ತಿಪಟೂರು: ಭಾರತ ಕ್ರೀಡಾ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡುತ್ತಿದೆ. 2030ರಲ್ಲಿ ಒಲಂಪಿಕ್ಸ್ಗೆ ಆತಿಥ್ಯವಹಿಸಲು ಭಾರತ ಸಮರ್ಥವಾಗಿದೆ ಎಂದು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.
ನಗರದ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಲಾದ ವಿಟಿಯು 27ನೇ ರಾಜ್ಯಮಟ್ಟದ ಅಂತರ ಮಹಾವಿದ್ಯಾಲಯ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ತಿಪಟೂರಿನಲ್ಲಿ ನಡೆಯುತ್ತಿರುವ ಈ ರಾಜ್ಯಮಟ್ಟದ ಅಥ್ಲೆಟಿಕ್ ಕ್ರೀಡಾಕೂಟ ಕಲ್ಪತರು ನಾಡಿಗೆ ಕೀರ್ತಿಯ ವಿಷಯವಾಗಿದೆ ಎಂದು ಹೇಳಿದರು.
1961ರಲ್ಲಿ ಸ್ಥಾಪಿತವಾದ ಈ ವಿದ್ಯಾ ಸಂಸ್ಥೆ ಗ್ರಾಮೀಣ ಭಾಗದ ಮಧ್ಯಮ ವರ್ಗದ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿರುವ ಹೆಗ್ಗಳಿಕೆಯನ್ನು ಹೊಂದಿದೆ ಎಂದರು. ದೇಶದ ಪ್ರಧಾನ ಮಂತ್ರಿಗಳು ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, 2030ರ ಒಲಂಪಿಕ್ಸ್ ಕ್ರೀಡಾಕೂಟವನ್ನು ದೇಶದಲ್ಲಿ ಆಯೋಜಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಆ ವೇಳೆಗೆ ದೇಶ ಮತ್ತು ರಾಜ್ಯದ ಹೆಚ್ಚಿನ ಕ್ರೀಡಾಪಟುಗಳು ಭಾಗವಹಿಸುವ ದೃಷ್ಟಿಯಿಂದ ಕ್ರೀಡೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಾಗಿದೆ

ಈ ಕ್ರೀಡಾಕೂಟದಲ್ಲಿ 142 ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿರುವುದು ಸಂತಸದ ಸಂಗತಿಯಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 11 ವರ್ಷದ ಆಡಳಿತಾವಧಿಯಲ್ಲಿ ಗ್ರಾಮೀಣ ಜನರ ಆರೋಗ್ಯದ ದೃಷ್ಟಿಯಿಂದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸುವ ಮೂಲಕ ಜನರು ಆರೋಗ್ಯಕರ ಜೀವನ ನಡೆಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ರೈಲ್ವೆ ಇಲಾಖೆಯಲ್ಲಿ ಜಾತಿ–ಧರ್ಮ ಭೇದವಿಲ್ಲದೆ ಶಿಕ್ಷಣದ ಆಧಾರದ ಮೇಲೆ ತಿಂಗಳಿಗೆ 20ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡಲಾಗುತ್ತಿದೆ. ಅಲ್ಲದೆ, ಕ್ರೀಡೆಗಳಲ್ಲಿ ಭಾಗವಹಿಸಲು ಯುವಕರಿಗೆ ಉತ್ತೇಜನ ನೀಡಲಾಗುತ್ತಿದೆ. 2047ರ ವಿಕಸಿತ ಭಾರತದ ಗುರಿ ಸಾಧನೆಗೆ ದೇಶದ ಜನರು ದೃಢಸಂಕಲ್ಪ ಮಾಡಬೇಕಾಗಿದೆ ಎಂದು ಅವರು ಕರೆ ನೀಡಿದರು.
ಜಿಲ್ಲೆಯ ಮಧುಗಿರಿ ಹಾಗೂ ತಿಪಟೂರು ತಾಲ್ಲೂಕುಗಳು ಜಿಲ್ಲಾ ಕೇಂದ್ರಗಳಾಗುವ ಅರ್ಹತೆಯನ್ನು ಹೊಂದಿದ್ದು, ಅಭಿವೃದ್ಧಿಯ ಆಧಾರದ ಮೇಲೆ ಜಿಲ್ಲೆಗಳಾಗಿ ರೂಪಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು ಎಂದರು. ತಿಪಟೂರು ಅಭಿವೃದ್ಧಿಗೆ ಶಾಸಕ ಕೆ. ಷಡಕ್ಷರಿ ಹಾಗೂ ಮಾಜಿ ಸಚಿವ ಬಿ.ಸಿ. ನಾಗೇಶ್ ಸಾಕಷ್ಟು ಶ್ರಮ ವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮುಂದಿನ 15 ದಿನಗಳಲ್ಲಿ ಅರಸೀಕೆರೆ–ಬೆಂಗಳೂರು ನಡುವೆ ಮೆಮೊ ರೈಲು ಸಂಚಾರ ಆರಂಭವಾಗಲಿದ್ದು, ಉದ್ಘಾಟನೆಗೆ ಆಗಮಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಟಿಯು ಕುಲಪತಿ ಡಾ. ಎಸ್. ವಿದ್ಯಾಶಂಕರ್, ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಬೆಂಗಳೂರು ಪ್ರಾಂಶುಪಾಲ ಡಾ. ಎಚ್.ಬಿ. ಬಾಲಕೃಷ್ಣ, ಅಂತರಾಷ್ಟ್ರೀಯ ಕ್ರೀಡಾಪಟು ನಿಹಾಲ್ ಜೋಯೆಲ್, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಆರ್. ಚೇತನ್, ಕಲ್ಪತರು ವಿದ್ಯಾ ಸಂಸ್ಥೆ ಅಧ್ಯಕ್ಷ ಪಿ.ಕೆ. ತಿಪ್ಪೇರುದ್ರಪ್ಪ, ಉಪಾಧ್ಯಕ್ಷ ಬಾಗೇಪಲ್ಲಿ ನಟರಾಜು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಗ್ರಾಮದೇವತೆ ಶ್ರೀ ಕೆಂಪಮ್ಮ ದೇವಸ್ಥಾನದಿಂದ ಕಾಲೇಜಿನ ಕ್ರೀಡಾಂಗಣದವರೆಗೆ ವಿವಿಧ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಕ್ರೀಡಾಜ್ಯೋತಿ ಮೆರವಣಿಗೆ ನಡೆಯಿತು. ನೂರಾರು ವಿದ್ಯಾರ್ಥಿಗಳು ಹಾಗೂ ಕ್ರೀಡಾಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ವರದಿ :ಮಂಜುನಾಥ್ ಹಾಲ್ಕುರಿಕೆ






