Spread the love

ತಿಪಟೂರು: ನಗರದ ಅಮಾನೀಕೆರೆ ಪ್ರದೇಶದಲ್ಲಿ ಅಪರಿಚಿತ ಮನುಷ್ಯನ ಕಾಲನ್ನು ನಾಯಿಗಳು ಎಳೆದಾಡುತ್ತಿರುವ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿ ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿತ್ತು.
ಘಟನೆಯ ಮಾಹಿತಿ ತಿಳಿದ ತಕ್ಷಣ ತಿಪಟೂರು ನಗರ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ರವಿಕುಮಾರ್ ಹಾಗೂ ಸಬ್‌ ಇನ್ಸ್‌ಪೆಕ್ಟರ್ ಯತೀಶ್ ಅವರ ನೇತೃತ್ವದ ಪೊಲೀಸ್ ತಂಡ ಅಮಾನೀಕೆರೆ ಸಮೀಪದ ಕಲ್ಯಾಣಿ ಬಳಿ ಸ್ಥಳಕ್ಕೆ ಭೇಟಿ ನೀಡಿತು. ಅಲ್ಲಿದ್ದ ನಾಯಿಗಳು ಎಳೆದಾಡುತ್ತಿದ್ದ ಮನುಷ್ಯನ ಕಾಲನ್ನು ಪೊಲೀಸರು ವಶಕ್ಕೆ ಪಡೆದರು.
ಇದೇ ವೇಳೆ ಕೆರೆಯಲ್ಲಿ ಇನ್ನೂ ಶವ ಇರಬಹುದೆಂಬ ಅನುಮಾನದಿಂದ ಪೊಲೀಸರು ಶೋಧ ಕಾರ್ಯ ನಡೆಸಿದರು.

. ಸ್ಥಳದಲ್ಲಿ ಪತ್ತೆಯಾದ ಮನುಷ್ಯನ ಕಾಲಿನ ಪ್ರಾಥಮಿಕ ಪರಿಶೀಲನೆಯಲ್ಲಿ, ಪಾದದ ಭಾಗ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಇರುವುದನ್ನು ಗಮನಿಸಿದರು.
ಈ ಹಿನ್ನೆಲೆಯಲ್ಲಿ, ಗ್ಯಾಂಗ್ರಿನ್‌ಗೆ ಒಳಗಾದ ವ್ಯಕ್ತಿಯ ಕಾಲನ್ನು ಯಾವುದೋ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮೂಲಕ ತೆಗೆದು ಹಾಕಿ, ಬಳಿಕ ಅದರ ಸರಿಯಾದ ವಿಲೇವಾರಿ ಮಾಡದೆ ಕೆರೆಯ ಅಂಗಳಕ್ಕೆ ತಂದು ಎಸೆದಿರಬಹುದೆಂಬ ಅನುಮಾನ ವ್ಯಕ್ತವಾಗಿದೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ನಗರದ ವಿವಿಧ ಆಸ್ಪತ್ರೆಗಳಲ್ಲಿ ಇತ್ತೀಚೆಗೆ ನಡೆದ ಶಸ್ತ್ರಚಿಕಿತ್ಸೆಗಳ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ವರದಿ :ಮಂಜುನಾಥ್ ಹಾಲ್ಕುರಿಕೆ

error: Content is protected !!