Spread the love

ಬ್ಯಾಂಕ್‌ಗಳು ಗ್ರಾಹಕರೊಂದಿಗೆ ಸೌಹಾರ್ದಯುತವಾಗಿ ಉತ್ತಮ ವ್ಯವಹಾರ ನಡೆಸಬೇಕು: ಶ್ರೀ ಶಶಿಶೇಖರ ಸಿದ್ದಬಸವ ಶಿವಾಚಾರ್ಯ ಸ್ವಾಮೀಜಿ ಕರೆ
ತಿಪಟೂರು: ದೇಶದ ಅಭಿವೃದ್ಧಿಯಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳಂತೆ ಖಾಸಗಿ ಬ್ಯಾಂಕ್‌ಗಳ ಸೇವೆಯೂ ಅನನ್ಯವಾಗಿದೆ. ಗ್ರಾಹಕರಿಗೆ ಉತ್ತಮ ಸೇವೆ ನೀಡುವುದರ ಮೂಲಕ ಆರ್ಥಿಕ ವಹಿವಾಟು ವಿಸ್ತರಿಸಬೇಕು ಎಂದು ಅರಸೀಕೆರೆ ಮೆಟಿಕುರ್ಕೆ ಬೂದಾಳು ವಿರಕ್ತ ಮಠದ ಪೀಠಾಧ್ಯಕ್ಷರಾದ ಶ್ರೀ ಶಶಿಶೇಖರ ಸಿದ್ದಬಸವ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.


ನಗರದ ಹಾಲ್ಕುರಿಕೆ ರಸ್ತೆ ಪ್ರದ್ಯುತ್ ಆರ್ಕೇಡ್‌ನಲ್ಲಿ ನೂತನವಾಗಿ ಪ್ರಾರಂಭಗೊಂಡ ಸಮರ್ಥ ನಿಧಿ ಲಿಮಿಟೆಡ್ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಣಕಾಸು ಸಂಸ್ಥೆಗಳು ಆರ್ಥಿಕವಾಗಿ ಬೆಳವಣಿಗೆ ಸಾಧಿಸಲು ಗ್ರಾಹಕರೊಂದಿಗೆ ನಂಬಿಕೆ ಹಾಗೂ ಸೌಜನ್ಯಯುತ ವ್ಯವಹಾರಿಕ ಬಾಂಧವ್ಯ ಬಹಳ ಮುಖ್ಯವಾಗಿದೆ. ನೂತನ ಶಾಖೆ ಜನರ ನಂಬಿಕೆ ಉಳಿಸಿಕೊಂಡು ಉತ್ತಮವಾಗಿ ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಬಿಜೆಪಿ ಮುಖಂಡ ಲೋಕೇಶ್ವರ್ ಮಾತನಾಡಿ, ಹಣಕಾಸು ಸಂಸ್ಥೆಗಳು ಅಭಿವೃದ್ಧಿ ಹೊಂದಲು ಗ್ರಾಹಕರೊಂದಿಗೆ ಉತ್ತಮ ವ್ಯವಹಾರ ನಡೆಸುವುದು ಅಗತ್ಯವಾಗಿದೆ. ಸಂಸ್ಥೆಯ ನಿಯಮಗಳಂತೆ ಗ್ರಾಹಕರು ನಿಗದಿತ ಅವಧಿಯಲ್ಲಿ ಮರುಪಾವತಿ ಮಾಡಬೇಕು. ಆರ್ಥಿಕ ಸಂಕಷ್ಟದಲ್ಲಿರುವ ಗ್ರಾಹಕರಿಗೆ ನೆರವು ನೀಡಿ ಅವರ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಬೇಕು ಎಂದು ಹೇಳಿದರು.


ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ್ ಮಾತನಾಡಿ, ಖಾಸಗಿ ಹಣಕಾಸು ಸಂಸ್ಥೆಗಳು ಅಭಿವೃದ್ಧಿ ಸಾಧಿಸಲು ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಬೇಕು. ಕೇವಲ ಹಣ ಗಳಿಕೆಯೇ ಮಾನದಂಡವಾಗದೆ ಮಾನವೀಯತೆ ಮರೆಯಬಾರದು. ಕೆನರಾ ಬ್ಯಾಂಕ್ ಸೇರಿದಂತೆ ಅನೇಕ ಬ್ಯಾಂಕ್‌ಗಳನ್ನು ಮಂಗಳೂರು ಮೂಲದ ವ್ಯಕ್ತಿಗಳು ಸ್ಥಾಪಿಸಿ ದೇಶದ ಪ್ರಗತಿಗೆ ಕೊಡುಗೆ ನೀಡಿದ್ದಾರೆ. ಸಮರ್ಥ ನಿಧಿ ಲಿಮಿಟೆಡ್ ಕಲ್ಪತರುನಾಡಿನಲ್ಲಿ ಗ್ರಾಹಕರಿಗೆ ಉತ್ತಮ ಹಣಕಾಸು ಸೇವೆ ನೀಡುತ್ತಾ ಸಂಸ್ಥೆಯೂ ಅಭಿವೃದ್ಧಿ ಹೊಂದಬೇಕು ಎಂದು ಹೇಳಿದರು.
ಶಾಖಾ ವ್ಯವಸ್ಥಾಪಕ ಸಿದ್ದೇಶ್ ಮಾತನಾಡಿ, ನಮ್ಮ ಸಂಸ್ಥೆಗೆ ಮಂಗಳೂರು, ಶಿವಮೊಗ್ಗ ಸೇರಿದಂತೆ ಅನೇಕ ಸ್ಥಳಗಳಲ್ಲಿ ಶಾಖೆಗಳಿದ್ದು, ಗ್ರಾಹಕರಿಗೆ ಉತ್ತಮ ಹಣಕಾಸು ಸೇವೆ ನೀಡಲಾಗುತ್ತಿದೆ. ತಿಪಟೂರಿನಲ್ಲಿ ಹೊಸ ಶಾಖೆ ಆರಂಭಗೊಂಡಿದ್ದು, ಗ್ರಾಹಕರ ವಿಶ್ವಾಸ ಉಳಿಸುವ ದಿಸೆಯಲ್ಲಿ ಕಾರ್ಯನಿರ್ವಹಿಸಲಾಗುವುದು ಎಂದು ತಿಳಿಸಿದರು.
ಶಾಸಕ ಕೆ. ಶಡಕ್ಷರಿ ಭೇಟಿ ನೀಡಿ ಸಮರ್ಥ ನಿಧಿ ಲಿಮಿಟೆಡ್ ಶಾಖೆಯ ಉದ್ಘಾಟನೆಯನ್ನು ನೆರವೇರಿಸಿದರು. ಕೆಪಿಸಿಸಿ ಸದಸ್ಯ ವಿ. ಯೋಗೇಶ್ ಸೇರಿದಂತೆ ಅನೇಕ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಪಿಯು ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ಟೈಮ್ಸ್ ಪಿಯು ಕಾಲೇಜಿನ ವಿದ್ಯಾರ್ಥಿನಿ ರಶ್ಮಿ ಹಾಗೂ ಪ್ರಾಂಶುಪಾಲರಾದ ಪ್ರದೀಪ್ ಅವರನ್ನು ಸನ್ಮಾನಿಸಲಾಯಿತು.

ವರದಿ :ಮಂಜುನಾಥ್ ಹಾಲ್ಕುರಿಕೆ

error: Content is protected !!