Spread the love

ತಿಪಟೂರು: ನೂರಾರು ವರ್ಷಗಳಿಂದ ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿರುವ ರೈತರನ್ನು ಅರಣ್ಯ ಇಲಾಖೆ ಒಕ್ಕಲೆಬ್ಬಿಸಲು ಯತ್ನಿಸುತ್ತಿದ್ದು, ರೈತರಿಗೆ ಅನಗತ್ಯ ತೊಂದರೆ ನೀಡಿದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ್ ಎಚ್ಚರಿಕೆ ನೀಡಿದರು.

ನಗರದ ತಮ್ಮ ಗೃಹ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಚೌಡ್ಲಾಪುರ ಮೀಸಲು ಅರಣ್ಯ ವ್ಯಾಪ್ತಿಯ ರೈತರು ಸೇರಿದಂತೆ ಈರಲಗೆರೆ, ಕಾಗೇಹಳ್ಳದ ಕಾವಲು, ಅಣ್ಣೇಮಲ್ಲೇನಹಳ್ಳಿ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ನೂರಾರು ವರ್ಷಗಳಿಂದ ಜಮೀನು ಉಳುಮೆ ಮಾಡಿಕೊಂಡು ಜೀವನ ನಡೆಸುತ್ತಿರುವ ರೈತರನ್ನು ಅರಣ್ಯ ಇಲಾಖೆ ಒಕ್ಕಲೆಬ್ಬಿಸಲು ಮುಂದಾಗಿದೆ ಎಂದು ಆರೋಪಿಸಿದರು.


ಸರ್ಕಾರ ಸುಮಾರು ಇಪ್ಪತ್ತು-ಮುವತ್ತು ವರ್ಷಗಳ ಹಿಂದೆಯೇ ಮಂಜೂರು ಪತ್ರಗಳನ್ನು ನೀಡಿದ್ದು, ರೈತರು ಬ್ಯಾಂಕ್‌ಗಳಲ್ಲಿ ಸಾಲ ಪಡೆದು ತೆಂಗು, ಬಾಳೆ, ಅಡಿಕೆ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಸಿ ಕೃಷಿ ಅಭಿವೃದ್ಧಿಪಡಿಸಿದ್ದಾರೆ. ಸರ್ಕಾರವೇ ವಿವಿಧ ಯೋಜನೆಗಳಡಿ ಬೋರ್‌ವೆಲ್‌ಗಳನ್ನು ಕೊರೆಸಿಕೊಟ್ಟಿದ್ದು, ಕೃಷಿ ಮಾಡಿ ಜೀವನ ಸಾಗಿಸುತ್ತಿರುವ ರೈತರಿಗೆ ಏಕಾಏಕಿ ನೋಟಿಸ್ ನೀಡಿ ಒಕ್ಕಲೆಬ್ಬಿಸಲಾಗುತ್ತಿದೆ.
ಕೃಷಿಯನ್ನೇ ನಂಬಿಕೊಂಡು ಬದುಕುತ್ತಿರುವ ನೂರಾರು ಕುಟುಂಬಗಳು ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ನೀಡಿರುವ ಮಂಜೂರು ಪತ್ರ, ಪಹಣಿ ಸೇರಿದಂತೆ ಎಲ್ಲಾ ದಾಖಲೆಗಳಿದ್ದರೂ ಅರಣ್ಯ ಇಲಾಖೆಯ ಭೂಮಿಯನ್ನು ಒತ್ತುವರಿ ಮಾಡಿದ್ದೀರಿ ಎಂದು ನೋಟಿಸ್ ನೀಡಲಾಗಿದೆ. ಸರ್ಕಾರ ಅರಣ್ಯ ಇಲಾಖೆಯಿಂದ ರೈತರಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕು ಎಂದು ಒತ್ತಾಯಿಸಿದರು.
ಅರಣ್ಯ ಇಲಾಖೆಯ ಕಿರುಕುಳ ಮುಂದುವರಿದರೆ ಉಗ್ರ ಹೋರಾಟ ನಡೆಸಲಾಗುವುದು ರಾಜ್ಯದಲ್ಲಿ ಭೀಕರ ಬೇಸಿಗೆ ಆರಂಭವಾಗಿದ್ದು, ರೈತರು ನೀರಾವರಿ ಮೂಲಕ ಬೆಳೆ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ಬೆಸ್ಕಾಂ ಇಲಾಖೆ ಲೋಡ್ ಶೆಡ್ಡಿಂಗ್ ಜಾರಿಗೊಳಿಸಿರುವುದರಿಂದ ರೈತರಿಗೆ ತೀವ್ರ ತೊಂದರೆಯಾಗುತ್ತಿದೆ.
ಹಾಲ್ಕುರಿಕೆ ಭಾಗದಲ್ಲಿ ಲೋಡ್ ಶೆಡ್ಡಿಂಗ್‌ನಿಂದ ರೈತರ ಬೆಳೆಗಳು ಹಾಳಾಗುತ್ತಿವೆ. ಸರ್ಕಾರ ರೈತರಿಗೆ ತೊಂದರೆಯಾಗದಂತೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈರಲಗೆರೆ ಗ್ರಾಮದ ರೈತ ಪ್ರಕಾಶ್ ಮಾತನಾಡಿ, ನಾವು ಕಾಗೇಹಳ್ಳದ ಕಾವಲಿನಲ್ಲಿ ಸುಮಾರು 50 ವರ್ಷಗಳಿಂದ ಜಮೀನು ಉಳುಮೆ ಮಾಡುತ್ತಿದ್ದೇವೆ. ಈ ಭೂಮಿಯನ್ನೇ ನಂಬಿ ಜೀವನ ನಡೆಸುತ್ತಿದ್ದೇವೆ. ಆದರೆ ಅರಣ್ಯ ಇಲಾಖೆ ಒತ್ತುವರಿ ನೆಪದಲ್ಲಿ ರೈತರಿಗೆ ನೋಟಿಸ್ ನೀಡಿ ಒಕ್ಕಲೆಬ್ಬಿಸಲು ಯತ್ನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರಾದ ಶಂಕರಲಿಂಗಯ್ಯ, ಪ್ರಕಾಶ್, ಅಣ್ಣೇಮಲ್ಲೇನಹಳ್ಳಿ ಶಿವಶಂಕರಯ್ಯ, ಉಮಾದೇವಿ, ಕೃಷ್ಣಮೂರ್ತಿ ಮುಂತಾದವರು ಉಪಸ್ಥಿತರಿದ್ದರು.

ವರದಿ :ಮಂಜುನಾಥ್ ಹಾಲ್ಕುರಿಕೆ

error: Content is protected !!