Spread the love

ತಿಪಟೂರು: ಮುಖ್ಯಮಂತ್ರಿ ನಗರ ನಿವೇಶನ ಯೋಜನೆಯಡಿ ನಿವೇಶನ ರಹಿತರಿಗೆ ನಗರದ ಹಳೇಪಾಳ್ಯ ಸಮೀಪ ನಗರಸಭೆ ವ್ಯಾಪ್ತಿಯಲ್ಲಿ ಸರ್ಕಾರದಿಂದ ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯದ ನಿವೇಶನ ರಹಿತರಿಗೆ ವಿಂಗಡಿಸಲಾಗಿರುವ ನಿವೇಶನಗಳ ಹಕ್ಕುಪತ್ರಗಳನ್ನು ಶಾಸಕ ಕೆ. ಷಡಕ್ಷರಿ ವಿತರಿಸಿದರು.


ನಗರಸಭೆ ಕಾರ್ಯಾಲಯದಲ್ಲಿರುವ ಶಾಸಕರ ಕಚೇರಿಯಲ್ಲಿ ಹಕ್ಕುಪತ್ರಗಳನ್ನು ವಿತರಿಸಿ ಮಾತನಾಡಿದ ಅವರು, ವಸತಿ ರಹಿತರಿಗೆ ವಸತಿ, ನಿವೇಶನ ರಹಿತರಿಗೆ ನಿವೇಶನ ಹಾಗೂ ಮನೆ ನಿರ್ಮಾಣದ ಅವಕಾಶ ಕಲ್ಪಿಸುವುದು ಸರ್ಕಾರದ ಆದ್ಯತೆಯಾಗಿದೆ.
“ನಾನು ಮೊದಲ ಬಾರಿಗೆ ಶಾಸಕನಾಗಿದ್ದ ಅವಧಿಯಲ್ಲಿ ಸುಮಾರು 18 ಸಾವಿರ ಬಗರ್ ಹುಕುಂ ಸಾಗುವಳಿ ಚೀಟಿಗಳನ್ನು ನೀಡಿದ್ದೇನೆ. ಸುಮಾರು 8 ಸಾವಿರಕ್ಕೂ ಹೆಚ್ಚು ನಿವೇಶನಗಳು ಹಾಗೂ ಮನೆಗಳನ್ನು ವಿತರಿಸಿದ ಹೆಗ್ಗಳಿಕೆ ನನ್ನದಾಗಿದೆ. ಜನಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಗತ್ಯತೆಗೆ ಅನುಗುಣವಾಗಿ ನಿವೇಶನ ರಹಿತರಿಗೆ ನಿವೇಶನ ನೀಡುವ ಯೋಜನೆ ರೂಪಿಸಲಾಗಿದೆ. ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 100 ಎಕರೆ ಜಾಗವನ್ನು ನಿವೇಶನಕ್ಕಾಗಿ ಗುರುತಿಸಲಾಗಿದೆ. ಸುಮಾರು 35 ಎಕರೆ ಭೂಮಿಯನ್ನು ನಿವೇಶನ ವಿಂಗಡಣೆಗೆ ಗ್ರಾಮ ಪಂಚಾಯಿತಿಗಳಿಗೆ ವರ್ಗಾವಣೆ ಮಾಡಲಾಗಿದೆ. ಶೀಘ್ರದಲ್ಲೇ ಅರ್ಹ ಫಲಾನುಭವಿಗಳಿಗೆ ನಿವೇಶನ ಹಕ್ಕುಪತ್ರಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುವುದು,”


ಈಗಾಗಲೇ ನಗರಸಭೆ ವ್ಯಾಪ್ತಿಯ ಹಳೇಪಾಳ್ಯ ಸಮೀಪ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದ ನಿವೇಶನ ರಹಿತರಿಗೆ ನಿವೇಶನಗಳನ್ನು ನೀಡಲಾಗುತ್ತಿದೆ. ಜನರು ನೀಡಿರುವ ಅಧಿಕಾರವನ್ನು ಪ್ರಾಮಾಣಿಕವಾಗಿ ಜನಸೇವೆಗೆ ಬಳಸಬೇಕು. ತಾಲೂಕಿನ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಿಕೊಂಡಿದ್ದು, ತಿಪಟೂರು ತಾಲೂಕನ್ನು ಮಾದರಿ ತಾಲೂಕಾಗಿ ಅಭಿವೃದ್ಧಿಪಡಿಸುವ ಗುರಿ ಹೊಂದಿದ್ದೇನೆ
ಬಗರ್ ಹುಕುಂ ಸಾಗುವಳಿದಾರರ ಅರ್ಜಿಗಳನ್ನು ಸರ್ಕಾರದ ನಿಯಮಾನುಸಾರ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅರ್ಹ ಫಲಾನುಭವಿಗಳಿಗೆ ಬಗರ್ ಹುಕುಂ ಮಂಜೂರಾತಿ ಚೀಟಿಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುವುದು.ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಮೋಹನ್ ಕುಮಾರ್, ಗ್ರೇಡ್-2 ತಹಸೀಲ್ದಾರ್ ಜಗನ್ನಾಥ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ನ್ಯಾಕೇನಹಳ್ಳಿ ಸುರೇಶ್, ಶಿರಸ್ತೇದಾರ ರವಿಕುಮಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವರದಿ :ಮಂಜುನಾಥ್ ಹಾಲ್ಕುರಿಕೆ

error: Content is protected !!