Spread the love

ತಿಪಟೂರು: ಬಸವಣ್ಣ ಸೇರಿದಂತೆ ಕಲ್ಯಾಣದ ಶರಣರು ಸಮಾಜದಲ್ಲಿ ಹಾಸುಹೊಕ್ಕಾಗಿದ್ದ ಅಸಮಾನತೆ ಮತ್ತು ಶೋಷಣೆಯನ್ನು ಹೋಗಲಾಡಿಸಿ ಸಮಸಮಾಜ ನಿರ್ಮಾಣ ಮಾಡಲು ಶ್ರಮಿಸಿದ್ದಾರೆ ಎಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.


ನಗರದ ಆಡಳಿತ ಸೌಧದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಜಗಜ್ಯೋತಿ ಬಸವಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮಾಜದಲ್ಲಿ ಗಂಡು-ಹೆಣ್ಣು ಎರಡೇ ಜಾತಿ. ಆದರೆ ಕಸುಬಿನ ಆಧಾರದಲ್ಲಿ ಹುಟ್ಟಿಕೊಂಡ ಜಾತಿ ವ್ಯವಸ್ಥೆ ಇಂದು ಸಮಾಜದ ಅಭಿವೃದ್ಧಿಗೆ ಮಾರಕವಾಗಿದೆ. ಪ್ರತಿಯೊಬ್ಬರೂ ತಮ್ಮ ತಮ್ಮ ಜಾತಿಯನ್ನು ಒಗ್ಗೂಡಿಸಲು ಹೋರಾಡುತ್ತಿದ್ದಾರೆ. ಆದರೆ ಶತಮಾನಗಳ ಹಿಂದೆಯೇ ಬಸವಣ್ಣನವರು ಎಲ್ಲಾ ಜಾತಿಗಳನ್ನು ಜ್ಞಾನದ ಆಧಾರದ ಮೇಲೆ ಗುರುತಿಸಿ ಗೌರವಿಸಿದರು. ಸಮಸಮಾಜ ನಿರ್ಮಾಣಕ್ಕಾಗಿ ಹೋರಾಟ ನಡೆಸಿದಂತಹ ಮಹನೀಯರ ಆದರ್ಶಗಳನ್ನು ನಾವು ಮೈಗೂಡಿಸಿಕೊಳ್ಳಬೇಕು
ನಗರದ ಹೃದಯ ಭಾಗದಲ್ಲಿ ಬಸವಣ್ಣ ಸೇರಿದಂತೆ ಎಲ್ಲಾ ಸಮಾಜಗಳ ಆದರ್ಶಪುರುಷರನ್ನು ಒಂದೇ ಕಡೆ ಪ್ರತಿಷ್ಠಾಪಿಸಲು ಯೋಜನೆ ರೂಪಿಸಲಾಗಿದೆ.
ತಾಲೂಕಿನಲ್ಲೇ ಅತಿ ಹೆಚ್ಚು ಸಂಖ್ಯೆಯಲ್ಲಿ ಬಸವಣ್ಣನವರ ಅನುಯಾಯಿಗಳಿದ್ದರೂ ತಾಲೂಕು ಆಡಳಿತದ ಬಸವ ಜಯಂತಿಗೆ ಬೆರಳೆಣಿಕೆಯಷ್ಟು ಜನ ಮಾತ್ರ ಭಾಗವಹಿಸಿರುವುದು ಬೇಸರ ಉಂಟುಮಾಡಿದೆ ಎಂದು ಹೇಳಿದರು.


ತಹಸೀಲ್ದಾರ್ ಮೋಹನ್ ಕುಮಾರ್ ಮಾತನಾಡಿ, ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಶ್ರಮಿಸಿದ ಬಸವಣ್ಣನವರು ತಮ್ಮವರಿಂದಲೇ ಅನೇಕ ನೋವುಗಳನ್ನು ಅನುಭವಿಸಬೇಕಾಯಿತು. ಎಲ್ಲಾ ಕಷ್ಟಗಳನ್ನು ಎದುರಿಸಿ ಹೊಸ ಸಮಾಜ ನಿರ್ಮಿಸಲು ಶ್ರಮಿಸಿದ ಅವರು, ದೇಶದ ವ್ಯವಸ್ಥೆ ಬದಲಾವಣೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರಿನ ಜೊತೆಯಲ್ಲಿ ಕೇಳಿಬರುವ ಮಹಾನ್ ವ್ಯಕ್ತಿಯಾಗಿದ್ದಾರೆ. ಬಸವಣ್ಣನವರ ಕಾಯಕ ನಿಷ್ಠೆ ಹಾಗೂ ಬಸವಾದಿ ಪ್ರಮಥರ ಚಿಂತನೆಗಳು ಸಮಾಜದ ಎಲ್ಲಾ ಸಮಸ್ಯೆಗಳಿಗೆ ನಿವಾರಣೆಗೆ ಜ್ಯೋತಿಯಾಗಿ ಬೆಳಕು ನೀಡುತ್ತಿವೆ ಎಂದು ತಿಳಿಸಿದರು.
ನಗರಸಭೆ ಪೌರಾಯುಕ್ತ ವಿಶ್ವೇಶ್ವರ ಬದರಗಡೆ ಮಾತನಾಡಿ, ಬಸವಣ್ಣನವರ ಕಾಯಕ ತತ್ವ ಸರ್ವಕಾಲಕ್ಕೂ ಆದರ್ಶನೀಯವಾಗಿದೆ. ಅನುಭವ ಮಂಟಪದಲ್ಲಿ ಎಲ್ಲಾ ವರ್ಗಗಳ ಜನಾಂಗಕ್ಕೂ ಪ್ರತಿನಿಧ್ಯ ನೀಡುವ ಮೂಲಕ ಅದು ಜಗತ್ತಿನ ಮೊದಲ ಸಂಸತ್ ಎಂದರೂ ತಪ್ಪಾಗಲಾರದು. ನಮ್ಮ ಅನುಭವ ಮಂಟಪವೇ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಮೂಲವೆಂದು ಹೇಳಬಹುದು. ಇಂದು ಜಗತ್ತಿನಾದ್ಯಂತ ವಚನಗಳನ್ನು ಅಧ್ಯಯನ ಮಾಡಲಾಗುತ್ತಿದ್ದು, ಕನ್ನಡ ನಾಡಿನ ಸಂಸ್ಕೃತಿ, ಕಲೆ ಹಾಗೂ ಸಾಹಿತ್ಯಕ್ಕೆ ಶರಣರು ಅಪಾರ ಕೊಡುಗೆ ನೀಡಿದ್ದಾರೆ. ವಚನ ಚಳುವಳಿಯ ನಂತರ ದಾಸ ಪರಂಪರೆ ಆರಂಭವಾಯಿತು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಇಒ ಸುದರ್ಶನ್, ಗ್ರೇಡ್-2 ತಹಸೀಲ್ದಾರ್ ಜಗನ್ನಾಥ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಲಜಾಕ್ಷಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ತಾರಾಮಣಿ, ಮುಖಂಡರಾದ ತಿಪಟೂರು ಶ್ರೀ ಕೆಂಪಮ್ಮ ದೇವಿ ದೇವಾಲಯದ ಧರ್ಮದರ್ಶಿ ಚಂದ್ರಶೇಖರಯ್ಯ, ಸಂಪಿ ಸುರೇಶ್, ಗೋವಿಂದರಾಜು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವರದಿ :ಮಂಜುನಾಥ್ ಹಾಲ್ಕುರಿಕೆ

error: Content is protected !!