ತಿಪಟೂರು: ನಗರದ ಕಲ್ಪತರು ಕಾಲೇಜು ಆಡಿಟೋರಿಯಂನಲ್ಲಿ ಮೇ 27ರಂದು ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಹಾಗೂ ಶಾಸಕರ ಉಪಸ್ಥಿತಿಯಲ್ಲಿ ನಡೆದ ಪರಿಶಿಷ್ಟ ಜಾತಿ ವರ್ಗಗಳ ಹಿತರಕ್ಷಣಾ ಸಭೆಯಲ್ಲಿ ರೌಡಿ ಶೀಟರ್ ಮಧುಸೂಧನ್ ಕುಡಿದು ಬಂದು ದಾಂದಲೆ ನಡೆಸಿ ಸಭೆಗೆ ಅಡ್ಡಿಯುಂಟು ಮಾಡಿದ್ದ. ಈ ವೇಳೆ ಆತನನ್ನು ಸಭೆಯಿಂದ ಹೊರಗೆ ಕಳುಹಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೆ ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.

ತಾಲ್ಲೂಕಿನ ನೊಣವಿನಕೆರೆ ಶ್ರೀ ಕಾಡಸಿದ್ದೇಶ್ವರ ಮಠದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ಸಭೆಯಲ್ಲಿ ಶಿಸ್ತು ಕಾಪಾಡುವ ಉದ್ದೇಶದಿಂದ ಆತನನ್ನು ಹೊರಗೆ ಕಳುಹಿಸುವಂತೆ ಸೂಚನೆ ನೀಡಿದ್ದೆ. ಕುಡಿದ ಮತ್ತಿನಲ್ಲಿ ಆತ ತನ್ನ ಚಪ್ಪಲಿಯಿಂದ ತಾನೇ ಹೊಡೆದುಕೊಂಡು ಕೂಗಾಡಿದ್ದ. ಸಭೆಯಲ್ಲಿ ಎಲ್ಲ ಸಮಾಜಗಳ ಮುಖಂಡರು ಉಪಸ್ಥಿತರಿದ್ದರು. ಆತನ ವರ್ತನೆಯನ್ನು ಅವರೂ ಖಂಡಿಸಿದ್ದಾರೆ” ಎಂದು ಹೇಳಿದರು.
“ನಾನು ಎಂದಿಗೂ ಜಾತಿ ರಾಜಕಾರಣ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ. ನನ್ನ ಮನೆಯಲ್ಲಿ ದೇವರ ಮನೆ ಹೊರತುಪಡಿಸಿ ಎಲ್ಲ ಕಡೆಗಳಲ್ಲೂ ಎಲ್ಲಾ ಸಮಾಜದ ಜನರಿಗೆ ಮುಕ್ತ ಅವಕಾಶವಿದೆ. ಅವರು ಹಿಂದೂಗಳಿರಲಿ, ಮುಸ್ಲಿಮರಿರಲಿ, ಹಿಂದುಳಿದ ವರ್ಗದವರಿರಲಿ ಅಥವಾ ಪರಿಶಿಷ್ಟ ಜಾತಿ ವರ್ಗದವರಿರಲಿ, ಎಲ್ಲರಿಗೂ ಸಮಾನ ಅವಕಾಶ ಮತ್ತು ಗೌರವವಿದೆ. ನನ್ನ ಬಗ್ಗೆ ಪರಿಶಿಷ್ಟ ಜಾತಿ ವರ್ಗಗಳ ಮುಖಂಡರಿಗೂ ಚೆನ್ನಾಗಿ ಗೊತ್ತಿದೆ. ರಾಜಕೀಯ ಪ್ರೇರಿತ ಆರೋಪಗಳು ಹಾಗೂ ಅಪಪ್ರಚಾರಗಳಿಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ”
ಸುಳ್ಳು ಅಪಪ್ರಚಾರದ ವಿರುದ್ಧ ಬೇಸರ ವ್ಯಕ್ತಪಡಿಸಿದ ಅವರು, “ಸತ್ಯಾಂಶಗಳನ್ನು ಮರೆಮಾಚಿ ರಾಜಕೀಯ ಉದ್ದೇಶದಿಂದ ನನ್ನ ವಿರುದ್ಧ ಆರೋಪಗಳನ್ನು ಮಾಡಲಾಗುತ್ತಿದೆ.” ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಮುಖಂಡರು, “ಈ ವ್ಯಕ್ತಿ ಪ್ರತಿಯೊಂದು ಸಭೆಗೂ ಬಂದು ತಾನು ದಲಿತ ಮುಖಂಡ ಎಂದು ಹೇಳಿಕೊಂಡು ಗಲಾಟೆ ನಡೆಸುವುದು, ಸಭೆಯ ಶಿಸ್ತು ಹಾಳು ಮಾಡುವುದು ಸಾಮಾನ್ಯವಾಗಿದೆ. ಈ ಹಿಂದೆ ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕುಂದುಕೊರತೆ ಸಭೆಯಲ್ಲಿಯೂ ಗಲಾಟೆ ನಡೆಸಿ, ಶರ್ಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದ. ಸಮಾಜ ಕಲ್ಯಾಣ ಇಲಾಖೆ ತಾಲ್ಲೂಕು ಕಚೇರಿಗೆ ಕುಡಿದು ಹೋಗಿ ದಾಂದಲೆ ನಡೆಸಿದ ಕುರಿತು ಪೊಲೀಸ್ ದೂರು ಸಹ ನೀಡಿದರು” ಎಂದು ಆರೋಪಿಸಿದರು.

“ದಲಿತ ಮುಖಂಡ ಎಂಬ ಹೆಸರಿನಲ್ಲಿ ಕುಡಿದು ಅಧಿಕಾರಿಗಳೊಂದಿಗೆ ಗಲಾಟೆ ನಡೆಸುವುದು ಎಷ್ಟು ಸರಿ? ಕೆಲ ವ್ಯಕ್ತಿಗಳ ರಾಜಕೀಯ ಪ್ರೇರಿತ ಕುಮ್ಮಿಕಿನಿಂದ ಶಾಸಕರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ. ಶಾಸಕ ಕೆ.ಷಡಕ್ಷರಿ ಅವರು ಎಂದಿಗೂ ಜಾತಿ ನೋಡಿ ಕೆಲಸ ಮಾಡಿಲ್ಲ. ಎಲ್ಲ ಸಮಾಜಗಳನ್ನೂ ಸಮಾನ ಗೌರವದಿಂದ ಕಾಣುತ್ತಾರೆ” ಎಂದು ತಿಳಿಸಿದರು.
ವರದಿ :ಮಂಜುನಾಥ್ ಹಾಲ್ಕುರಿಕೆ





