ತಿಪಟೂರು: ಬಿಜೆಪಿಯ ಸಿದ್ಧಾಂತ ಹಾಗೂ ಜನಪರ ಕಾರ್ಯಕ್ರಮಗಳು ಪಕ್ಷ ಸಂಘಟನೆಗೆ ಬಲ ನೀಡುತ್ತವೆ. ಪಕ್ಷದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಕೆಲಸವನ್ನ ಕಾರ್ಯಕರ್ತರು ಮಾಡಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿಶಂಕರ್ ಹೇಳಿದರು.

ತಾಲ್ಲೂಕಿನ ಹಾಲ್ಕುರಿಕೆ ಶ್ರೀ ರೇವಣಸಿದ್ದೇಶ್ವರ ಬೆಟ್ಟದಲ್ಲಿ ದೀನದಯಾಳ್ ಉಪಾಧ್ಯಾಯರ ಹೆಸರಿನಲ್ಲಿ ಆಯೋಜಿಸಿದ್ದ ಪ್ರಶಿಕ್ಷಣ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿಯ ಸಿದ್ಧಾಂತದಂತೆ ಪ್ರತಿಯೊಬ್ಬ ಕಾರ್ಯಕರ್ತರೂ ನಡೆದುಕೊಳ್ಳಬೇಕು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಮನೆಮನೆಗೆ ತಲುಪಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು. ಪಕ್ಷ ಜಾರಿಗೆ ತಂದಿರುವ ಜನಮುಖಿ ಕಾರ್ಯಕ್ರಮಗಳೇ ಸಂಘಟನೆಗೆ ಶಕ್ತಿಯಾಗಿವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಧಾನಪರಿಷತ್ ಮಾಜಿ ಸದಸ್ಯ ಗಣೇಶ್ ಕಾರ್ಣಿಕ್ ಮಾತನಾಡಿ, ಪಕ್ಷಕ್ಕೆ ಬೂತ್ ಮಟ್ಟದ ಸಂಘಟನೆಗಳೇ ಜೀವಾಳ. ಕಾರ್ಯಕರ್ತರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ದುಡಿಯುತ್ತಿದ್ದು, ಅವರ ಶ್ರಮದಿಂದಲೇ ಪಕ್ಷ ರಾಷ್ಟ್ರದ ಚುಕ್ಕಾಣಿ ಹಿಡಿಯಲು ಸಾಧ್ಯವಾಗಿದೆ. ಪಕ್ಷದ ಸಿದ್ಧಾಂತ, ಕೇಂದ್ರ ಸರ್ಕಾರದ ಯೋಜನೆಗಳು ಹಾಗೂ ರಾಜ್ಯದಲ್ಲಿ ಬಿಜೆಪಿ ಆಡಳಿತಾವಧಿಯಲ್ಲಿ ಕೈಗೊಂಡ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ಪ್ರಚಾರ ಮಾಡಬೇಕು ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಂಗಾರಾಜು ಮಾತನಾಡಿ, ಜನಸಂಘದ ಆರಂಭದಿಂದಲ್ಲೂ ಪ್ರಶಿಕ್ಷಣ ಪರಂಪರೆ ನಡೆದುಬಂದಿದೆ. ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ದೇಶ ಮುಖ್ಯ ಎಂಬ ಸಿದ್ಧಾಂತದಲ್ಲಿ ನಂಬಿಕೆ ಇಟ್ಟು ಕಾರ್ಯ ನಿರ್ವಹಿಸಲಾಗುತ್ತಿದೆ. ಪಕ್ಷದ ಸಿದ್ಧಾಂತದ ಆಧಾರದ ಮೇಲೆ ಸಂಘಟನೆ ಬಲಪಡಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಅಧ್ಯಕ್ಷ ಸತೀಶ್, ನಗರಾಧ್ಯಕ್ಷ ಜಗದೀಶ್, ಯುವ ಮುಖಂಡ ವಿಶ್ವದೀಪ್, ಬಿ.ಸಿ. ನಾಗೇಶ್, ನಿಕಟಪೂರ್ವ ಅಧ್ಯಕ್ಷ ಗುಲಾಬಿ ಸುರೇಶ್, ಮುಖಂಡರಾದ ಹರೀಸಮುದ್ರ ಗಂಗಾಧರ್ ಸೇರಿದಂತೆ ಸುಮಾರು 200ಕ್ಕೂ ಹೆಚ್ಚು ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು.
ವರದಿ :ಮಂಜುನಾಥ್ ಹಾಲ್ಕುರಿಕೆ






