹತ್ವದ ಕಾಲಘಟ್ಟ. ಈ ಸಮಯದಲ್ಲಿ ಜವಾಬ್ದಾರಿಯಿಂದ ಓದಬೇಕು. ಕಾರ್ಯಕ್ರಮದಲ್ಲಿ ದೊರೆಯುವ ಮಾರ್ಗದರ್ಶನದ ಮಾತುಗಳು ಮಕ್ಕಳ ಜೀವನದ ದಿಕ್ಕನ್ನು ಬದಲಾಯಿಸಬಲ್ಲವು ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಚಿ.ನಿ. ಪುರುಷೋತ್ತಮ್, ಜಿಲ್ಲಾ ಉಪಾಧ್ಯಕ್ಷ ಜಯನುಡಿ ಜಯಣ್ಣ, ಹಿರಿಯ ಪತ್ರಕರ್ತರು ಹಾಗೂ ಸುವರ್ಣ ಪ್ರಗತಿ ಪತ್ರಿಕೆ ಸಂಪಾದಕ ಪರಮೇಶ್, ಎಸ್ವಿಪಿ ಕಾಲೇಜಿನ ಪ್ರಾಚಾರ್ಯ ಕೆ.ಎಂ. ರೇಣುಕಯ್ಯ, ನಿರ್ದೇಶಕರಾದ ಜಯಣ್ಣ ಬೆಳಗೆರೆ, ಕೆ.ಟಿ.ಎಂ. ಮಾರುತಿ, ತಾಲೂಕು ಘಟಕದ ಉಪಾಧ್ಯಕ್ಷ ಡಿ. ಕುಮಾರ್, ಖಜಾಂಚಿ ಎ.ಆರ್. ಕುಮಾರಸ್ವಾಮಿ, ಹಿರಿಯ ಪತ್ರಕರ್ತರಾದ ಎನ್. ಬಾನುಪ್ರಶಾಂತ್, ಹೊನ್ನವಳ್ಳಿ ನಂಜಪ್ಪ, ಕಲ್ಲೇಶ್, ಉಜ್ಜಜ್ಜಿ ರಾಜಣ್ಣ, ಪತ್ರಕರ್ತರಾದ ಮಂಜುನಾಥ್ ಹಾಲ್ಕುರಿಕೆ, ಬಿ.ಟಿ. ಕುಮಾರ್, ದಯಾನಂದ ಸ್ವಾಮಿ, ಮೋಹನ್, ಸುನಿಲ್, ಕಲ್ಪತರು ಮಕ್ಕಳ ಆಶ್ರಮದ ಮುಖ್ಯಸ್ಥ ವಿರೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಬಜಗೂರು ಮಂಜುನಾಥ್, ನಿವೃತ್ತ ಶಿಕ್ಷಕ ಮಡೇನೂರು ಸೋಮಶೇಖರ್ ಹಾಗೂ ದಿ. ಕೆ.ಎಲ್. ಪರಮೇಶ್ವರಯ್ಯ ಅವರ ಧರ್ಮಪತ್ನಿ ಮಂಜುಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನಂತರ ತಿಪಟೂರಿನ ಶಾಸಕ ಕೆ. ಷಡಕ್ಷರಿ ಅವರ ನಿವಾಸಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿಯೋಗ ಭೇಟಿ ನೀಡಿ, ಉಭಯ ಕುಶಲೋಪರಿ ವಿಚಾರಿಸಿ ಶಾಸಕರನ್ನು ಸನ್ಮಾನಿಸಲಾಯಿತು.
ವರದಿ :ಮಂಜುನಾಥ್ ಹಾಲ್ಕುರಿಕೆ





