Spread the love

ತಿಪಟೂರು: ನಗರದ ಹೃದಯಭಾಗವಾಗಿರುವ ದೊಡ್ಡಪೇಟೆ ಹಾಗೂ ರೈಲ್ವೆ ಸ್ಟೇಷನ್ ರಸ್ತೆಗಳ ಅಗಲೀಕರಣಕ್ಕೆ ಸರ್ಕಾರದಿಂದ ಅಧಿಕೃತ ಆದೇಶ ಬಂದಿದ್ದು, ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಶಾಸಕ ಕೆ. ಷಡಕ್ಷರಿ ಸ್ಪಷ್ಟಪಡಿಸಿದರು.
ನಗರದ ಆಡಳಿತ ಸೌಧದ ಸಭಾಂಗಣದಲ್ಲಿ ರಸ್ತೆ ಸುರಕ್ಷತೆ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಟೂಡ ನಿಯಮದಡಿ 40 ಅಡಿ ರಸ್ತೆ ಅಗಲೀಕರಣಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ ನಗರ ಸೌಂದರ್ಯಕ್ಕೆ ಧಕ್ಕೆಯಾಗದಂತೆ ಹಾಗೂ ವ್ಯಾಪಾರಸ್ಥರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು 30 ಅಡಿ ಅಗಲೀಕರಣದ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.


ದೊಡ್ಡಪೇಟೆ ರಸ್ತೆಯನ್ನು ಏಕಮುಖ ಸಂಚಾರ ಮಾರ್ಗವನ್ನಾಗಿ ಮಾಡುವಂತೆ ಈಗಾಗಲೇ ಸೂಚನೆ ನೀಡಿದ್ದರೂ, ಪೊಲೀಸ್ ಇಲಾಖೆ ಹಾಗೂ ನಗರಸಭೆ ಇದುವರೆಗೆ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳದಿರುವುದಕ್ಕೆ ಶಾಸಕ ಅಸಮಾಧಾನ ವ್ಯಕ್ತಪಡಿಸಿದರು. ನಿರಂತರ ವಾಹನ ದಟ್ಟಣೆಯಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಕುರಿತು ತಕ್ಷಣ ಕ್ರಮಕೈಗೊಳ್ಳಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ರಸ್ತೆ ಸುರಕ್ಷತೆ ವಿಷಯದಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿದ ಶಾಸಕ ಷಡಕ್ಷರಿ, ನಿಮ್ಮ ಬೇಜವಾಬ್ದಾರಿಯಿಂದ ಅಮಾಯಕರು ಪ್ರಾಣ ಕಳೆದುಕೊಳ್ಳುವಂತಾಗಬಾರದು ಎಂದು ಕಿಡಿಕಾರಿದರು. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಕಡ್ಡಾಯವಾಗಿ ಸಭೆಗೆ ಹಾಜರಾಗುವಂತೆ ತಾಕೀತು ಮಾಡಿದರು.
ತಾಲ್ಲೂಕಿನ ಕೊನೇಹಳ್ಳಿ ಗಡಿಭಾಗದ ಬಳಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ಅಗತ್ಯ ಸೂಚನಾ ಫಲಕಗಳ ಕೊರತೆ ಇದೆ. ಕಾಮಗಾರಿಯನ್ನು ಅಸ್ತವ್ಯಸ್ತವಾಗಿ ನಿರ್ವಹಿಸಲಾಗುತ್ತಿರುವುದರಿಂದ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ಅವರು ಎಚ್ಚರಿಸಿದರು.


ಪೊಲೀಸ್ ಇಲಾಖೆ ರಸ್ತೆ ಸುರಕ್ಷತಾ ನಿಯಮಗಳಿಗೆ ಅತ್ಯಧಿಕ ಆದ್ಯತೆ ನೀಡಬೇಕು. ಬೈಕ್ ವೀಲಿಂಗ್ ಹಾಗೂ ಸೈಲೆನ್ಸರ್ ಸೆಟಿಂಗ್ ಮಾಡಿದ ವಾಹನಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸುವ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ತಕ್ಷಣ ಸೂಚನಾ ಫಲಕಗಳನ್ನು ಅಳವಡಿಸಬೇಕು. ತಾಲ್ಲೂಕಿನ ವಿವಿಧ ರಸ್ತೆಗಳಲ್ಲಿ ಅಪಘಾತ ವಲಯಗಳನ್ನು ಗುರುತಿಸಿ ರಸ್ತೆ ಸೂಚನಾ ಫಲಕಗಳು ಹಾಗೂ ಸ್ಪೀಡ್ ಬ್ರೇಕರ್‌ಗಳನ್ನು ನಿರ್ಮಿಸುವಂತೆ ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಶ್ರೀ ಕಲ್ಲೇಶ್ವರಸ್ವಾಮಿ ದೇವಾಲಯದ ಭೂಮಿಯಲ್ಲಿ ಶುಲ್ಕ ಆಧಾರಿತ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ತರುವಂತೆ ತಹಸೀಲ್ದಾರ್ ಮೋಹನ್ ಕುಮಾರ್ ಅವರಿಗೆ ಸೂಚನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ತಿಪಟೂರು ಪೊಲೀಸ್ ಡಿವೈಎಸ್ಪಿ ಯಶ್ ಕುಮಾರ್ ಶರ್ಮ, ರಸ್ತೆ ಅಪಘಾತಗಳು ಹೆಚ್ಚಾಗಲು ಸಂಚಾರ ನಿಯಮಗಳ ಉಲ್ಲಂಘನೆಯೇ ಪ್ರಮುಖ ಕಾರಣ ಎಂದು ತಿಳಿಸಿದರು. 2023ರಲ್ಲಿ 114 ಪ್ರಕರಣಗಳು ದಾಖಲಾಗಿದ್ದು, 119 ಮಂದಿ ಮೃತಪಟ್ಟಿದ್ದಾರೆ ಹಾಗೂ 330 ಮಂದಿ ಗಾಯಗೊಂಡಿದ್ದಾರೆ. 2025ರಲ್ಲಿ ಇದುವರೆಗೆ 127 ಮಂದಿ ಸಾವನ್ನಪ್ಪಿದ್ದು, 332 ಮಂದಿ ಗಾಯಗೊಂಡಿದ್ದಾರೆ ಎಂದು ಅಂಕಿ-ಅಂಶಗಳನ್ನು ಮಂಡಿಸಿದರು.
ಗ್ರಾಮಾಂತರ ಠಾಣೆ ವೃತ್ತ ನಿರೀಕ್ಷಕ ಚಂದ್ರಶೇಖರ್ ಮಾತನಾಡಿ, ರಸ್ತೆ ಸುರಕ್ಷತಾ ನಿಯಮಗಳ ಪಾಲನೆ ಕಡ್ಡಾಯವಾಗಬೇಕು ಎಂದು ಹೇಳಿದರು. ಹೆಲ್ಮೆಟ್ ಬಳಕೆಯ ಕುರಿತು ಸರ್ಕಾರಿ ಅಧಿಕಾರಿಗಳು ಹಾಗೂ ಶಾಲಾ–ಕಾಲೇಜು ಪ್ರಾಂಶುಪಾಲರೊಂದಿಗೆ ಸಭೆ ನಡೆಸಲಾಗುತ್ತಿದೆ. ಪೊಲೀಸ್ ಸಿಬ್ಬಂದಿಗೂ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ. ನಿರಂತರ ವಾಹನ ತಪಾಸಣೆ ಹಾಗೂ ಜಾಗೃತಿ ಕಾರ್ಯಾಚರಣೆಗಳಿಂದ ಅಪಘಾತ ಪ್ರಮಾಣದಲ್ಲಿ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡುಬಂದಿದೆ ಎಂದು ಹೇಳಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಶ್ರೀಮತಿ ಸಪ್ತಶ್ರೀ, ಡಿವೈಎಸ್ಪಿ ಯಶ್ ಕುಮಾರ್ ಶರ್ಮ, ತಹಸೀಲ್ದಾರ್ ಮೋಹನ್ ಕುಮಾರ್, ಇಒ ಸುದರ್ಶನ್, ಗ್ರೇಡ್–2 ತಹಸೀಲ್ದಾರ್ ಜಗನ್ನಾಥ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!