Spread the love

ತಿಪಟೂರು: ಸರ್ಕಾರವು ನೋಂದಣಿ ಹಾಗೂ ಮುದ್ರಾಂಕ ಇಲಾಖೆಯ ಸೇವೆಗಳನ್ನು ಸರಳೀಕರಣಗೊಳಿಸುವ ಉದ್ದೇಶದಿಂದ ಜಾರಿಗೆ ತಂದಿರುವ ಪೇಪರ್‌ಲೆಸ್ ತಂತ್ರಾಂಶ ಸಾರ್ವಜನಿಕರಿಗೆ ಅತ್ಯಂತ ಅನುಕೂಲಕರವಾಗಿದೆ ಎಂದು ಜಿಲ್ಲಾನೊಂದಣಾಧಿಕಾರಿ ಬಿ.ಶ್ರೀಕಾಂತ್ .
ನಗರದ ಮುದ್ರಾಂಕ ಹಾಗೂ ಉಪನೊಂದಣಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಪೇಪರ್‌ಲೆಸ್ ನೋಂದಣಿ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರವು ಮುದ್ರಾಂಕ ಹಾಗೂ ನೋಂದಣಿ ಇಲಾಖೆಯ ಸೇವೆಗಳನ್ನು ಡಿಜಿಟಲೀಕರಣಗೊಳಿಸುವ ಮೂಲಕ ವೇಗವಾದ ಹಾಗೂ ಪಾರದರ್ಶಕ ಸೇವೆ ಒದಗಿಸುವ ಉದ್ದೇಶ ಹೊಂದಿದೆ ಎಂದು ತಿಳಿಸಿದರು.


ಪೇಪರ್‌ಲೆಸ್ ವ್ಯವಸ್ಥೆಯಿಂದ ಸ್ವತ್ತುಗಳ ನೋಂದಣಿ ಪ್ರಕ್ರಿಯೆ ಸುಲಭವಾಗಲಿದ್ದು, ಅನಗತ್ಯ ಕಾಲವಿಳಂಬ ತಪ್ಪಲಿದೆ. ಸಿಟಿಜನ್ ಲಾಗಿನ್ ಮೂಲಕ ಸಾರ್ವಜನಿಕರು ನೇರವಾಗಿ ನೋಂದಣಿ ಇಲಾಖೆಯ ಸೇವೆಗಳನ್ನು ಬಳಸಿಕೊಳ್ಳಬಹುದಾಗಿದೆ. ಇದರಿಂದ ಮಧ್ಯವರ್ತಿಗಳ ಹಾವಳಿ ಹಾಗೂ ನಕಲಿ ದಾಖಲೆಗಳ ಸಮಸ್ಯೆ ತಪ್ಪಲಿದೆ. ನೋಂದಣಿಯಾದ ದಸ್ತಾವೇಜುಗಳನ್ನು ಫಲಾನುಭವಿಯೇ ನೇರವಾಗಿ ಪಡೆಯುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.
ಸರ್ಕಾರದ ನಿರ್ದೇಶನದಂತೆ ಸಾರ್ವಜನಿಕರು, ಪತ್ರಮುದ್ರಕರು, ದಸ್ತಾವೇಜು ಬರಹಗಾರರು, ವಕೀಲರು ಸೇರಿದಂತೆ ಎಲ್ಲರಿಗೂ ಪೇಪರ್‌ಲೆಸ್ ನೋಂದಣಿ ತಂತ್ರಾಂಶದ ಕುರಿತು ಮಾಹಿತಿ ಹಾಗೂ ತರಬೇತಿ ನೀಡಲಾಗುತ್ತಿದೆ. ಇಲಾಖೆಯ ಡಿಜಿಟಲೀಕರಣದಿಂದ ಸಾರ್ವಜನಿಕರಿಗೆ ವೇಗವಾಗಿ ಮತ್ತು ಸುಗಮವಾಗಿ ಸೇವೆ ನೀಡಲು ಸಾಧ್ಯವಾಗಿದ್ದು, ಸಾರ್ವಜನಿಕರು ಈ ತಂತ್ರಾಂಶದ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಉಪನೊಂದಣಾಧಿಕಾರಿ ಲಕ್ಷ್ಮಿಕಾಂತ್ ಆರ್. ಲಕೊಂಡ, ಪತ್ರಬರಹಗಾರರ ಸಂಘದ ಪದಾಧಿಕಾರಿಗಳು, ಸೈಬರ್ ಸೆಂಟರ್ ಹಾಗೂ ಆಪರೇಟರ್ ಸಂಘದ ಪದಾಧಿಕಾರಿಗಳು, ಸಾರ್ವಜನಿಕರು ಹಾಗೂ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

ವರದಿ :ಮಂಜುನಾಥ್ ಹಾಲ್ಕುರಿಕೆ

error: Content is protected !!