ತಿಪಟೂರು: ನಾಡಪ್ರಭು ಕೆಂಪೇಗೌಡರ ಆಡಳಿತ ಸರ್ವಕಾಲಕ್ಕೂ ಅನುಕರಣೀಯವಾಗಿದ್ದು, ಆಡಳಿತದಲ್ಲಿ ಎಲ್ಲಾ ಸಮಾಜಗಳನ್ನು ಸಮಾನ ಗೌರವದಿಂದ ಕಾಣುವ ಜೊತೆಗೆ, ಬೆಂಗಳೂರು ನಗರವು ವಿಶ್ವಮಟ್ಟದ ನಗರವಾಗಿ ಬೆಳೆಯಲು ಅವರ ದೂರದೃಷ್ಟಿಯೇ ಕಾರಣವಾಗಿದೆ ಎಂದು ಬಿಜೆಪಿ ಯುವ ಮುಖಂಡ ವಿಶ್ವದೀಪ್ ನಾಗೇಶ್ ತಿಳಿಸಿದರು.

ನಗರದ ತಮ್ಮ ಗೃಹ ಕಚೇರಿಯಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 517ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಡಪ್ರಭು ಕೆಂಪೇಗೌಡರ ಆಡಳಿತ ವೈಖರಿ ಇಂದಿನ ರಾಜಕಾರಣಿಗಳಿಗೆ ಸದಾ ಮಾದರಿಯಾಗಿರಬೇಕು.
ಬೆಂಗಳೂರು ನಗರದ ನಾಲ್ಕು ದಿಕ್ಕುಗಳಲ್ಲಿ ಗಡಿಗೋಪುರಗಳನ್ನು ನಿರ್ಮಿಸಿ, ವ್ಯಾಪಾರಿಗಳ ಅಗತ್ಯಗಳಿಗೆ ಅನುಕೂಲವಾಗುವಂತೆ ಅವರು ಸ್ಥಾಪಿಸಿದ ಪೇಟೆಗಳು ಇಂದಿಗೂ ಅವರ ದೂರದೃಷ್ಟಿಗೆ ಸಾಕ್ಷಿಯಾಗಿವೆ. ಬೆಂಗಳೂರು ಸುತ್ತಮುತ್ತ ವ್ಯಾಪಾರ-ವಹಿವಾಟು ಹಾಗೂ ಧಾರ್ಮಿಕ ಕಾರ್ಯಗಳಿಗೆ ಉತ್ತೇಜನ ನೀಡಿದ ಅವರು, ಕೆರೆ-ಕಟ್ಟೆಗಳನ್ನು ನಿರ್ಮಿಸಿ ಸುಭಿಕ್ಷ ಆಡಳಿತ ನಡೆಸುವ ಮೂಲಕ ನಾಡಪ್ರಭುವಾಗಿ ಸದಾ ಜನಮಾನಸದಲ್ಲಿ ಉಳಿದಿದ್ದಾರೆ. ಅವರ ಆಡಳಿತದ ಆದರ್ಶಗಳನ್ನು ಇಂದಿನ ರಾಜಕೀಯ ಮುಖಂಡರು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಗರಾಧ್ಯಕ್ಷ ಜಗದೀಶ್, ಉಪಾಧ್ಯಕ್ಷ ಬಂಡಿಹಳ್ಳಿ ರಾಜಶೇಖರ್, ನಗರಸಭೆಯ ಮಾಜಿ ಸದಸ್ಯರಾದ ಎಂ.ಪಿ. ಪ್ರಸನ್ನಕುಮಾರ್, ಜಯಲಕ್ಷ್ಮಮ್ಮ, ಮುಖಂಡರಾದ ಗುಲಾಬಿ ಸುರೇಶ್, ಮಹೇಶ್ ಹಾಗೂ ಮಹಿಳಾ ಮೋರ್ಚಾದ ಮಂಜುಳಮ್ಮ ಉಪಸ್ಥಿತರಿದ್ದರು.
ವರದಿ :ಮಂಜುನಾಥ್ ಹಾಲ್ಕುರಿಕೆ





